ಮಂಡ್ಯ ವಿವಿ ವಿಲೀನ ವಿರೋಧಿಸಿ ಬಿಜೆಪಿ-ಜೆಡಿಎಸ್ ಧರಣಿ

ಮಂಡ್ಯ : ಮಂಡ್ಯ ವಿಶ್ವವಿದ್ಯಾನಿಲಯವನ್ನು ಮೈಸೂರು ವಿವಿ ಜತೆ ವಿಲೀನಗೊಳಿಸುವುದನ್ನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.
ಹಣವಿಲ್ಲವೆಂದು ರಾಜ್ಯದ 9 ವಿವಿಗಳನ್ನು ರಾಜ್ಯ ಸರಕಾರ ಮುಚ್ಚುವುದು ಸರಿಯಲ್ಲ. ಭಿಕ್ಷೆ ಬೇಡಿಯಾದರೂ ವಿವಿ ಉಳಿಸಿಕೊಳ್ಳಿ ಎಂದು ಭಿಕ್ಷೆ ಬೇಡುವ ಮೂಲಕ ರಾಜ್ಯ ಸರಕಾರವನ್ನು ಧರಣಿನಿರತರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ವಿಪಕ್ಷ ನಾಯಕ ಆರ್.ಅಶೋಕ್, ಸರಕಾರ ದಿವಾಳಿಯಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದಕ್ಕಾಗಿ ವಿವಿಗಳನ್ನು ಮುಚ್ಚಲಾಗುತ್ತಿದೆ ಎಂದು ಆರೋಪಿಸಿದರು.
ಶೈಕ್ಷಣಿಕವಾಗಿ ಹಿಂದುಳಿದ ಕಾರಣಕ್ಕೆ ಚಾಮರಾಜನಗರ, ಮಂಡ್ಯದಂತಹ ಜಿಲ್ಲೆಗಳಲ್ಲಿ ನಮ್ಮ ಸರಕಾರ ಹೊಸ ವಿವಿ ತೆರೆದಿತ್ತು. ಆದರೆ, ಕಾಂಗ್ರೆಸ್ ಸರಕಾರ ಈ ವಿವಿಗಳನ್ನು ಮುಚ್ಚುವ ಮೂಲಕ ಶಿಕ್ಷಣ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಅವರು ಟೀಕಿಸಿದರು.
ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಸಚಿವ ನಾರಾಯಣಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದಿರೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಸೇರಿದಂತೆ ಹಲವು ಮುಖಂಡರು ಧರಣಿಯಲ್ಲಿ ಭಾಗವಹಿಸಿದ್ದರು.