ಬೆಳಗಾವಿ ಸಮಾವೇಶದಲ್ಲಿ ನಕಲಿ ಗಾಂಧಿಗಳ ವಿಜೃಂಭಣೆ ನಡೆಯುತ್ತಿದೆ : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕೆ
ಮಂಡ್ಯ : ಬೆಳಗಾವಿಯಲ್ಲಿ ಜನರ ತೆರಿಗೆ ದುಡ್ಡಿನಲ್ಲಿ ನಕಲಿ ಗಾಂಧಿಗಳ ವಿಜೃಂಭಣೆ ನಡೆಯುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ನಗರದಲ್ಲಿ ಗುರುವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಗಾಂಧೀಜಿ ಶತಮಾನೋತ್ಸವ ಕಾರ್ಯಕ್ರಮ ಮಾಡುತ್ತಿದೆ ಸರಕಾರ. ಆದರೆ, ಅಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ, ಕಟೌಟ್‍ಗಳಲ್ಲಿ ಗಾಂಧೀಜಿ ಫೋಟೋ ನೋಡಲಿಲ್ಲ. ನಕಲಿ ಗಾಂಧಿಗಳ ಫೋಟೋಗಳು ಇರುವ ಕಟೌಟ್‍ಗಳನ್ನು ಆಕಾಶದೆತ್ತರಕ್ಕೆ ಹಾಕಿದ್ದಾರೆ ಎಂದು ಆರೋಪಿಸಿದರು.
ಈಗ ಇರುವುದು ಅಸಲಿ ಕಾಂಗ್ರೆಸ್ ಅಲ್ಲ, ನಕಲಿ ಕಾಂಗ್ರೆಸ್. ಬೆಳಗಾವಿಯಲ್ಲಿ ಕಾರ್ಯಕ್ರಮ ಮಾಡುತ್ತಿರುವುದು ಅದೇ ನಕಲಿ ಕಾಂಗ್ರೆಸ್. ಸ್ವಾತಂತ್ರ್ಯಗಳಿಸಿದ ಮೇಲೆ ಕಾಂಗ್ರೆಸ್ ಅನ್ನು ವಿಸರ್ಜನೆ ಮಾಡಿ ಎಂದು ಸ್ವತಃ ಮಹಾತ್ಮ ಗಾಂಧೀಜಿ ಅವರು ಆಗಲೇ ಹೇಳಿದ್ದರು. ಅವರ ಕಾಂಗ್ರೆಸ್ ಈಗಿಲ್ಲ. ಈಗ ಇರುವುದು ಆಲಿಬಾಬ ಮತ್ತು 40 ಮಂದಿ ಕಳ್ಳರ ಕಾಂಗ್ರೆಸ್ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಗಾಂಧೀಜಿ ಅವರ ಹೆಸರಲ್ಲಿ ಕಾರ್ಯಕ್ರಮ ಮಾಡಲು ನನ್ನ ತಕರಾರಿಲ್ಲ. ಗಾಂಧೀಜಿ ಅವರ ರಾಮರಾಜ್ಯದ ಪರಿಕಲ್ಪನೆ ಇವತ್ತು ರಾಜ್ಯದಲ್ಲಿ ಸಾಕಾರ ಆಗಿದೆಯಾ? 15ನೇ ಹಣಕಾಸು ಆಯೋಗದ ಅನುದಾನದ ಮೂಲಕ ಗ್ರಾಮಗಳ ಅಭಿವೃದ್ಧಿಗಾಗಿ ಪಂಚಾಯಿತಿಗಳಿಗೆ ಕೇಂದ್ರ ಸರಕಾರ ಬಿಡುಗಡೆ ಮಾಡಿರುವ 448.29 ಕೋಟಿ ರೂ. ಬಳಕೆ ಮಾಡಿಲ್ಲ. ಈ ಹಣ ಬಿಡುಗಡೆಯಾಗಿ ಹಲವಾರು ತಿಂಗಳೇ ಕಳೆದಿದ್ದರೂ ಇನ್ನೂ ಪಂಚಾಯತಿಗಳಿಗೆ ಆ ಹಣ ಹೋಗಿಲ್ಲ ಎಂದು ಅವರು ದೂರಿದರು.
ಸರಕಾರ ಪ್ರತಿದಿನವೂ ಗ್ಯಾರಂಟಿ ಗ್ಯಾರಂಟಿ ಎನ್ನುತ್ತಿದೆ. ಜನರಿಗೆ ಇನ್ನೂ ಎರಡು ಸಾವಿರ ರೂಪಾಯಿ ಕೊಡಲಿ, ನಮ್ಮ ಅಭ್ಯಂತವಿಲ್ಲ. ಆದರೆ, ಮಿತಿ ಮೀರಿದ ತೆರಿಗೆ ಹೇರಿಕೆ ಮಾಡುತ್ತಿದ್ದಾರೆ. ಎರಡು ಲಕ್ಷ ಕೋಟಿ ರೂಪಾಯಿ ಸಾಲ ಮಾಡಿ ಎರಡು ಸಾವಿರ ರೂಪಾಯಿ ಕೊಡಲಿಕ್ಕೆ ಇವರೇ ಬೇಕಾ? ಬೇಕಾಬಿಟ್ಟಿಯಾಗಿ ಆ ಸಾಲ ತೀರಿಸುವವರು ಯಾರು? ಜನ ಸಾಮಾನ್ಯರೇ ಆ ಸಾಲ ತೀರಿಸಬೇಕಲ್ವಾ? ಎಂದು ಅವರು ವಾಗ್ದಾಳಿ ನಡೆಸಿದರು.
ಹೆಬ್ಬೆಟ್ಟು ಗೃಹ ಸಚಿವರು :
ರಾಜ್ಯ ಸರಕಾರ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಪ್ರಕರಣ ನಿರ್ವಹಿಸಿದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ರಾಜ್ಯದಲ್ಲಿ ಹೆಬ್ಬೆಟ್ಟು ಗೃಹ ಸಚಿವರು ಇದ್ದಾರೆ. ತಮ್ಮ ಇಲಾಖೆಯಲ್ಲಿ ಏನು ನಡೆಯುತ್ತಿದೆ ಎನ್ನುವುದು ಸ್ವತಃ ಅವರಿಗೇ ಗೊತ್ತಿಲ್ಲ ಎಂದು ಟೀಕಿಸಿದರು.
ಸಿ.ಟಿ.ರವಿ ಅವರನ್ನು ಭೇಟಿ ಮಾಡಲು ಪೊಲೀಸ್ ಸ್ಟೇಷನ್‍ಗೆ ಬಂದ ಬಿಜೆಪಿ ನಾಯಕರಿಗೆ ಕೂತು ಮಾತನಾಡಲು ಅವಕಾಶ ಕೊಟ್ಟರು ಎಂದು ಪೆÇಲೀಸ್ ಅಧಿಕಾರಿಯನ್ನು ರಾಜ್ಯ ಸರಕಾರ ಸಸ್ಪೆಂಡ್ ಮಾಡಿದೆ. ಆದರೆ, ಸಿ.ಟಿ.ರವಿ ತಲೆ ಹೊಡೆದು ರಕ್ತ ಬರುವಂತೆ ಮಾಡಿದವರ ವಿರುದ್ಧ ಕ್ರಮ ಏನು? ಎಂದು ಅವರು ಪ್ರಶ್ನಿಸಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ಎಚ್.ಟಿ.ಮಂಜುನಾಥ್, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಬಿ.ಆರ್.ರಾಮಚಂದ್ರ, ಜೆಡಿಎಸ್‍ನ ಇತರೆ ಮುಖಂಡರು ಉಪಸ್ಥಿತರಿದ್ದರು.