ಕನ್ನಡ ಸಾಹಿತ್ಯ ಸಮ್ಮೇಳನ | ಊಟದ ಮೆನುವಿನಲ್ಲಿ ಮಾಂಸಹಾರಕ್ಕೆ ಪಟ್ಟು ಹಿಡಿದ ʼಬಾಡೂಟ ಬಳಗʼ

Update: 2024-12-08 17:49 GMT

ಮಂಡ್ಯ: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಊಟದ ಮೆನುವಿನಲ್ಲಿ ಮಾಂಸಹಾರವು ಇರಬೇಕೆಂದು ಪಟ್ಟು ಹಿಡಿದಿರುವ ವಿವಿಧ ಸಂಘಟನೆಗಳ ಮುಖಂಡರು ತಮ್ಮ ಮನವಿಗೆ ಸ್ಪಂದಿಸದಿದ್ದರೆ ತಾವೇ ಬಾಡೂಟ ಹಾಕುದಾಗಿ ತೀರ್ಮಾನಿಸಿದ್ದಾರೆ‌.

ಈ ಸಂಬಂಧ ರವಿವಾರ ಸಂಘಟನೆಗಳ ಒಕ್ಕೂಟವಾದ ಬಾಡೂಟ ಬಳಗದ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು ನಾಳೆ ಸೋಮವಾರ ಜಿಲ್ಲಾಧಿಕಾರಿಗೆ ತಮ್ಮ ತೀರ್ಮಾನವನ್ನು ತಿಳಿಸಲು ತೀರ್ಮಾನಿಸಿತು.

ಸಸ್ಯಾಹಾರದ ಜೊತೆಗೆ ಮಾಂಸಾಹಾರವು ದೊರೆಯುವಂತಾಗಬೇಕು, ಆ ಮೂಲಕ ಮಂಡ್ಯ ನೆಲದ ಆಹಾರ ಸಂಸ್ಕೃತಿಯನ್ನು ಗೌರವಿಸುವ ಕೆಲಸವನ್ನು ಮಂಡ್ಯ ಜಿಲ್ಲಾಡಳಿತ, ರಾಜ್ಯ ಸರಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಮಾಡಬೇಕೆಂದು ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಒಕ್ಕೊರಲ ತೀರ್ಮಾನಕ್ಕೆ ಬಂದರು.

ಮಾಂಸಾಹಾರ ಬೇಕು ಎಂಬುದು ಕೇವಲ ಆಹಾರಕ್ಕಾಗಿಯಲ್ಲ, ಬಹುಜನರ ಆಹಾರ ಸಂಸ್ಕೃತಿಯನ್ನು ಎತ್ತಿ ಹಿಡಿಯುದಕ್ಕಾಗಿ ಎಂಬುದನ್ನು ಸಾಹಿತ್ಯ ಸಮ್ಮೇಳನದ ಸಂಘಟಕರು ಅರ್ಥಮಾಡಿಕೊಳ್ಳಬೇಕೆಂದು ಮುಖಂಡರು ಹೇಳಿದರು.

ಇದುವರೆಗೆ ನಡೆದ 86 ಸಮ್ಮೇಳನಗಳಲ್ಲಿ ಮಾಂಸಾಹಾರವನ್ನು ನೀಡದೇ ಬಹುಜನರ ಆಹಾರ ಸಂಸ್ಕೃತಿಯನ್ನು ಅವಮಾನಿಸಲಾಗಿದ್ದು, ಮಾಂಸಾಹಾರ ನಿಷೇಧವನ್ನು ವಾಪಸ್‌ ಪಡೆದು ಆಹಾರ ಸಂಸ್ಕೃತಿಯನ್ನು ಗೌರವಿಸಬೇಕೆಂದು ಅವರು ಒತ್ತಾಯಿಸಿದರು.

ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಮತ್ತು ಸಸ್ಯಾಹಾರಿ ಊಟ ಎರಡೂ ಇರಲಿ. ಯಾವುದನ್ನು ತಿನ್ನಬೇಕು ಎಂಬುದನ್ನು ಜನರ ವಿವೇಚನೆ ಬಿಡಬೇಕು. ಸಸ್ಯಹಾರವೇ ಶ್ರೇಷ್ಠ ಎಂಬ ಹಲವು ದಶಕಗಳ ಹೇರಿಕೆಯನ್ನು ಮಂಡ್ಯ ಸಮ್ಮೇಳನದಲ್ಲಿ ಸುಳ್ಳಾಗಿಸುವ ಮೂಲಕ ಮಾಂಸಾಹಾರಕ್ಕೂ ಅವಕಾಶ ನೀಡಬೇಕೆಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಮಂಡ್ಯ ನೆಲದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಮಾಂಸಾಹಾರದ ಆಯ್ಕೆ ಇರದಿದ್ದರೆ ಮನೆ ಮನೆಯಲ್ಲಿ ಕೋಳಿಗಳನ್ನು ಸಂಗ್ರಹಿಸಿ ಪರ್ಯಾಯವಾಗಿ ಬಾಡೂಟ ಪ್ರಿಯಯರಿಗೆ ಮಂಡ್ಯ ಶೈಲಿಯ ನಾಟಿ ಕೋಳಿ, ಬೋಟಿ ಗೊಜ್ಜು, ಮುದ್ದೆ ಊಟ ನೀಡುವುದಾಗಿ ಎಚ್ಚರಿಕೆ ನೀಡಲಾಯಿತು.

ಸಭೆಯಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ಸಿಐಟಿಯುನ ಸಿ.ಕುಮಾರಿ, ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷ ಎಲ್.ಸಂದೇಶ್‌, ಕರ್ನಾಟಕ ಜನಶಕ್ತಿಯ ಪೂರ್ಣಿಮ, ಗ್ರಾಪಂ ಸದಸ್ಯರ ಒಕ್ಕೂಟದ ನಾಗೇಶ್, ಕರುನಾಡ ಸೇವಕರು ಸಂಘಟನೆಯ ನಾಗಣ್ಣಗೌಡ, ಕ್ಷೀರಸಾಗರ ಮಿತ್ರಕೂಟದ ಕೀಲಾರ ಕೃಷ್ಣಗೌಡ, ಸುರೇಶ್‌, ಚಿತ್ರಕೂಟದ ಅರವಿಂದ ಪ್ರಭು, ಜಾಗೃತ ಕರ್ನಾಟಕದ ಸಂತೋಷ್‌, ನಗರಕೆರೆ ಜಗದೀಶ್, ನೆಲದನಿ ಬಳಗದ ಲಂಕೇಶ್, ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಸಮಾನ ಮನಸ್ಕರ ವೇದಿಕೆಯ ನರಸಿಂಹಮೂರ್ತಿ, ಟಿ.ಡಿ.ನಾಗರಾಜು, ಶೋಷಿತರ ಒಕ್ಕೂಟದ ಸುಂಡಹಳ್ಳಿ ಮಂಜುನಾಥ್‌, ಮುಖಂಡರಾದ ಚಿನಕುರಳಿ ರಮೇಶ್‌, ಸಿ.ಎಂ.ದ್ಯಾವಪ್ಪ, ತಿರುಮಲಾಪುರ ನಾರಾಯಣ್, ವಕೀಲ ಚೀರನಹಳ್ಳಿ ಲಕ್ಷ್ಮಣ್, ಜಿ.ಎನ್‌.ಕೆಂಪರಾಜು, ಸಬ್ಬನಹಳ್ಳಿ ಶಶಿಧ‌ರ್ ಸೇರಿದಂತೆ ಇತರೆ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News