ಪ್ರಧಾನಿ ಮೋದಿಯವರದ್ದು ಬರೀ ಮನ್ ಕಿ ಬಾತ್; ಆ ಬಾತ್ ನಲ್ಲೂ ದೇಶದ ಜನ ಇರೋದಿಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

Update: 2023-08-14 11:58 GMT

ಬೆಂಗಳೂರು: ʼʼನಾನು ನನ್ನ ಅನುಭವದಿಂದ ಹೇಳ್ತಾ ಇದ್ದೇನೆ. ಯಾವುದೇ ಉತ್ಪ್ರೇಕ್ಷೆ ಇಲ್ಲದೆ ಹೇಳುತ್ತೇನೆ. 2024 ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸೋಲುತ್ತದೆ. ಈ ಪ್ರಧಾನಿ ಮೋದಿ ಪಾರ್ಲಿಮೆಂಟ್ ಗೆ ಸರಿಯಾಗಿ ಹೋಗಲ್ಲ, ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸಲ್ಲ. ಬರೀ ಮನ್ ಕಿ ಬಾತ್. ಆ ಬಾತ್ ನಲ್ಲೂ ದೇಶದ ಜನ ಇರೋದಿಲ್ಲʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ

ಕೆಪಿಸಿಸಿ ಕಚೇರಿಯ ಇಂದಿರಾಗಾಂಧಿ ಭವನದ ಭಾರತ್ ಜೋಡೋ ಸಭಾಂಗಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ʼʼದೇಶದ ಜನ‌ ನೆಮ್ಮದಿಯಾಗಿ, ಸಂತೋಷದಿಂದ ಇದ್ದರೆ ಬಿಜೆಪಿ ಗೆ ನೆಮ್ಮದಿ ಹಾಳಾಗುತ್ತದೆ. ಹೊಟ್ಟೆಕಿಚ್ಚು ಹೆಚ್ಚಾಗುತ್ತದೆ. ಈಗ ನಾವು ಬಿಜೆಪಿ ಕಾಲದ ಎಲ್ಲಾ ಹಗರಣಗಳು,ಭ್ರಷ್ಟಾಚಾರದ ತನಿಖೆ ಆರಂಭಿಸಿದ್ದೇವೆ. ಸದ್ಯದಲ್ಲೇ ಬಿಜೆಪಿ ಬೇಳೆಕಾಳು ಹೊರಗೆ ಬರುತ್ತದೆʼʼ ಎಂದು ಟೀಕಿಸಿದರು. 

ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಇಡೀ ದೇಶದ ಜನರ ಮತ್ತು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಭರವಸೆಯನ್ನು ಹೆಚ್ಚಿಸಿ ಸಂಚಲನ ಮೂಡಿಸಿದೆ. ಒಂದು ಕಡೆ RSS ಹಿಡನ್ ಅಜೆಂಡಾ ಜಾರಿಗೊಳಿಸುತ್ತಾ ಮತ್ತೊಂದು ಕಡೆ ಬೆಲೆ ಏರಿಕೆ, ಹಣದುಬ್ಬರ, ಭ್ರಷ್ಟಾಚಾರ, ದುರಾಡಳಿತದಿಂದ ನಾಡಿನ, ದೇಶದ ಜನತೆಯನ್ನು ವಿಪರೀತ ಸಂಕಷ್ಟಕ್ಕೆ ಸಿಲುಕಿಸಿದ್ದರು. ನಾಡಿನ ಜನ ಈ ಎಲ್ಲಾ ದುಷ್ಟಾಚಾರವನ್ನು ಸಮರ್ಥವಾಗಿ ಧಿಕ್ಕರಿಸಿ ಸೋಲಿಸಿದ್ದಾರೆ ಎಂದರು.

ʼʼಕನಿಷ್ಠ 20 ಲೋಕಸಭಾ ಸ್ಥಾನ ಗೆಲ್ತೀವಿʼʼ

ವಿಧಾನಸಭಾ ಚುನಾವಣೆ ಬಳಿಕ ನಮ್ಮ ಕಾರ್ಯಕರ್ತರು ರಿಲಾಕ್ಸ್ ಆಗಬಾರದು. ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆಲ್ತೀವಿ ಎಂದು ಹೈಕಮಾಂಡ್ ಗೆ ಭರವಸೆ ನೀಡಿದ್ದೀನಿ. ಇದಕ್ಕೂ ಹೆಚ್ಚು ಸೀಟು ಗೆಲ್ಲುತ್ತೀವಿ ಎಂದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News