ಗ್ಯಾರಂಟಿ ಹೆಸರಿನಲ್ಲಿ ಬಿಡಿಗಾಸು ಕೊಟ್ಟು ಕೋಟಿ ಕೋಟಿ ರೂ. ಲೂಟಿ: ರಾಜ್ಯ ಸರಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

Update: 2025-01-07 17:33 GMT

ಬೆಂಗಳೂರು: ‘ಭಂಡತನ ಏಕೆ? ಆಗಿರುವ ತಪ್ಪು ಸರಿಪಡಿಸಿಕೊಳ್ಳಿ. ವಿನಾಕಾರಣ ಸಮರ್ಥನೆ ಲಾಯಕ್ಕಲ್ಲ. ಗುತ್ತಿಗೆದಾರರ ಬದುಕು ಉಳಿಸಿ ರಾಜ್ಯದ ಅಭಿವೃದ್ಧಿ ಕಡೆಗೆ ಗಮನ ಹರಿಸಿ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರಕಾರಕ್ಕೆ ಸಲಹೆ ನೀಡಿದ್ದಾರೆ.

ಮಂಗಳವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಇದ್ದಿದ್ದನ್ನು ಇದ್ದಹಾಗೆ ಹೇಳಿದ್ದೇನೆ. ನೀವೂ, ನಿಮ್ಮ ಸಂಪುಟ ನನ್ನ ಮೇಲೆ ವಾಗ್ಯುದ್ಧಕ್ಕಿಳಿದರೆ ಉಪಯೋಗವೇನು? ಗುತ್ತಿಗೆದಾರರ ಬಾಕಿ ಪಾವತಿಗಿಂತ ನನ್ನನ್ನು ಟಾರ್ಗೆಟ್ ಮಾಡುವುದು ಮುಖ್ಯವಲ್ಲ. ದಾಖಲೆ ಕೊಡಿ ಎನ್ನುತ್ತಿದ್ದೀರಿ.. ಇಲ್ನೋಡಿ ಸಿದ್ದರಾಮಯ್ಯನವರೇ..ನಿಮ್ಮ ಖೊಟ್ಟಿ ಗ್ಯಾರಂಟಿ ಸರಕಾರದ ಲೂಟಿ ಸಾಕ್ಷಿಗುಡ್ಡೆ’ ಎಂದು ಪತ್ರಿಕಾ ವರದಿಯನ್ನು ಉಲ್ಲೇಖಿಸಿದ್ದಾರೆ.

‘ನಿಮ್ಮ ಸರಕಾರ ಗುತ್ತಿಗೆದಾರರನ್ನು ಎಷ್ಟು ನಿರ್ಲಜ್ಜವಾಗಿ ಸುಲಿಗೆ ಮಾಡುತ್ತಿದೆ ಎನ್ನುವುದಕ್ಕೆ ಈ ಸಾಕ್ಷಿಗುಡ್ಡೆ ಸಾಕ್ಷ್ಯ ಸಾಲದೇ ಮುಖ್ಯಮಂತ್ರಿಗಳೇ?, ಚೆಂಬು ಹಾಕಿ ಹಂಡೆ ಹೊಡೆದರು ಎನ್ನುವಂತೆ ಗ್ಯಾರಂಟಿ ಹೆಸರಿನಲ್ಲಿ ಬಿಡಿಗಾಸು ಕೊಟ್ಟು ಕೋಟಿ ಕೋಟಿ ರೂ.ಲೂಟಿ ಮಾಡುತ್ತಿದ್ದೀರಿ. ಗುತ್ತಿಗೆದಾರರ 32ಸಾವಿರ ಕೋಟಿ ರೂ.ಗಳಷ್ಟು ಬಿಲ್ ಬಾಕಿ ಬಿದ್ದಿದೆ. ಈ ಬಾಕಿ ಮೇಲೆ ನಿಮ್ಮ ಪಸರ್ಂಟೇಜ್ ಕರಿನೆರಳು ಬಿದ್ದಿದೆ! ಸಾಲ ಮಾಡಿ ಕಾಮಗಾರಿ ಮಾಡಿರುವ ಗುತ್ತಿಗೆದಾರರು ದಯಾಮರಣಕ್ಕೆ ಅರ್ಜಿ ಬರೆಯುತ್ತಿದ್ದಾರೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

"ಗುತ್ತಿಗೆದಾರರ ಬಿಲ್ ಬಾಕಿ ಪಟ್ಟಿ ನೋಡಿ. ಜಲ ಸಂಪನ್ಮೂಲ: 14,600 ಕೋಟಿ ರೂ., ಲೋಕೋಪಯೋಗಿ: 10ಸಾವಿರ ಕೋಟಿ ರೂ., ಗ್ರಾಮೀಣಾಭಿವೃದ್ಧಿ: 3,100 ಕೋಟಿ ರೂ., ಸಣ್ಣ ನೀರಾವರಿ: 2,800ಕೋಟಿ ರೂ., ಇತರೆ ಇಲಾಖೆ: 1,500 ಕೋಟಿ ರೂ. ಸೇರಿ ಒಟ್ಟು: 32ಸಾವಿರ ಕೋಟಿ ರೂ.ಬಾಕಿ ಇದೆ" ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News