ಸ್ಕ್ರ್ಯೂಡ್ರೈವರ್, ಸ್ಯ್ಪಾನರ್ ಬಿಡಿ, ತಲ್ವಾರ್ ಗಳಿಗೆ ಪೂಜೆ ಮಾಡಿ: ರಾಗಿಗುಡ್ಡದಲ್ಲಿ ಅರುಣ್ ಕುಮಾರ್ ಪುತ್ತಿಲ ಪ್ರಚೋದನಕಾರಿ ಹೇಳಿಕೆ
ಶಿವಮೊಗ್ಗ: ʼʼಸ್ಕ್ರ್ಯೂಡ್ರೈವರ್, ಸ್ಯ್ಪಾನರ್ ಬಿಟ್ಟು, ತಲ್ವಾರ್ ಗಳಿಗೆ ಪೂಜೆ ಮಾಡಿʼʼ ಎಂದು ಸಂಘಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಶುಕ್ರವಾರ ಇಲ್ಲಿನ ನಗರದ ರಾಗಿಗುಡ್ಡ ಪ್ರದೇಶದಲ್ಲಿ ಇತ್ತೀಚೆಗೆ ಕಲ್ಲು ತೂರಾಟದಿಂದ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ, ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ʼರಾಗಿಗುಡ್ಡದಲ್ಲಿ ಮುಸ್ಲಿಂ ಸಮುದಾಯದಿಂದ ಘಟನೆ ನಡೆದಿದೆʼ ಎಂದು ಆರೋಪಿಸಿದರು.
ʼʼಘಟನೆಯಲ್ಲಿ ಗಾಯಗೊಂಡವರಿಗೆ ಸಾಂತ್ವನ ಹೇಳಲು ಇಲ್ಲಿಗೆ ಆಗಮಿಸಿದ್ದೇನೆ. ಅವರ ಜೊತೆಗೆ ನಾವಿದ್ದೇವೆ. ಮುಸ್ಲಿಂ ಮತಗಳನ್ನು ಓಲೈಸಲು ಸರಕಾರ ಮತಾಂಧ ಶಕ್ತಿಗೆ ಕುಮ್ಮಕ್ಕು ಕೊಡ್ತಿದೆ.ಇದು ಪೂರ್ವ ನಿಯೋಜಿತ ಕೃತ್ಯʼʼ ಎಂದು ದೂರಿದರು.
ʼʼಈ ಭಾಗದಲ್ಲಿ ಗಣೇಶೋತ್ಸವ ವಿಜೃಂಭಣೆಯಿಂದ ಮಾಡುತ್ತಾರೆ.ಹಿಂದು ಸಮಾಜಕ್ಕೆ ದೊಡ್ಡ ಶಕ್ತಿ ಬರುತ್ತದೆ ಅಂತಾ ಘಟನೆ ನಡೆದಿದೆ. ರೋಹನ್ ಎನ್ನುವ ಯುವಕನ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ, ವಾಹನ ಜಖಂ ಆಗಿದೆ. ಶಿಕ್ಷಕರ ಮನೆಗೆ ನುಗ್ಗಿ ಹಲ್ಲೆ ನಡೆಸಲಾಗಿದೆ. ಘಟನೆ ಇಡೀ ನಾಗರಿಕ ಸಮುದಾಯ ತಲೆ ತಗ್ಗಿಸುವಂತಾಗಿದೆʼʼ ಎಂದರು.
ನಮ್ಮಲ್ಲೂ ತಲ್ವಾರ್, ಶಸ್ತ್ರಾಸ್ತ್ರ ಇದೆ. ಅಗತ್ಯ ಬಿದ್ದರೆ ಇದೇ ಶಸ್ತ್ರಾಸ್ತ್ರ ಮೂಲಕ ಪ್ರತಿಕ್ರಿಯೆ ಕೊಡಲು ಹಿಂದೂ ಸಮಾಜ ಸಿದ್ಧವಿದೆ. ನವರಾತ್ರಿ ದಿನ ಶಸ್ತ್ರಾಸ್ತ್ರಗಳಿಗೆ ಪೂಜೆ ಮಾಡ್ತೇವೆ. ಪ್ರತಿ ಮನೆಯಲ್ಲಿಯೂ ತಲ್ವಾರ್ ಗಳಿಗೆ ಪೂಜೆ ಮಾಡಬೇಕು. ಸ್ಕೂಡ್ರೈವರ್, ಸ್ಪಾನರ್ ಕೈ ಬಿಡಿ ತಲ್ವಾರ್ ಗಳಿಗೆ ಪೂಜೆ ಮಾಡಿ ಎಂದರು.
ʼಶಾಂತಿ ಸುವ್ಯವಸ್ಥೆ ನಡುವೆ ಬಹುಸಂಖ್ಯಾತರು ಬದುಕಲು ಕಷ್ಟ ಇದೆ. ಸರಕಾರ ಗಂಭೀರವಾದ ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸರ ಮೇಲೆಯೂ ಹಲ್ಲೆ ನಡೆದಿದೆ. ಪೊಲೀಸರ ಬಗ್ಗೆ ಗೌರವ ಇದೆ. ಸರಕಾರ ಪೊಲೀಸರ ಅಧಿಕಾರ ಹಸ್ತಕ್ಷೇಪ ಮಾಡ್ತಿದೆ. ಇಲಾಖೆಗೆ ಪಾರದರ್ಶಕವಾಗಿ ಕೆಲಸ ಮಾಡಲು ಅವಕಾಶ ಕೊಡಬೇಕುʼ ಎಂದು ಒತ್ತಾಯಿಸಿದರು.