ಶಿವಮೊಗ್ಗ | ಸಾಕು ಪ್ರಾಣಿಗಳ ಆಹಾರ ತಯಾರಿಕಾ ಘಟಕದಲ್ಲಿ ದನದ ಮಾಂಸ ಬಳಕೆ ಆರೋಪ; ಕಮಲೇಶ್ ಸೇರಿ ಹಲವರ ವಿರುದ್ಧ FIR
ಶಿವಮೊಗ್ಗ, ಅ.13: ಕೋಳಿ ತ್ಯಾಜ್ಯದಿಂದ ಉಪ ಉತ್ಪನ್ನಗಳನ್ನು ತಯಾರಿಸುವ ಘಟಕದ ಮೇಲೆ ಶಿವಮೊಗ್ಗದ ತುಂಗಾನಗರ ಠಾಣೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ಕೋಳಿ, ಕುರಿ ತ್ಯಾಜ್ಯದಲ್ಲಿ ಕರುವಿನ ತಲೆ ಪತ್ತೆಯಾಗಿರುವುದು ವರದಿಯಾಗಿದೆ.
ಶಿವಮೊಗ್ಗ ನಗರದ ಮಾಚೇನಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮಲ್ನಾಡ್ ಪ್ರೋ ರೀಚ್ ಎಂಬ ಜಾಗದಲ್ಲಿ *ಕಮಲೇಶ್ ಮತ್ತು ಆತನ ಸಹಚರರು ಅಕ್ರಮವಾಗಿ ದನಗಳನ್ನು ಸಾಗಾಟ ಮಾಡಿ ನಂತರ ಅವುಗಳ ವಧೆ ಮಾಡಿ, ಅವುಗಳಿಂದ ಫೀಡಿಂಗ್ ಫುಡ್ ತಯಾರಿಸಿ ಲಾಭಕ್ಕಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು*.
ಈ ಹಿನ್ನೆಲೆಯಲ್ಲಿ ತುಂಗಾನಗರ ಪೊಲೀಸ್ ಠಾಣೆ ಪಿಎಸ್‌ಐ ಕುಮಾರ್ ಕುರಗುಂದ ಮತ್ತು ಸಿಬ್ಬಂದಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದಾಗ ಕರುವನ್ನು ವಧೆ ಮಾಡಿ ಅದರಿಂದ ಫೀಡಿಂಗ್ ಫುಡ್ ಅನ್ನು ತಯಾರಿಸಿ ಲಾಭಕ್ಕಾಗಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.
ನಂತರ ಸ್ಥಳದಲ್ಲಿದ್ದ ಗೂಡ್ಸ್ ವಾಹನ ಹಾಗೂ 12 ಫೀಡಿಂಗ್ ಫುಡ್ ನ ಚೀಲಗಳನ್ನು ವಶಕ್ಕೆ ಪಡೆದುಕೊಂಡು, ಆರೋಪಿಗಳಾದ ಕಮಲೇಶ್ ಮತ್ತು ಸಹಚರರು ಹಾಗೂ ಜಾಗದ ಮಾಲಕರ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.