ಶಿವಮೊಗ್ಗಕ್ಕೆ BJP ನಾಯಕರು ಹೋಗಿರುವುದು ಸತ್ಯ ಶೋಧನೆಗಲ್ಲ; ಮತ್ತೊಮ್ಮೆ ಬೆಂಕಿ ಕಡ್ಡಿ ಗೀರಲು: ಕಾಂಗ್ರೆಸ್ ಕಿಡಿ
ಬೆಂಗಳೂರು: ಕೆಲ ದಿನಗಳ ಹಿಂದೆ ಮಿಲಾದುನ್ನಬಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ತಂಡವು ಇಂದು (ಗುರುವಾರ) ರಾಗಿ ಗುಡ್ಡಕ್ಕೆ ಭೇಟಿ ನೀಡಿ ಸತ್ಯ ಶೋಧನೆ ನಡೆಸುತ್ತಿದ್ದು, ಈ ಬಗ್ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
ಈ ಸಂಬಂಧ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ʼʼ ಶಾಂತ ಸ್ಥಿತಿಗೆ ಬಂದಿರುವ ಶಿವಮೊಗ್ಗಕ್ಕೆ ಬಿಜೆಪಿ ನಾಯಕರು ಹೋಗಿರುವುದು ಸತ್ಯ ಶೋಧನೆಗಲ್ಲ ಮತ್ತೊಮ್ಮೆ ಬೆಂಕಿ ಕಡ್ಡಿ ಗೀರಲುʼʼ ಎಂದು ಆರೋಪಿಸಿದೆ.
ಅಲ್ಲದೇ, ʼʼಸತ್ಯ ಶೋಧನೆ ಮಾಡುವುದಕ್ಕೆ ಪೊಲೀಸರಿದ್ದಾರೆ, ಕಾನೂನಿದೆ, ಬಿಜೆಪಿಯವರ ಅಗತ್ಯವಿಲ್ಲ, ಬಿಜೆಪಿ ಯಾವುದೇ ಯಾವ ತನಿಖಾ ಏಜೆನ್ಸಿಯೂ ಅಲ್ಲʼʼ ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ʼʼಪರಿಸ್ಥಿತಿಯನ್ನು ಹದಗೆಡಿಸಲು ಹೊಂಚು ಹಾಕಿರುವ ಬಿಜೆಪಿಗರ ಸಂಚನ್ನು ಯಶಸ್ವಿಯಾಗಲು ನಮ್ಮ ಸರ್ಕಾರ ಬಿಡುವುದಿಲ್ಲʼʼ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ಇನ್ನು ನಳಿನ್ ಕುಮಾರ್ ಅವರ ನೇತೃತ್ವದಲ್ಲಿ ಸತ್ಯ ಶೋಧನಾ ತಂಡ ಈಗಾಗಲೇ ಶಿವಮೊಗ್ಗಕ್ಕೆ ಆಗಮಿಸಿದ್ದು. ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದೆ. ನಂತರ ರಾಗಿಗುಡ್ಡಕ್ಕೆ ಭೇಟಿ ನೀಡಿ ಹಾನಿಗೊಳಗಾದ ಮನೆಗಳ ಪರಿಶೀಲನೆ ನಡೆಸಿದೆ. ನಿಯೋಗದಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವರಾದ ಅಶ್ವತ್ ನಾರಾಯಣ್,ರವಿಕುಮಾರ್, ಕೆ.ಎಸ್ ಈಶ್ವರಪ್ಪ, ಸಂಸದ ರಾಘವೇಂದ್ರ ಸೇರಿದಂತೆ ಹಲವು ಬಿಜೆಪಿ ನಾಯಕರಿದ್ದರು.