ಸಂಸತ್ ಭವನದ ದಾಳಿಗೆ ಮೈಸೂರಿನ ಸಂಸದ ಪ್ರತಾಪ್ ಸಿಂಹ ಕಚೇರಿಯಲ್ಲಿ ಸಂಚು ನಡೆದಿತ್ತು: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪ
ಮೈಸೂರು: ದೆಹಲಿಯ ಸಂಸತ್ ಭವನದಲ್ಲಿ ನಡೆದಿರುವ ದಾಳಿಯ ಸಂಚು ಡಿ. 7 ರಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಲ್ಲಿ ನಡೆದಿತ್ತು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಜಲದರ್ಶಿನಿ ಅತಿಥಿ ಗೃಹದ ಮುಂಭಾಗ ಬುಧವಾರ ಸಂಸದ ಪ್ರತಾಪ್ ಸಿಂಹ ಅವರ ಕಚೇರಿ ಮುತ್ತಿಗೆ ಹಾಕುವ ಕಾಂಗ್ರೆಸ್ ಪಕ್ಷದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಸತ್ ಭವನದಲ್ಲಿ ಇಂದು ದಾಳಿ ನಡೆದಿದೆಯೋ ಅದು ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಲ್ಲಿ ಡಿ. 7 ರಂದೇ ನಿರ್ಧಾರವಾಗಿತ್ತು ಎಂದು ಹೇಳಿದರು.
ಸಂಸದ ಪ್ರತಾಪ್ ಸಿಂಹ, ಕೃತ್ಯ ಎಸಗಿರುವ ಮನೋರಂಜನ್ ಸಾಗರ್ ಶರ್ಮಾ, ನೀಲಂ ಮತ್ತು ಅಮೋಲ್ ಶಿಂಧೆ ಡಿ.7 ರಂದು ಮೈಸೂರಿನಲ್ಲಿರುವ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಲ್ಲಿ ಸಭೆ ನಡೆಸಿ ದೇಶದಲ್ಲಿ ಅಶಾಂತಿ ಉಂಟು ಮಾಡಲು ಏನು ಮಾಡಬೇಕು ಎಂಬ ಚರ್ಚೆಯನ್ನು ಮಾಡಿದ್ದಾರೆ. ಬೇಕಿದ್ದರೆ ಅಲ್ಲಿನ ಸಿಸಿ ಟಿವಿ ದೃಶ್ಯಾವಳಿ ಪರಿಶೀಲನೆ ಮಾಡಿ ಎಂದು ಒತ್ತಾಯಿಸಿದರು.
ಸಂಸದ ಪ್ರತಾಪ್ ಸಿಂಹ ಅವರಿಗೂ ಈ ಕೃತ್ಯ ನಡೆಸಿರುವ ತಂಡಕ್ಕೂ ಏನು ಸಂಬಂಧ ಎಂಬುದು ಬಹಿರಂಗಗೊಳ್ಳಬೇಕು. ಸಂಸದ ಪ್ರತಾಪ್ ಸಿಂಹ ಅವರು ಹೇಳಿರುವಂತೆ ನಾನು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೆ. ಆಗ ಅವರು 2023 ರ ವಿಧಾನಸಭಾ ಚುನಾವಣೆಯಲ್ಲಿ ಯಾಕೆ ಬಿಜೆಪಿ ಸೋಲು ಕಂಡಿತ್ತು. ನೀವೆಲ್ಲ ಇದ್ದು ಕೊಂಡು ಯಾಕೆ ಗಲಾಟೆ ಎಬ್ಬಿಸಲಿಲ್ಲ, ರಕ್ತಪಾತ ಉಂಟಾಗುವಂತೆ ನೋಡಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ ಎಂದು ಸ್ವತಃ ಪ್ರತಾಪ್ ಸಿಂಹ ಅವರೇ ಹೇಳಿರುವ ಮೂರು ನಿಮಿಷದ ವೀಡಿಯೋ ನನ್ನ ಬಳಿ ಇದೆ ಎಂದು ಹೇಳಿದರು.
ಸಂಸತ್ ಭವನದೊಳಗೆ ಭದ್ರತೆಯನ್ನು ಭೇದಿಸಿ ಹೇಗೆ ಕೃತ್ಯ ಎಸಗಲಾಯಿತು ಇದಕ್ಕೆ ಯಾರು ಕಾರಣ.ಇದರ ನೈತಿಕ ಹೊಣೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಹೊರಬೇಕು ಎಂದು ಆಗ್ರಹಿಸಿದರು.
ಈ ಕೂಡಲೇ ಸಂಸದ ಪ್ರತಾಪ್ ಸಿಂಹ ಅವರ ಸಂಸದ ಸ್ಥಾನವನ್ನು ಅಮಾನತು ಮಾಡಬೇಕು. ಅವರನ್ನು ಬಂಧಿಸಿ ಸೂಕ್ತ ತನಿಖೆಗೆ ಒಳಪಡಿಸಬೇಕು. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.