ಕೇಂದ್ರ ಸರಕಾರ ಕನ್ನಡಿಗರನ್ನು ಸದಾ ಸವತಿ ಮಕ್ಕಳಂತೆ ಕಂಡಿದೆ: ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಬೆಂಗಳೂರು: ರಾಜ್ಯದ ರೈತರು ಬರದಿಂದ ಕಂಗಾಲಾಗಿದ್ದಾರೆ, ಇಂತಹ ಪ್ರಾಕೃತಿಕ ಸವಾಲುಗಳು ಎದುರಾದಾಗಲೆಲ್ಲ ಕೇಂದ್ರ ಸರಕಾರ ಕನ್ನಡಿಗರನ್ನು ಸದಾ ಸವತಿ ಮಕ್ಕಳಂತೆ ಕಂಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನೆಡಸಿದ್ದಾರೆ.
ಈ ಸಂಬಂಧ ʼಎಕ್ಸ್ʼ ನಲ್ಲಿ ಬರೆದುಕೊಂಡಿರುವ ಅವರು, ಸಿಎಂ ಸಿದ್ದರಾಮಯ್ಯ ಅವರು ಹಲವು ಪತ್ರಗಳನ್ನು ಬರೆದರೂ ಕೇಂದ್ರದಿಂದ ಸ್ಪಂದನೆ ಇಲ್ಲ, ಖುದ್ದು ಭೇಟಿಯಾಗಿ ಬರ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟರೂ ಪರಿಹಾರ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕವು ಅಫ್ಘಾನಿಸ್ತಾನ, ಬಾಂಗ್ಲಾದೇಶಗಳಲ್ಲಿದ್ದಿದ್ದರೆ ಪ್ರಧಾನಿಗಳ ಮನ ಮಿಡಿಯುತ್ತಿತ್ತೋ ಏನೋ! ಏಕೆಂದರೆ ಅವರಿಗೆ ವಿದೇಶಗಳ ಮೇಲಿರುವಷ್ಟು ಪ್ರೀತಿ ಕರ್ನಾಟಕದ ಮೇಲಿಲ್ಲ. ರಾಜ್ಯದಲ್ಲಿ 25+1 ಬಿಜೆಪಿ ಸಂಸದರಿದ್ದಾರೆ, ಅವರಿಗೆ ಕನ್ನಡಿಗರ ಸ್ಥಿತಿಗತಿಯ ಬಗ್ಗೆ, ತಮ್ಮ ಹೊಣೆಗಾರಿಕೆಯ ಬಗ್ಗೆ ಕಿಂಚಿತ್ ಪ್ರಜ್ಞೆ ಇಲ್ಲ. ಸಂಸದ ಸ್ಥಾನವನ್ನು ಕೇವಲ "ಮೋದಿ ಭಜನಾ ಮಂಡಳಿಯ ಸದಸ್ಯತ್ವ" ಎಂದು ಪರಿಭಾವಿಸಿದಂತಿದೆ ಎಂದು ಟೀಕಿಸಿದ್ದಾರೆ.
ಬಿಜೆಪಿ ಸಂಸದರಿಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಏನು ಮಾಡುತ್ತಿದ್ದಾರೆ, ಎಂಬುದರ ಬಗ್ಗೆ ಇರುವ ಅರ್ಧದಷ್ಟು ಆಸಕ್ತಿ ಜನರ ಬಗ್ಗೆ ಇದ್ದಿದ್ದರೆ ಕನ್ನಡಿಗರಿಂದ ಪಡೆದ ಮತಕ್ಕೆ ಸ್ವಲ್ಪವಾದರೂ ನ್ಯಾಯ ಸಲ್ಲಿಸಿದಂತಾಗುತ್ತಿತ್ತು ಎಂದು ಹೇಳಿದ್ದಾರೆ
ಬರ ಪರಿಹಾರಕ್ಕಾಗಿ ಅಥವಾ ಇನ್ಯಾವುದೇ ರಾಜ್ಯದ ಸಮಸ್ಯೆಗಳ ಬಗ್ಗೆ ಒಮ್ಮೆಯೂ ರಾಜ್ಯ ಬಿಜೆಪಿ ಸಂಸದರು ನಿಯೋಗ ಮಾಡಿಕೊಂಡು ಹೋಗಿ ಕೇಂದ್ರ ಸರ್ಕಾರವನ್ನು ಗಮನ ಸೆಳೆದಿರುವ ಉದಾಹರಣೆ ಇಲ್ಲ ಎಂದು ದೂರಿದರು.