ಎತ್ತಿನಹೊಳೆ ಯೋಜನೆ ಕಾಂಗ್ರೆಸ್ ಸರಕಾರದ ಸಾಕ್ಷಿಗುಡ್ಡೆ: ಡಿ.ಕೆ.ಶಿವಕುಮಾರ್

Update: 2024-09-06 16:31 GMT

Photo:X/DKShivakumar

ಬೆಂಗಳೂರು/ಹಾಸನ: ಗುರಿ ಸಾಧಿಸುವ ಛಲ ಇದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಎತ್ತಿನಹೊಳೆ ಯೋಜನೆ ಉದಾಹರಣೆಯಾಗಿದ್ದು, ಇದು ಕಾಂಗ್ರೆಸ್ ಸರಕಾರದ ಸಾಕ್ಷಿಗುಡ್ಡೆಯಾಗಲಿದೆ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಸಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ಇಲ್ಲಿನ ಹಾಸನ ಜಿಲ್ಲೆಯ ಹೆಬ್ಬನಹಳ್ಳಿಯ 4ನೆ ವಿತರಣಾ ತೊಟ್ಟಿ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಮೊದಲನೆಯ ಹಂತಕ್ಕೆ ಚಾಲನೆ ನೀಡಿ ಮಾತನಾಡಿದರು.

ಎತ್ತಿನಹೊಳೆ ಬಯಲು ಸೀಮೆಯ ಜನರ ಬದುಕಿನ ಜೇನಿನ ಹೊಳೆ, ಬಯಲು ಸೀಮೆ ಬರ ನೀಗಿಸುವ ಜೀವದ ಹೊಳೆ. ಗೌರಿ ಹಬ್ಬದಂದು ಗಂಗೆಗೆ ಬಾಗಿನ ಅರ್ಪಿಸಿ, 10 ವರ್ಷಗಳ ಭಗೀರಥ ಪ್ರಯತ್ನ ನಡೆಸಿ, ಎತ್ತಿನಹೊಳೆ ಏತ ನೀರಾವರಿ ಯೋಜನೆಯನ್ನು ನಮ್ಮ ಕಾಂಗ್ರೆಸ್ ಸರಕಾರ ಸಾಕಾರಗೊಳಿಸಿದೆ ಎಂದು ಅವರು ಹೇಳಿದರು.

ಕರ್ನಾಟಕದ ನೀರಾವರಿ ಇತಿಹಾಸದಲ್ಲೇ ಇದೊಂದು ಮಹತ್ವದ ದಿನ. ನೂರಾರು ಟೀಕೆಗಳನ್ನು ಎದುರಿಸಿದ್ದಕ್ಕೆ ಸಕಲೇಶ್ವರನ ಪುಣ್ಯ ಕ್ಷೇತ್ರದಿಂದ ವಾಣಿವಿಲಾಸದ ತಾಯಿ ಕಣಿವೆ ಮಾರಮ್ಮನ ಸನ್ನಿಧಿಗೆ ನೀರು ಹರಿಯುತ್ತಿದೆ. ನನ್ನ ಬದುಕಿನಲ್ಲೇ ಎಂದೆಂದಿಗೂ ಮರೆಯಲಾಗದ ಚರಿತ್ರೆಯ ದಿನ. ಗಂಗಾ ಮಾತೆ ಗೌರಿ ಹಬ್ಬದಂದು ಘಟ್ಟ ಹತ್ತಿ ಇಳಿಯುತ್ತಿದ್ದಾಳೆ ಎಂದು ಹೇಳಿದರು

ಈ ಯೋಜನೆ ಪೂರ್ಣಗೊಂಡರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಯಾರೋ ಹೇಳಿದ್ದರು. ಗಂಗಾ ಮಾತೆ ಗುಡ್ಡ, ಬೆಟ್ಟಗಳನ್ನು ಇಳಿದು ಬಯಲು ಸೀಮೆಯ ಕಡೆಗೆ ಹರಿಯುತ್ತಿದ್ದಾಳೆ. ಈ ಶುಭ ಯೋಜನೆ ಲೋಕಾರ್ಪಣೆ ಆಗುವ ದಿನವಾದ ಕಾರಣಕ್ಕೆ ಯಾರ ಬಗ್ಗೆಯೂ ಟೀಕೆ ಮಾಡಲು ಹೋಗುವುದಿಲ್ಲ. ಅವರ ಟೀಕೆಗಳಿಗೆ ವಿಧಾನಸಭೆಯಲ್ಲಿ ಉತ್ತರ ಕೊಡುತ್ತೇನೆ ಅವರು ಎಂದು ಹೇಳಿದರು.

ಬಯಲು ಸೀಮೆಯ ಬದುಕಿನ ನೀರು*:ಎತ್ತಿಗೆ ಸಾಕಾಗುವಷ್ಟು ನೀರು ಮಾತ್ರ ಇಲ್ಲಿದೆ. ಈ ನೀರನ್ನು ಬೆಂಗಳೂರು ಸುತ್ತಮುತ್ತಾ ತೆಗೆದುಕೊಂಡು ಹೋಗಲು ಹೇಗೆ ಸಾಧ್ಯ ಎಂದು ಪತ್ರಕರ್ತರೊಬ್ಬರು ಹಾಸನ ಜಿಲ್ಲಾಧಿಕಾರಿಗಳ ಬಳಿ ಕೇಳಿದ್ದರಂತೆ. ಇದು ಎತ್ತಿಗಾಗಿ ನೀರಲ್ಲ, ಬಯಲು ಸೀಮೆಯ ಜನರ ಬದುಕಿಗಾಗಿ ಎತ್ತುತ್ತಿರುವ ನೀರು ಎಂದರು.

ಸಹಕಾರ ಇಲಾಖೆ ಸಚಿವ ಕೆ.ಎಸ್.ರಾಜಣ್ಣ ಮಾತನಾಡಿ, ‘ಈ ಯೋಜನೆಗೆ ವರ್ಷಕ್ಕೆ 2000 ಕೋಟಿ ರೂ. ಬಿಡುಗಡೆ ಮಾಡಿದರೆ ಎರಡು ವರ್ಷದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬಹುದು ಎಂದು ತಿಳಿಸಿದರು. ವಿತರಣಾ ನಾಳೆಯ ಕೆಲಸಕ್ಕೆ ಸಮಸ್ಯೆ ಆಗಿದೆ. 20 ಕಡೆ ಅರಣ್ಯ ಪ್ರದೇಶದಲ್ಲಿ ಕೆಲಸ ಮಾಡಲು ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ. ಉನ್ನತ ಸಭೆ ನಡೆಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ, ಸೂಚನೆ ನೀಡಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡಿದರು.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತನಾಡಿ, ನನ್ನ ಮತ್ತು ನಮ್ಮೆಲ್ಲರ ಕನಸು ಇಂದು ನನಸಾಗಿದೆ. ಯೋಜನೆಯನ್ನು ಸಮೀಕ್ಷೆ ಮಾಡಬೇಕು. ಮುಂದಿನ ಎರಡು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಲು ಸರಕಾರ ಒತ್ತು ನೀಡಬೇಕು. ಕೊನೆಯ ಭಾಗಕ್ಕೂ ನೀರು ಹರಿಯಬೇಕು. ಅಸಾಧ್ಯವಾದದ್ದು ಇವತ್ತು ಸಾಧ್ಯವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಪರಮೇಶ್ವರ್, ಎಂ.ಬಿ. ಪಾಟೀಲ್ ಮತ್ತಿತರ ಸಚಿವರು, ಶಾಸಕರು, ಗಣ್ಯರು ಇದ್ದರು.

‘ಏಳು ಜಿಲ್ಲೆಗಳ 6,657 ಗ್ರಾಮಗಳ 75 ಲಕ್ಷ ಜನರ ಬಾಯಾರಿಕೆ ನೀಗಿಸುವ ಈ ಯೋಜನೆಯ ವಿರುದ್ಧ ಅನೇಕ ಜನರು ಎನ್ ಜಿಟಿಗೆ ಅರ್ಜಿ ಹಾಕಿದ್ದರು. ಏಳೆಂಟು ಜನರು ತಮ್ಮ ಉದ್ಯಮ ನಷ್ಟವಾಗುತ್ತದೆ ಎಂಬ ಕಾರಣಕ್ಕೆ ತಡೆಯಾಜ್ಞೆ ತರಲು ಪ್ರಯತ್ನಿಸಿದ್ದರು. ಎಲ್ಲ ತಕರಾರುಗಳನ್ನು ವಜಾ ಮಾಡಿ ನಮ್ಮ ಪರವಾಗಿ ಎನ್‍ಜಿಟಿ ತೀರ್ಪು ನೀಡಿತು. ಇದರಿಂದ 527 ಕೆರೆಗಳಿಗೆ ನೀರನ್ನು ತುಂಬಿಸಲಾಗುತ್ತದೆ. ಏನಾದರೂ ಕೆಲಸ ಮಾಡುವ ಮುನ್ನ ವಜ್ರ ಯಾವುದು, ಕೆಸರು ಯಾವುದು ಎಂದು ತಿಳಿಯಬೇಕು. ವಜ್ರದಿಂದ ವಜ್ರವನ್ನು ಕತ್ತರಿಸಬಹುದು. ಆದರೆ ಕೆಸರಿನಿಂದ, ಕೆಸರನ್ನು ಸ್ವಚ್ಚ ಮಾಡಲು ಆಗುವುದಿಲ್ಲ’

- ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News