ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ತಡೆಯಲು ಸಮಿತಿ ರಚನೆಗೆ ಒತ್ತಾಯ

Update: 2024-09-16 15:28 GMT

ನಾಗಲಕ್ಷ್ಮಿ ಚೌಧರಿ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕಲಾವಿದೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಯುವ ಕುರಿತಾಗಿ ಸಮಿತಿಯನ್ನು ರಚನೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಒತ್ತಾಯಿಸಿದೆ.

ಸೋಮವಾರ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಮಾತನಾಡಿ, ‘ಮಹಿಳೆಯರ ರಕ್ಷಣೆಗೆ ವಾಣಿಜ್ಯ ಮಂಡಳಿಯಲ್ಲಿ ಇದುವರೆಗೂ ಸಮಿತಿ ಮಾಡಿಲ್ಲ. ಯಾಕೆ ಎಂಬುದು ಗೊತ್ತಿಲ್ಲ. ಹೆಣ್ಣು ಮಕ್ಕಳು ಚಿತ್ರರಂಗಕ್ಕೆ ಹೋಗುತ್ತೇವೆ ಎಂದಾಗ ಪೋಷಕರೇ ಮುಂದೆ ಬಂದು ಧೈರ್ಯವಾಗಿ ಕಳುಹಿಸಿ ಕೊಡಬೇಕು. ಅಂತಹ ವಾತಾವರಾಣ ನಿರ್ಮಾಣಕ್ಕೆ ಆಂತರಿಕ ಸಮಿತಿ ರಚನೆ ಅಗತ್ಯ ಇದೆ ಎಂದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್ ಮಾತನಾಡಿ, ಲೈಂಗಿಕ ದೌರ್ಜನ್ಯ ತಡೆ ಸಮಿತಿ ಮಾಡಲು ಉದ್ಯಮದ ಎಲ್ಲಾ ಅಂಗ ಸಂಸ್ಥೆಗಳ ಜತೆಗೆ ಮಾತನಾಡುತ್ತೇವೆ. ಇದಕ್ಕೆ 15 ದಿನಗಳ ಕಾಲಾವಕಾಶ ಕೇಳಿದ್ದೇವೆ. ಚಿತ್ರರಂಗದಲ್ಲಿ 24 ವಿಭಾಗಗಳಿವೆ. ಎಲ್ಲಾ ವಿಭಾಗಗಳ ಜತೆಗೆ ಚರ್ಚಿಸಬೇಕಿದೆ ಎಂದು ಹೇಳಿದರು.

ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಮಾತನಾಡಿ, ಈ ರೀತಿಯ ಸಮಿತಿಗಳಿಂದ ಚಿತ್ರರಂಗದಲ್ಲಿ ವ್ಯಾಪಾರ ಮತ್ತು ವ್ಯವಹಾರಕ್ಕೆ ತೊಂದರೆ ಆಗಲಿದೆ. ವ್ಯಾವಹಾರಿಕ ಸಮಸ್ಯೆಗಳ ಕಾರಣಕ್ಕೆ ನಾವು ಸಮಿತಿ ಬೇಡ ಎನ್ನುತ್ತಿದ್ದೇವೆ ಹೊರತು, ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಿದ್ದರೆ ಅವು ಆಚೆ ಬರುತ್ತವೆ ಎನ್ನುವ ಉದ್ದೇಶದಿಂದಲ್ಲ ಎಂದರು.

ನಿರ್ದೇಶಕಿ ಕವಿತಾ ಲಂಕೇಶ್ ಮಾತನಾಡಿ, ರಾಜ್ಯ ಮಹಿಳಾ ಆಯೋಗ ಅಥವಾ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಲೈಂಗಿಕ ದೌರ್ಜನ್ಯದ ಬಗ್ಗೆ ದೂರುಗಳು ಬಂದಿವೆಯೋ, ಇಲ್ಲವೋ ಗೊತ್ತಿಲ್ಲ. ಆದರೆ, ನಮ್ಮ ಫೈರ್ ಸಂಸ್ಥೆಗೆ ದೂರುಗಳು ಬಂದಿವೆ. 90 ವರ್ಷಗಳ ಚಿತ್ರರಂಗದಲ್ಲಿ ಅಂಥ ಯಾವ ಬೆಳವಣಿಗೆಯೂ ನಡೆದಿಲ್ಲ ಎನ್ನುತ್ತಿದ್ದಾರೆ. ನಡೆದಿದೆ ಎನ್ನುವುದಕ್ಕೆ ನಮ್ಮಲ್ಲಿ ದೂರುಗಳಿವೆ ಎಂದು ಅವರು ಹೇಳಿದರು.

ನಟಿ ನೀತೂ ಮಾತನಾಡಿ, ಚಿತ್ರರಂಗದಲ್ಲಿ ಮಹಿಳೆರ ಶೋಷಣೆ ಇಲ್ಲ ಎನ್ನುತ್ತಿದ್ದಾರೆ. ಆದರೆ ನನಗೆ ಆಗಿದೆ ಎಂದರು. ಸಭೆಯಲ್ಲಿ ನಟಿ ತಾರಾ ಅನುರಾಧ, ಭಾವನಾ ರಾಮಣ್ಣ, ಸಿಂಧು ಲೋಕನಾಥ್, ನೀತು ಶೆಟ್ಟಿ, ಸಂಜನಾ ಗರ್ಲಾನಿ, ಅನಿತಾ ಭಟ್, ಕವಿತಾ ಲಂಕೇಶ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಕೆಎಫ್‍ಸಿಸಿ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News