ಮೋದಿ ಭಯದಿಂದ ‘ಒಂದು ದೇಶ, ಒಂದು ಚುನಾವಣೆ’ಗೆ ಕಾಂಗ್ರೆಸ್ ವಿರೋಧ : ಆರ್.ಅಶೋಕ್

Update: 2024-09-18 13:24 GMT

ಬೆಂಗಳೂರು: ಒಂದು ದೇಶ, ಒಂದು ಚುನಾವಣೆ ನಡೆಸಲು ಕೇಂದ್ರ ಸರಕಾರ ಕೈಗೊಳ್ಳುತ್ತಿರುವ ಕ್ರಮವನ್ನು ಸ್ವಾಗತಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ಭಯದಿಂದಾಗಿ ಕಾಂಗ್ರೆಸ್ ಈ ಕ್ರಮವನ್ನು ವಿರೋಧಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದರು.

ಬುಧವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ದೇಶ, ಒಂದು ಚುನಾವಣೆಯಿಂದಾಗಿ ತೆರಿಗೆದಾರರ ಹಣ ಉಳಿತಾಯವಾಗುತ್ತದೆ ಎಂದು ತಿಳಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನಸಭೆ, ಲೋಕಸಭೆ ಹೀಗೆ ಒಂದೊಂದು ಚುನಾವಣೆ ಒಮ್ಮೊಮ್ಮೆ ನಡೆದಾಗ ನೀತಿ ಸಂಹಿತೆ ಜಾರಿಯಾಗುತ್ತದೆ. ಇದರಿಂದಾಗಿ ಕಾಮಗಾರಿಗಳು ವಿಳಂಬವಾಗಿ ಸರಕಾರ ಯಾವುದೇ ಯೋಜನೆಯನ್ನು ಸರಿಯಾಗಿ ಜಾರಿ ಮಾಡಲು ಸಾಧ್ಯವಾಗುವುದಿಲ್ಲ. ಹೊಸ ಕ್ರಮದಿಂದ ಈ ಸಮಸ್ಯೆ ನಿವಾರಣೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ಇಂತಹ ಕ್ರಮಕ್ಕೆ ವಿರೋಧ ಮಾಡುವುದು ಸಹಜ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಒಟ್ಟಿಗೆ ನಡೆದರೆ, ಸಮಸ್ಯೆಯಾಗುತ್ತದೆ ಎಂದು ಅವರು ಹೆದರಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅವರಿಗೆ ಮೋದಿ ಭಯವಿದೆ. ಈ ಕ್ರಮದಿಂದಾಗಿ ಪ್ರಧಾನಿ ಮತ್ತು ಮುಖ್ಯಮಂತ್ರಿಗೆ ಐದು ವರ್ಷಗಳ ಸಂಪೂರ್ಣ ಅವಧಿ ದೊರೆಯುತ್ತದೆ. ಆ ದೃಷ್ಟಿಯಿಂದ ಇದು ಉತ್ತಮ ಕ್ರಮ ಎಂದು ಅವರು ಹೇಳಿದರು.

ಮೋದಿ ಹತ್ತಿರ ಹೋಗುವ ಸರಿಸಮನಾದ ನಾಯಕರು ಯಾರೂ ಕಾಂಗ್ರೆಸ್‍ನಲ್ಲಿಲ್ಲ. ರಾಹುಲ್ ಗಾಂಧಿಗೆ ಮಾತನಾಡಲು ಬರಲ್ಲ, ತೀರ್ಮಾನ ಕೈಗೊಳ್ಳಲು ಬರಲ್ಲ. ಅವರು ಮಕ್ಕಳಂತೆ ಆಟವಾಡುತ್ತಿದ್ದು, ಅವರಿಗೆ ಪ್ರಬುದ್ಧತೆ ಇಲ್ಲ ಎಂಬುದು ಅವರ ವರ್ತನೆಯಿಂದ ಗೊತ್ತಾಗುತ್ತದೆ ಎಂದು ಅಶೋಕ್ ಟೀಕಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅತಂತ್ರವಾಗಿದ್ದು, ಆ ವಿಷಯ ಮರೆಮಾಚಲು ಮೋದಿ ಸರಕಾರದ ಬಗ್ಗೆ ಟೀಕೆ ಮಾಡಲಾಗುತ್ತಿದೆ. ನರೇಂದ್ರ ಮೋದಿ ಖಂಡಿತ 5 ವರ್ಷ ಆಡಳಿತ ನಡೆಸಲಿದ್ದಾರೆ. ಆ ನಂತರ ಕೂಡ ಅವರೇ ಪ್ರಧಾನಿಯಾಗಲಿದ್ದಾರೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News