ನಾನು ದಲಿತ ಸಮುದಾಯಕ್ಕೆ ಸೇರಿದವನು, ನಾನೇಕೆ ಮುಖ್ಯಮಂತ್ರಿಯಾಗಬಾರದು? : ಸಚಿವ ಆರ್.ಬಿ. ತಿಮ್ಮಾಪುರ
ಹುಬ್ಬಳ್ಳಿ : ‘ನಾನೂ ದಲಿತ ಸಮುದಾಯಕ್ಕೆ ಸೇರಿದವನು. ನಾನೇಕೆ ಮುಖ್ಯಮಂತ್ರಿ ಆಗಬಾರದು. ದಲಿತ ಸಮುದಾಯದವರು ಸಿಎಂ ಆಗಬಾರದೇ?. ಮುಖ್ಯಮಂತ್ರಿ ಮಾಡಿದರೆ ಯಾರೂ ಬೇಡ ಏನ್ನುವವರು?’ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ಇಂದಿಲ್ಲಿ ಪ್ರಶ್ನೆ ಮಾಡಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ನನಗೆ ಆ ಸ್ಥಾನವನ್ನು ನಿಭಾಯಿಸುವ ಶಕ್ತಿ ಇದೆಯೋ ಇಲ್ಲವೋ? ಶಾಸಕಾಂಗ ಪಕ್ಷದ ಸಭೆಯಲ್ಲಿ ನನ್ನನ್ನು ಒಪ್ಪುತ್ತಾರೋ ಇಲ್ಲವೋ ಇವೆಲ್ಲವೂ ಪರಿಗಣನೆಗೆ ಬರುತ್ತದೆ. ಹೈಕಮಾಂಡ್ ಹೇಳಿದರೆ ನಾನೇ ಮುಖ್ಯಮಂತ್ರಿ ಆಗುತ್ತೇನೆ’ ಎಂದು ತಮ್ಮ ಮನದ ಇಂಗಿತವನ್ನು ಬಹಿರಂಗಪಡಿಸಿದರು.
‘ನಾನು ಯಾಕೆ ಸಿಎಂ ಆಗಬಾರದು?. ದಲಿತರೂ ಸಿಎಂ ಆಗಬೇಕು, ಮತ್ತೊಬ್ಬರೂ ಸಿಎಂ ಆಗಬೇಕು. ಆದರೆ, ಇದ್ಯಾವ ಬೆಳವಣಿಗೆಯೂ ಸದ್ಯಕ್ಕೆ ಇಲ್ಲ. ಸಿಎಲ್‍ಪಿಯಲ್ಲಿ ಎಲ್ಲವೂ ತೀರ್ಮಾನ ಆಗಬೇಕು. ಐದು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿರುತ್ತೆ. ನಮ್ಮಲ್ಲಿ ಅಂತಹದ್ದೇನೂ ಇಲ್ಲ. ದಲಿತ ಶಾಸಕರ ಔತಣಕೂಟ ರದ್ದಾಗಿಲ್ಲ, ಮುಂದೂಡಿದ್ದೇವೆ’ ಎಂದು ತಿಮ್ಮಾಪುರ್ ತಿಳಿಸಿದರು.