40% ಆರೋಪಕ್ಕೆ ಕಾಂಗ್ರೆಸ್ ನವರು ಏನು ದಾಖಲೆ ಕೊಟ್ಟಿದ್ದರು: ಬಸವರಾಜ ಬೊಮ್ಮಾಯಿ

Update: 2025-01-06 14:20 IST
40% ಆರೋಪಕ್ಕೆ ಕಾಂಗ್ರೆಸ್ ನವರು ಏನು ದಾಖಲೆ ಕೊಟ್ಟಿದ್ದರು: ಬಸವರಾಜ ಬೊಮ್ಮಾಯಿ
  • whatsapp icon

ಹುಬ್ಬಳ್ಳಿ: ರಾಜ್ಯ ಸರ್ಕಾರದ 60% ಕಮಿಷನ್ ಆರೋಪಕ್ಕೆ ದಾಖಲೆ ಕೊಡಿ ಎನ್ನುವ ಸಿಎಂ ಸಿದ್ಧರಾಮಯ್ಯ ಅವರು ನಮ್ಮ ಆಡಳಿತದಲ್ಲಿ 40 % ಸರಕಾರ ಎಂದರಲ್ಲ ಆವಾಗ ಏನು ದಾಖಲೆ ಕೊಟ್ಟಿದ್ದರು. ಇದುವರೆಗೂ ದಾಖಲೆ ಕೊಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರಕಾರ ಯಾವ ರೀತಿ ನಡೆದುಕೊಳ್ಳತ್ತಿದೆ ಅಂತಾ ಗೊತ್ತು. ಪ್ರತಿಯೊಂದು ಇಲಾಖೆಯಲ್ಲಿ ಭ್ರಷ್ಟಾಚಾರ ತುಂಬಿ ತುಳಕುತ್ತಿದೆ. ಯಾವುದೇ ಅಭಿವೃದ್ಧಿ ಕೆಲಸ ಇಲ್ಲ. ಪ್ರತಿಯೊಂದು ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಯಾವುದೇ ಇಲಾಖೆಯಲ್ಲಿ ಕೆಲಸ ಆಗುತ್ತಿಲ್ಲ. ಜನಸಾಮಾನ್ಯರು, ಗುತ್ತಿಗೆದಾರರು, ಎಲ್ಲ ವರ್ಗದ ಜನರಿಗೆ ಭ್ರಷ್ಟಾಚಾರದ ಬಿಸಿ ಮುಟ್ಟಿದೆ. ಇನ್ನೂ ಏನೂ ಆಗಿಲ್ಲ ಎಂದು ಮುಖ್ಯಮಂತ್ರಿಗಳು ವರ್ತಿಸುತ್ತಿರುವುದು ಭ್ರಷ್ಟಾಚಾರ ಮುಚ್ಚಿ ಹಾಕುವ ಪ್ರಯತ್ನ ಎಂದು ಆರೋಪಿಸಿದರು.

ನಾವು ಗ್ಯಾರಂಟಿ ಜಾರಿ ಮಾಡಿದ್ದೇವೆ, ನೀವು ಏನು ಮಾಡಿದ್ದೀರಿ ಎಂಬ ಕಾಂಗ್ರೆಸ್ ಆರೋಪ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಯಡಿಯೂರಪ್ಪ ಅವರ ಅವಧಿಯಲ್ಲಿ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಯೋಜನೆ ಜಾರಿ ಮಾಡಿದ್ದೇವೆ‌. ಹೆಣ್ಣು ಮಗು ಹುಟ್ಟಿದರೆ ಭಾಗ್ಯಲಕ್ಷೀ ಯೋಜನೆ ಜಾರಿ ಮಾಡಿದ್ದೇವೆ. ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದೇವೆ. ಇವೆಲ್ಲವನ್ನು ಕಾಂಗ್ರೆಸ್ ಕೊಟ್ಟಿದೆಯಾ? ಆಶಾ, ಅಂಗನವಾಡಿ ಕಾರ್ಯಕರ್ತರಿಯೆ ಸಾಕಷ್ಟು ಸೌಲಭ್ಯ ಮಾಡಿದೆವು ಇವರೇನು ಮಾಡಿದರು ಒಂದು ರಸ್ತೆ ಸರಿ ಇಲ್ಲ ಎಂದರು.

ಅಂಬೇಡ್ಕರ್ ಬಗ್ಗೆ ಕುರಿತು ಅಮಿತಾ ಶಾ  ಹೇಳಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು,  ಡಾ.ಅಂಬೇಡ್ಕರ್ ಅವರು ಬದುಕಿದ್ದಾಗ ಕಾಂಗ್ರೆಸ್ ಹೇಗೆ ನಡೆದುಕೊಂಡಿದೆ ಅನ್ನುವುದು ಇವತ್ತಿನ ಯುವ ಜನತೆಗೆ ಬಹಿರಂಗವಾಗಿದೆ. ಸಂಸತ್ತಿನಲ್ಲಿ ಎರಡು ದಿನ ನಡೆದ ಚರ್ಚೆಯಲ್ಲಿ ಕಾಂಗ್ರೆಸ್ ಸಂವಿಧಾನ ವಿರೋಧಿ ಹಾಗೂ ಅಂಬೇಡ್ಕರ್ ವಿರೋಧಿ ಅನ್ನುವುದು ಸ್ಪಷ್ಟವಾಗಿದೆ. ತಾವು ಮಾಡಿರುವ ಅಪರಾಧವನ್ನು ಮುಚ್ಚಿ ಹಾಕಿಕೊಳ್ಳಲು ಅಮಿತ್ ಶಾ ಅವರ ಹೇಳಿಕೆಯನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅಂಬೇಡ್ಕರ್ ಬಗ್ಗೆ ಗೌರವ ಇದ್ದರೆ, ಮೊದಲು ಅಂಬೇಡ್ಕರ್ ಗೆ ಅವರ ಹಿರಿಯರು ಮಾಡಿರುವ ಅಪಮಾನಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳಲಿ ಎಂದು ಹೇಳಿದರು.

ಜನ ವಿರೋಧಿ ತೀರ್ಮಾನ

ಬಸ್ ದರ ಏರಿಕೆ ಜನ ವಿರೋಧಿ ತೀರ್ಮಾನ. ಜನರೇ ಈ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ. ಅವರು ಶಕ್ತಿ ಯೋಜನೆ ಮಾಡಿ ಅದಕ್ಕೆ ನೀಡಬೇಕಾದ ಹಣ ಸರಿಯಾಗಿ ನೀಡುತ್ತಿಲ್ಲ. ಆ ಯೋಜನೆಯಿಂದ ಯುವಜನತೆಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಹೆಚ್ಚಿನ ಬಸ್ ಗಳನ್ನೂ ನೀಡುತ್ತಿಲ್ಲ. ನಾನು ಸಿಎಂ ಆಗಿದ್ದಾಗ ಘೋಷಣೆ ಮಾಡಿರುವ ಬಸ್ ಗಳೆ ಈಗ ಬರುತ್ತಿವೆ. ಸಾಲ ಅವರ ಕಾಲದಿಂದಲೂ ಇದೆ. ಕೊವಿಡ್ ಸಂದರ್ಭದಲ್ಲಿ ತೊಂದರೆ ಆದಾಗ ಯಡಿಯೂರಪ್ಪ ಅವರು ಸಹಾಯ ಮಾಡಿದ್ದರು. ನಮ್ಮ ಕಾಲದಲ್ಲಿ ಯಾವುದೇ ಹೊರೆಯಾಗದಂತೆ ನೋಡಿಕೊಂಡಿದ್ದೆವು. ಇವರು ಡೀಸೆಲ್ ದುಡ್ಡು ಕಟ್ಟಲು ಆಗದ ಪರಿಸ್ಥಿತಿಗೆ ತಂದಿದ್ದಾರೆ. ಗ್ಯಾರೆಂಟಿ ಯೋಜನೆಗಳಿಗೆ ಸರಿಯಾಗಿ ಸಂಪನ್ಮೂಲ ಕ್ರೋಢೀಕರಣ ಮಾಡಲಾಗದೇ ಜನರ ಮೇಲೆ ತೆರಿಗೆ ಭಾರ ಹಾಕುತ್ತಿದ್ದಾರೆ ಎಂದರು.

ಕೇವಲ ಸಾರಿಗೆ ದರ ಹೆಚ್ಚಳವಲ್ಲ, ನೀರಿನ ದರ ಹೆಚ್ಚಳ, ವಿದ್ಯುತ್ ದರ ಹೆಚ್ಚಳ, ಹಾಲಿನ ದರ ಈಗಾಗಲೇ ಹೆಚ್ಚಳ ಮಾಡಿದ್ದಾರೆ. ಸ್ಟ್ಯಾಂಪ್ ಡ್ಯೂಟಿ, ಮೋಟರ್ ವೆಹಿಕಲ್ ತೆರಿಗೆ, ಪೆಟ್ರೋಲ್ ಡೀಸೆಲ್ ತೆರಿಗೆ ಹೆಚ್ಚಳ ಮಾಡಿದ್ದಾರೆ. ಜನಸಾಮಾನ್ಯರು ಬಳಸುವ ಜಲ್ಲಿಕಲ್ಲಿನ ಮೇಲೆ ತೆರಿಗೆ, ಪಶ್ಚಿಮ ಘಟ್ಟದಿಂದ ಬರುವ ನೀರಿನ ಮೇಲೆ ತೆರಿಗೆ ಹಾಕಲು ಯೋಚನೆ ಮಾಡಿದ್ದಾರೆ. ಗಾಳಿಗೆ ತೆರಿಗೆ ಹಾಕುವ ದಿನಗಳು ದೂರ ಇಲ್ಲ. ಇದೊಂದು ದುರಾಡಳಿತ, ಆರ್ಥಿಕ ನಿರ್ವಹಣೆಯಲ್ಲಿ ವಿಫಲವಾಗಿರುವ ಅಭಿವೃದ್ದಿ ಶೂನ್ಯವಾಗಿರುವ ಪ್ರತಿಫಲದಿಂದ ತೆರಿಗೆಗಳ ಭಾರ ಕರ್ನಾಟಕದ ಜನರ ಮೇಲೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ವಿತಂಡವಾದ

ಬಸ್ ದರ ಏರಿಕೆಗೂ ರೈಲ್ವೆ ದರ ಏರಿಕೆಗೂ ಹೋಲಿಕೆ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ,  ರೈಲ್ವೆಗೂ ಬಸ್ ದರ ಹೆಚ್ಚಳಕ್ಕೂ ಹೋಲಿಕೆ ಮಾಡಿ ವಿತಂಡವಾದ ಮಾಡುವುದು ಸರಿಯಲ್ಲ. ಮುಖ್ಯಮಂತ್ರಿಗಳು ನಮ್ಮ ರಾಜ್ಯದ ಸಮಸ್ಯೆ ಬಗ್ಗೆ ಮಾತನಾಡಲಿ. ರಾಜ್ಯದಲ್ಲಿ ರಸ್ತೆ ಗುಂಡಿಗಳು ಬಿದ್ದಿವೆ. ಚಂದ್ರನ ಮೇಲೂ ಗುಂಡಿಗಳಿವೆ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ಕೇಳಿ ಬಂದಿರುವ ಆರೋಪದ ಕುರಿತು ಸೂಕ್ತ ತನಿಖೆಯಾಗಲಿ ಎಂದು ಇದೇ ವೇಳೆ ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News