ಹುಬ್ಬಳ್ಳಿ | ಡಕಾಯಿತಿ ನಡೆಸುತ್ತಿದ್ದ ಆರೋಪಿಯ ಕಾಲಿಗೆ ಗುಂಡಿಕ್ಕಿ ಬಂಧನ

Update: 2024-12-29 06:20 GMT

ಪಾಲಾ ವೆಂಕಟೇಶ್ವರ

ಹುಬ್ಬಳ್ಳಿ: ಅಂತಾರಾಜ್ಯ ಢಕಾಯತಿ, ಹಲ್ಲೆ ಪ್ರಕರಣಗಳ ಆರೋಪಿಯೋರ್ವನನ್ನು ವಿದ್ಯಾಗಿರಿ ಠಾಣೆಯ ಪೊಲೀಸರು ಕಾಲಿಗೆ ಗುಂಡಿಕ್ಕಿ ಶನಿವಾರ ಮುಂಜಾನೆ ಬಂಧಿಸಿದ್ದಾರೆ.

ಪಾಲಾ ವೆಂಕಟೇಶ್ವರ ಅಲಿಯಾಸ್ ಕಲ್ಯಾಣ್ ಕುಮಾರ್ ಬಂಧಿತ ಆರೋಪಿ.

ನವಲೂರಿನಲ್ಲಿ ವಿಕಾಸ್ ಕುಮಾರ್ ಎಂಬವರ ಮನೆಗೆ ನುಗ್ಗಿದ ತಂಡ ಢಕಾಯತಿಗೆ ಮುಂದಾಗಿದೆ. ಈ ವೇಳೆ ರೌಂಡ್ಸ್ ನಲ್ಲಿದ್ದ ವಿದ್ಯಾಗಿರಿ ಠಾಣೆಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ ಪಾಲಾ ವೆಂಕಟೇಶ್ವರ ಸೆರೆ ಸಿಕ್ಕಿದ್ದಾನೆ. ಆತನ ತಂಡದಲ್ಲಿ ಇನ್ನೂ 3-4 ಮಂದಿ ಇರುವುದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದ. ಅದರಂತೆ ಉಳಿದ ಆರೋಪಿಗಳ ಪತ್ತೆಗಾಗಿ ಪಾಲಾ ವೆಂಕಟೇಶ್ವರನನ್ನು ಇಂಡಸ್ಟ್ರಿಯಲ್ ಏರಿಯಾಕ್ಕೆ ಕರದೊಯ್ಯಲಾಗಿತ್ತು. ಈ ವೇಳೆ ಆರೋಪಿಗಳು ಏಕಾಏಕಿ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಆಗ ಸ್ಥಳದಲ್ಲಿದ್ದ ಪಿಎಸ್ಸೈ ಪ್ರಮೋದ್ ಎರಡು ರೌಂಡ್ ಫೈರಿಂಗ್ ಮಾಡಿದ್ದಾರೆ. ಇದರಿಂದ ಪಾಲಾ ವೆಂಕಟೇಶ್ವರನ ಎರಡೂ ಕಾಲಿಗೆ ಗುಂಡು ತಗುಲಿದೆ. ಗಾಯಗೊಂಡಿರುವ ಆತನನ್ನು ಸೆರೆ ಹಿಡಿದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಈತನೊಂದಿಗಿದ್ದ ತಂಡದ ಇನ್ನುಳಿದ ಸದಸ್ಯರು ಪರಾರಿಯಾಗಿದ್ದು, ಅವರಿಗಾರಿ ಶೋಧಕಾರ್ಯ ನಡೆದಿದೆ ಎಂದು ಅವರು ತಿಳಿಸಿದರು.

ಈ ಕಾರ್ಯಾಚರಣೆಯ ವೇಳೆ ಪಿಎಸ್ಐ ಪ್ರಮೋದ ಹಾಗೂ ಸಿಬ್ಬಂದಿ ಆನಂದ್ ಬಡಿಗೇರರಿಗೆ ಸ್ವಲ್ಪ

ಗಾಯಗಳಾಗಿದ್ದು, ಅವರು ಕೂಡಾ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೂಲತಃ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯವನಾಗಿರುವ ಪಾಲಾ ವೆಂಕಟೇಶ್ವರನ ವಿರುದ್ಧ ಆಂಧ್ರದ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಪ್ರಕರಣ ದಾಖಲಾಗಿವೆ. ಈತ ಮನೆಗೆ ನುಗ್ಗಿ ಮನೆಮಂದಿಯ ಬಟ್ಟೆ ಬಿಚ್ಚಿ ಥಳಿಸುತ್ತಿದ್ದ. ಕರ್ನಾಟಕ ಸೇರಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲೂ ಕಳ್ಳತನ ಕೃತ್ಯಗಳಲ್ಲಿ ಆರೋಪಿಯಾಗಿರುವ ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ 50ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News