ಹುಬ್ಬಳ್ಳಿ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣ | ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಮೃತ್ಯು : ಸಾವಿನ ಸಂಖ್ಯೆ 4ಕ್ಕೆ ಏರಿಕೆ
ಹುಬ್ಬಳ್ಳಿ : ಇಲ್ಲಿನ ಉಣಕಲ್‌ನ ಅಚ್ಚವ್ವ ಕಾಲನಿಯ ಈಶ್ವರ ದೇವಸ್ಥಾನದಲ್ಲಿ ಕಳೆದ ರವಿವಾರ ರಾತ್ರಿ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಗಂಭೀರ ಗಾಯಗೊಂಡಿದ್ದ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಇಂದು (ಶುಕ್ರವಾರ) ಮೃತಪಟ್ಟಿದ್ದಾನೆ. ಇದರೊಂದಿಗೆ ಈ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೇರಿದೆ.
ಲಿಂಗರಾಜ ಬೀರನೂರ(19) ಮೃತ ಅಯ್ಯಪ್ಪ ಮಾಲಾಧಾರಿ. ಬಾಕಿ ಐವರಿಗೆ ಚಿಕಿತ್ಸೆ ಮುಂದುವರೆದಿದೆ.
ಈಶ್ವರ ದೇವಸ್ಥಾನ ಬಳಿಯ ಕಟ್ಟಡದ ಮೇಲಂತಸ್ತಿನಲ್ಲಿ ತಂಗಿದ್ದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ರವಿವಾರ ರಾತ್ರಿ ಮಲಗಿದ್ದ ವೇಳೆ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಸ್ಫೋಟ ಸಂಭವಿಸಿತ್ತು. ಈ ವೇಳೆ ಬಾಲಕ ಸೇರಿ ಒಂಭತ್ತು ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಈ ಪೈಕಿ ಕೆಎಂಸಿಆರ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರಲ್ಲಿ ನಿಜಲಿಂಗಪ್ಪ ಬೇಪುರಿ ( 58) ಹಾಗೂ ಸಂಜಯ ಸವದತ್ತಿ (18) ಗುರುವಾರ ಬೆಳಗಿನ ಜಾವ ಮೃತಪಟ್ಟಿದ್ದರು. ಮತ್ತು ಓರ್ವ ಬಾಲಕ ರಾಜು ಕೃಷ್ಣ ಮುಗೇರಿ (16) ಇಂದು(ಶುಕ್ರವಾರ) ಮೃತಪಟ್ಟಿದ್ದಾನೆ.
ಇದುವರೆಗೆ ಈ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೇರಿದ್ದು, ಗಾಯಾಳುಗಳ ಪೈಕಿ ಐವರ ಸ್ಥಿತಿಯು ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.