ಕಾಂಗ್ರೆಸ್ ʼಗ್ಯಾರಂಟಿʼ ಹೆಸರಲ್ಲಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ : ಪ್ರಹ್ಲಾದ್ ಜೋಶಿ ಆಕ್ರೋಶ
ಹುಬ್ಬಳ್ಳಿ : ಕಾಂಗ್ರೆಸ್ ಸರಕಾರ ಗ್ಯಾರಂಟಿ ಹೆಸರಿನಲ್ಲಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ. ಎಲ್ಲಾ ದರ ಏರಿಕೆ ಮಾಡಿ ಜನ ಸಾಮಾನ್ಯರ ನಿತ್ಯದ ಜೀವನಕ್ಕೆ ಕುತ್ತು ತಂದಿದೆ. ವಿದ್ಯುತ್ ದರ, ಹಾಲಿನದರ, ಡೀಸೆಲ್, ಪೆಟ್ರೋಲ್ ದರ ರಾಜ್ಯದಲ್ಲಿ ಏರಿಕೆ ಮಾಡಿದ್ದಾರೆ. ಆಸ್ತಿ ನೊಂದಣಿ, ಮದ್ಯದ ದರ ಏರಿಕೆ ಮಾಡಿದ್ದರು, ಈಗ ಬಸ್ ದರ ಏರಿಕೆ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಈಗಾಗಲೇ ಹಿಮಾಚಲ ಪ್ರದೇಶದಲ್ಲಿ ಆಲ್ ಮೋಸ್ಟ್ ಗ್ಯಾರಂಟಿ ಯೋಜನೆ ನಿಲ್ಲಿಸುವ ಹಂತಕ್ಕೆ ಬಂದಿದೆ. ಕಾಂಗ್ರೆಸ್ ಅಧಿಕಾರಕ್ಕಾಗಿ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ.ಬರೀ ಸುಳ್ಳು ಹೇಳುತ್ತಾರೆ. ಸಾರಿಗೆ ನೌಕರಿಗೆ ಸಂಬಳ ನೀಡಲು ಇವರಿಗೆ ಆಗುತ್ತಿಲ್ಲ. ಸಾರಿಗೆ ಸಂಸ್ಥೆಗಳಿಗೆ ಸಾಲ ಮಾಡಲು ಅನುಮತಿ ನೀಡಿದ್ದಾರೆ. ರಾಜ್ಯ ಸರಕಾರ ದಿವಾಳಿಯಾಗಿದೆ. ಎಲ್ಲಾ ದರ ಏರಿಕೆ ಮಾಡಿ ಮತ್ತೆ ಜನಕ್ಕೆ ಫ್ರೀ ಕೊಡುತ್ತಾರೆ ಅಂತಾರೆ. ಒಬ್ಬರಿಂದ ಪಡೆದು ಮತ್ತೊಬ್ಬರಿಗೆ ಫ್ರೀ ಕೊಡುತ್ತಾರೆ. ಭ್ರಷ್ಟಾಚಾರ, ದುರಾಡಳಿತ ಕಾರಣದಿಂದ ಕರ್ನಾಟಕ ಆದಾಯ ಇಲ್ಲದ ರಾಜ್ಯವಾಗುತ್ತಿದೆ ಎಂದರು.
ಮಹಾನಗರ ಪಾಲಿಕೆ ಧಾರವಾಡ ಜನರ ಆಸೆಯಾಗಿತ್ತು. ಜನರ ಆಸೆಗೆ ತಕ್ಕಂತೆ ವಿಭಜನೆಯಾಗಿದೆ. ನಮ್ಮ ಸರಕಾರ ಇದ್ದಾಗಲೂ ಇದಕ್ಕೆ ಮ್ಯೂಮೆಂಟ್ ಮಾಡಿದ್ದೆವು. ಹೊಸ ಪಾಲಿಕೆ ರಚನೆಯಿಂದ ಧಾರವಾಡ ಅಭಿವೃದ್ಧಿಯಾಗಲಿ ಎಂದು ಶುಭ ಹಾರೈಸಿದರು.