ಹುಬ್ಬಳ್ಳಿ | ಕ್ಷುಲ್ಲಕ ವಿಚಾರಕ್ಕೆ ಯುವಕನಿಗೆ ಚೂರಿ ಇರಿತ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಹುಬ್ಬಳ್ಳಿ : ಕ್ಷುಲ್ಲಕ ವಿಚಾರಕ್ಕೆ ಯುವಕನೊಬ್ಬನಿಗೆ ಚಾಕು ಇರಿದ ಘಟನೆ ಅಯೋಧ್ಯೆ ನಗರದ ವಾಟರ್ ಟ್ಯಾಂಕ್ ಬಳಿ ನಡೆದಿದೆ. ಚೂರಿ ಇರಿತಕ್ಕೊಳಗಾದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚೂರಿ ಇರಿತಕ್ಕೆ ಒಳಗಾದ ಯುವಕನನ್ನು ಅಂಬೇಡ್ಕರ್ ಕಾಲೊನಿಯ ನಿವಾಸಿ ಮಾರುತಿ ಎಂದು ಗುರುತಿಸಲಾಗಿದೆ. ಸಂಜೆ ವಾಟರ್ ಟ್ಯಾಂಕ್ ಬಳಿ ನಿಂತಿದ್ದಾಗ ಮೂರ್ನಾಲ್ಕು ಯುವಕರು ಮಾರುತಿಗೆ ಚೂರಿ ಇರಿದು ಪರಾರಿಯಾಗಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಾರುತಿಯ ಬೆನ್ನು ಹಾಗೂ ಪಕ್ಕೆಲುಬಿಗೆ ಚಾಕು ಇರಿಯಲಾಗಿದ್ದು, ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಮಾರುತಿಯನ್ನು ಆತನ ಸಹೋದರ ಆಸ್ಪತ್ರೆಗೆ ದಾಖಲಿಸಿದ್ದಾನೆ. ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಕಿಮ್ಸ್ ಆಸ್ಪತ್ರೆಗೆ ಕಾನೂನು ಸುವ್ಯವಸ್ಥೆ ಡಿಸಿಪಿ ನಂದಗಾವಿ ಭೇಟಿ ನೀಡಿ ಗಾಯಾಳು ಹಾಗೂ ಸಂಬಂಧಿಕರಿಂದ ಮಾಹಿತಿಯನ್ನು ಪಡೆದಿದ್ದಾರೆ.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೋಲಿಸರು ಕೊಲೆ ಯತ್ನದ ಪ್ರಕರಣವನ್ನು ದಾಖಲು ಮಾಡಿಕೊಂಡು ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಮತ್ತೊಂದೆಡೆ, ಕ್ಷುಲ್ಲಕ ವಿಚಾರಕ್ಕೆ ಯುವಕರ ಗುಂಪೊಂದು ಮೂರು ಜನರ ಮೇಲೆ ಹಲ್ಲೆ ಮಾಡಿರುವ ಘಟನೆ ಬಿಡನಾಳದ ಕೆಎಲ್ಇ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.
ಗಾಯಗೊಂಡವರನ್ನು ಸಂತೋಷ (54), ಬಚ್ಚು (40), ಬಿಕ್ರಮ (34) ಎಂದು ಗುರುತಿಸಲಾಗಿದೆ. ನೀರಿನ ವಿಚಾರಕ್ಕೆ ಅದೇ ಕೆಎಲ್ಇ ಸಂಸ್ಥೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಹತ್ತಾರು ಜನರ ಗುಂಪು ಏಕಾಏಕಿ ದಾಳಿ ಮಾಡಿ ಮಾಡಿದೆ. ಈ ವೇಳೆ ಕಟ್ಟಿಗೆಯಿಂದ ಹಲ್ಲೆ ಮಾಡಿದ ಪರಿಣಾಮ ಸಂತೋಷ, ಬಚ್ಚು ಎಂಬಾತನಿಗೆ ಗಂಭೀರವಾಗಿ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ವಿಷಯ ತಿಳಿದು ಕಿಮ್ಸ್ ಆಸ್ಪತ್ರೆಗೆ ಕಸಬಾಪೇಟೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.