ಹುಬ್ಬಳ್ಳಿ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣ | ಮತ್ತಿಬ್ಬರು ಅಯ್ಯಪ್ಪ ವ್ರತಧಾರಿಗಳು ಮೃತ್ಯು: ಸಾವಿನ ಸಂಖ್ಯೆ 6ಕ್ಕೆ ಏರಿಕೆ
ಹುಬ್ಬಳ್ಳಿ: ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ಡಿ.22ರಂದು ಸಿಲಿಂಡರ್ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಸಂಭವಿಸಿದ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತಿಬ್ಬರು ಅಯ್ಯಪ್ಪ ವ್ರತಧಾರಿಗಳು ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಇದರೊಂದಿಗೆ ಈ ದುರಂತದಲ್ಲಿ ಮಡಿದವರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.
ಶಂಕರ ಬಸವರಾಜ ಉರವಿ( 29) ಮತ್ತು ಮಂಜುನಾಥ ವಾಗ್ಮೋಡೆ (22 ವರ್ಷ) ಮೃತಪಟ್ಟ ಅಯ್ಯಪ್ಪ ವ್ರತಧಾರಿಗಳು. ಕಿಮ್ಸ್ ಆಸ್ಪತ್ರೆಯಲ್ಲೇ ವಾರ್ಡ್ ಬಾಯ್ ಆಗಿದ್ದ ಶಂಕರ ಬಸವರಾಜ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟರೆ, 10 ನಿಮಿಷಗಳ ಅಂತರದಲ್ಲಿ ಮಂಜುನಾಥ ವಾಗ್ಮೋಡೆ ಕೂಡಾ ಅದೇ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಕೊನೆಯುಸಿರೆಳೆದಿದ್ದಾರೆ.
ಹುಬ್ಬಳ್ಳಿಯ ಉಣಕಲ್ ಸಮೀಪ ಇರುವ ಅಚ್ಚವ್ಚನ ಕಾಲನಿಯ ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ಡಿಸೆಂಬರ್ 22ರಂದು ರಾತ್ರಿ ಸಿಲಿಂಡರ್ ಸ್ಫೋಟಗೊಂಡು ಒಂಭತ್ತು ಮಂದಿ ಅಯ್ಯಪ್ಪ ವ್ರತಧಾರಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ನಗರದ ಕಿಮ್ಸ್ಗೆ ದಾಖಲಿಸಲಾಗಿತ್ತು. ಈ ಪೈಕಿ ಆರು ಮಂದಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಮೂವರಿಗೆ ಚಿಕಿತ್ಸೆ ಮುಂದುವರಿದಿದೆ.