ಅಂಬೇಡ್ಕರ್ ಗೆ ಅವಹೇಳನ ಖಂಡಿಸಿ ದಲಿತ ಸಂಘಟನೆಗಳಿಂದ ಹುಬ್ಬಳ್ಳಿ-ಧಾರವಾಡ ಬಂದ್
ಹುಬ್ಬಳ್ಳಿ: ಸಂಸತ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಖಂಡಿಸಿ ವಿವಿಧ ದಲಿತ ಸಂಘಟನೆಗಳು ಕರೆ ನೀಡಿರುವ ಹುಬ್ಬಳ್ಳಿ-ಧಾರವಾಡ ಬಂದ್ ಗೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಗುರುವಾರ ಬೆಳಗ್ಗೆಯಿಂದಲೇ ಅಂಗಡಿ, ಹೋಟೆಲ್ ಗಳು ಬಂದ್ ಆಗಿವೆ. ಮೆಡಿಕಲ್ ಗಳು ಮಾತ್ರ ತೆರದಿವೆ. ಬಸ್ ಗಳು ಸಂಚರಿಸುತ್ತಿಲ್ಲ. ವಾಹನಗಳ ಸಂಚಾರ ತೀರಾ ವಿರಳವಾಗಿದೆ. ಹಾಲಿನ ವಾಹನ, ಆ್ಯಂಬುಲೆನ್ಸ್ ಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಬಂದ್ ಗೆ ಕಾಂಗ್ರೆಸ್ ಪಕ್ಷ ಸೇರಿದಂತೆ 10ಕ್ಕೂ ಅಧಿಕ ಸಂಘಟನೆಗಳು ಬೆಂಬಲ ಸೂಚಿಸಿದ್ದರಿಂದ ನಗರದಲ್ಲಿ ಪೂರಕ ಸ್ಪಂದನ ವ್ಯಕ್ತವಾಗಿದೆ.
ಈ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಅಂಬೇಡ್ಕರ್ ಪೋಟೋ ಹಿಡಿದು ಪ್ರತಿಭಟನೆ ನಡೆಸಿ, ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆಯನ್ನು ಖಂಡಿಸಿದರು. ಧಾರವಾಡ ಜುಬಿಲಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದರು. ಜೈ ಭೀಮ್ ಘೋಷಣೆ ಕೂಗಿದರು.
ಬಂದ್ ಕರೆಯ ಹಿನ್ನೆಲೆಯಲ್ಲಿ ಇಂದು ಅವಳಿ ನಗರದ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತವು ಮೊದಲೇ ರಜೆ ಘೋಷಿಸಿದೆ. ಆದರೆ ಇಂದು ಬೆಳಗ್ಗೆ ನಗರದಲ್ಲಿ ಬಸ್ ಗಳ ಓಡಾಟ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರ ಪರದಾಡುವಂತಾಗಿತ್ತು.
ಬಲವಂತದ ಬಂದ್ ಗೆ ಅವಕಾಶ ಇಲ್ಲ: ಪೊಲೀಸ್ ಆಯುಕ್ತ ಶಶಿಕುಮಾರ್
ಬಂದ್ ಹಿನ್ನೆಲೆಯಲ್ಲಿ ಅವಳಿ ನಗರಗಳಲ್ಲಿ ರಾತ್ರಿಯಿಂದಲೇ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದೆ. 2000ಕ್ಕೂ ಹೆಚ್ಚು ಪೊಲೀಸ್, ಹೋಮ್ ಗಾರ್ಡ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಲವಂತದ ಬಂದ್ ಗೆ ಅವಕಾಶ ಇಲ್ಲ. ಇಲ್ಲಿಯ ವರೆಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಅಲ್ಲಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳಿದರು.