ʼಜಾತಿಗಣತಿಯ ವರದಿʼಯ ಮಾಹಿತಿ ಜನಸಮುದಾಯಕ್ಕೆ ಗೊತ್ತಾಗಬೇಕು : ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು: ಜಾತಿಗಣತಿ ವರದಿಯ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುವುದು ಈಗಿನ ಕೆಲಸ. ಅನುಷ್ಠಾನಗೊಳಿಸುವುದು ಸರಕಾರದ ವಿವೇಚನೆಗೆ ಬಿಟ್ಟಿರುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಹೇಳಿದರು.
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ವರದಿಯ ಸೀಲ್ಡ್ ಕವರ್‌ನ್ನು ಸಚಿವ ಸಂಪುಟ ಸಭೆಯಲ್ಲಿ ತೆರೆಯಬೇಕು. ಅದಕ್ಕು ಮುಂಚೆ ತೆರೆಯಬಾರದು. ಒಂದು ವೇಳೆ ತೆರೆದರೆ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇರುತ್ತದೆ ಎಂದರು.
ವರದಿ ಬಗ್ಗೆ ಚರ್ಚೆ ಆಗುತ್ತದೆಯೇ ಎಂಬುದರ ಕುರಿತು ಹೇಳಲಾಗುವುದಿಲ್ಲ. ಒಂದಷ್ಟು ವಿಷಯಗಳು ಗೊತ್ತಾಗುತ್ತವೆ. ಸರಕಾರವು 160 ಕೋಟಿ ರೂ. ಖರ್ಚು ಮಾಡಿ ವರದಿ ತರಿಸಿಕೊಳ್ಳಲಾಗಿದೆ. ವರದಿಯಲ್ಲಿರುವ ಅಂಶಗಳು ಸಾರ್ವಜನಿಕರಿಗೆ ಗೊತ್ತಾಗಬೇಕಲ್ಲವೇ? ಅನುಷ್ಠಾನಗೊಳಿಸುವುದು ಸರಕಾರದ ವಿವೇಚನೆಗೆ ಬಿಟ್ಟಿರುವ ವಿಚಾರ. ಸರಕಾರದ ತೀರ್ಮಾನ ಅಂತಿಮ ಎಂದು ಹೇಳಿದರು.
ಸಮುದಾಯಗಳ ಸಭೆಗಳನ್ನು ಪಕ್ಷವೇ ಮಾಡಲಿ. ಅದರಲ್ಲಿ ಏನು ತಪ್ಪಿದೆ. ನಮಗೆ ನಮ್ಮ ಸಮಸ್ಯೆ ಬಗೆಹರಿಯಬೇಕು. ಪಕ್ಷ ಅಂದರೆ ನಾವಲ್ಲವೇ? ಪಕ್ಷ ಅಂದರೆ ಬೇರೆ ಇದೆಯಾ? ನಾವೇ ಪಕ್ಷ, ನಾವಿದ್ದರೆ ಪಕ್ಷ. ಜನಸಮುದಾಯ ಕಟ್ಟಿರುವ ಪಕ್ಷ ಅಲ್ಲವೇ ಕಾಂಗ್ರೆಸ್. ಕಾಂಗ್ರೆಸ್ ಪಕ್ಷವೇ ಒಂದು ಆಂದೋಲನ. ನಮ್ಮದು ಕೇಡರ್ ಪಾರ್ಟಿ ಅಲ್ಲ ಎಂದರು.
ಸಚಿವ ತಿಮ್ಮಾಪುರ ಅವರು ಮುಖ್ಯಮಂತ್ರಿಯಾಗುವ ಇಂಗಿತ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ತಿಮ್ಮಾಪುರ ಅವರಿಗೆ ಸಾಮರ್ಥ್ಯ ಇದೆಯಲ್ಲವೇ. ಮೂವತ್ತು ವರ್ಷಕ್ಕೂ ಹೆಚ್ಚು ರಾಜಕೀಯ ಮಾಡಿದ್ದಾರೆ. ಸಿಎಂ ಬದಲಾವಣೆ ವಿಚಾರದ ಕುರಿತು ಯಾರು ಮಾತನಾಡಬಾರದು ಎಂದು ಹೈಕಮಾಂಡ್ ಪ್ರತಿನಿಧಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರು ಹೇಳಿದ್ದಾರೆ. ಹೀಗಾಗಿ ಅದರೆ ಬಗ್ಗೆ ಕಡಿಮೆ ಮಾತನಾಡುತ್ತೇವೆ ಎಂದು ಹೇಳಿದರು.
ಒತ್ತಾಯಪೂರ್ವಕವಾಗಿ ಮಾಡಿಸಿದ್ದರೆ ಕ್ರಮ :
ಹಸುವಿನ ಮೇಲೆ ಹಲ್ಲೆ ನಡೆಸಿರುವ ಪ್ರಕರಣದ ಓರ್ವನನ್ನು ಬಂಧಿಸಲಾಗಿದೆ. ಆತನಿಗೆ ಯಾರಾದರು ಸಹಕಾರ ನೀಡಿದ್ದಾರೆಯೇ ಎಂಬುದು ತನಿಖೆಯಲ್ಲಿ ಹೊರಬರುತ್ತದೆ. ಆತನಿಂದ ಯಾರಾದರು ಒತ್ತಾಯ ಪೂರ್ವಕವಾಗಿ ಮಾಡಿಸಿರುವುದು ಹೊರಬಂದರೆ ಕ್ರಮ ಕೈಗೊಳ್ಳುತ್ತಾರೆ. ಈ ವಿಚಾರದಲ್ಲಿ ಬಿಜೆಪಿಯವರು, ಇಷ್ಟ ಬಂದಂತೆ ಮಾತನಾಡಿರುವುದಕ್ಕೆಲ್ಲ ಉತ್ತರಿಸಲು ಆಗುವುದಿಲ್ಲ. ಘಟನೆಗೆ ಬಿಜೆಪಿಯವರೇ ಸಹಕರಿಸಿದ್ದಾರೆ ಎಂದು ನಾನು ಹೇಳುತ್ತೇನೆ. ಆ ರೀತಿ ಆಗುತ್ತದೆಯೇ? ಎಲ್ಲದರಲ್ಲೂ ರಾಜಕೀಯ ಮಾಡಿದರೆ ಜನ ಗಮನಿಸುತ್ತಾರೆ ಎಂದು ಹೇಳಿದರು.