ರಸ್ತೆಯಲ್ಲಿ ನಮಾಝ್ ಕುರಿತ ಪ್ರಶ್ನೆ : ಪಾಡ್ ಕಾಸ್ಟ್ ಚರ್ಚೆಯ ವಿಡಿಯೋ ವೈರಲ್!

Update: 2025-03-30 20:05 IST
ರಸ್ತೆಯಲ್ಲಿ ನಮಾಝ್ ಕುರಿತ ಪ್ರಶ್ನೆ : ಪಾಡ್ ಕಾಸ್ಟ್ ಚರ್ಚೆಯ ವಿಡಿಯೋ ವೈರಲ್!
  • whatsapp icon

ಬೆಂಗಳೂರು: ಈದ್‌ ದಿನ ರಸ್ತೆಯಲ್ಲಿ ನಮಾಝ್ ಮಾಡುವ ಕುರಿತ ಪ್ರಶ್ನೆ ಕೇಳಲಾದ ಪಾಡ್ ಕಾಸ್ಟ್ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. The Sujit Kumar Show ಎಂಬ ಯೂಟ್ಯೂಬ್ ಚಾನೆಲ್ ನ ಪಾಡ್ ಕಾಸ್ಟ್ ಶೋ ನಲ್ಲಿ ಕಾಂಗ್ರೆಸ್ ನಾಯಕ ಮತ್ತು ಆಲ್ ಇಂಡಿಯಾ ಮಿಲ್ಲಿ ಕಾಂಗ್ರೆಸ್ ನ ಸೈಯ್ಯದ್ ಶಫೀಯುಲ್ಲಾ ಸಾಹೇಬ್ ಅವರು ನಡೆಸಿದ ಚರ್ಚೆ ಸಾಕಷ್ಟು ಗಮನ ಸೆಳೆದಿದೆ.

ರಸ್ತೆಯಲ್ಲಿ ನಮಾಝ್ ವಿಚಾರವಾಗಿ ಪ್ರಶ್ನೆಯೆತ್ತಿದ ಪಾಡ್ ಕಾಸ್ಟ್ ಶೋ ನಡೆಸಿಕೊಡುವ ಸುಜಿತ್ ಕುಮಾರ್ ಅವರು, ಸೈಯ್ಯದ್ ಶಫೀಯುಲ್ಲಾ ಅವರ ಉತ್ತರ ಮತ್ತು ಮರುಪ್ರಶ್ನೆಗಳಿಗೆ ಉತ್ತರಿಸಲಾಗದೇ ತಿಣುಕಾಡಿರುವುದು ವೀಡಿಯೊದಲ್ಲಿ ಸೆರೆಯಾಗಿದೆ.

ವಿಸ್ತ್ರತವಾಗಿ ವಿವಿಧ ವಿಚಾರಗಳ ಕುರಿತು ಸಾಗಿದ ಚರ್ಚೆಯ ಒಂದು ಹಂತದಲ್ಲಿ ಸುಜಿತ್ ಕುಮಾರ್ ಅವರು ರಸ್ತೆಯಲ್ಲಿ ನಮಾಝ್ ಮಾಡುವ ಕುರಿತು ಸಯ್ಯದ್ ಶಫೀಯುಲ್ಲಾ ಅವರನ್ನು ಪ್ರಶ್ನಿಸುತ್ತಾರೆ.

ಮುಸ್ಲಿಮರು ರಸ್ತೆಯಲ್ಲಿ ನಮಾಝ್ ಮಾಡುತ್ತಾರೆ. ರಸ್ತೆಯೇ ಮಸೀದಿ ಎಂದು ಭಾವಿಸಿ ನಮಾಝ್ ಮಾಡುತ್ತಾರೆ. ಅಲ್ಲದೇ ಬೀದಿಗಳು, ಉದ್ಯಾನವನಗಳು ಹೀಗೆ ಎಲ್ಲೆಂದರಲ್ಲಿ ನಮಾಝ್ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಸುಜಿತ್ ಕುಮಾರ್ ಅವರು ಶಫಿಯುಲ್ಲಾ ಅವರನ್ನು ಪ್ರಶ್ನಿಸುತ್ತಾರೆ.

ಅದಕ್ಕೆ ಪ್ರಯುತ್ತರವಾಗಿ ಶಫೀಯುಲ್ಲಾ ಅವರು, ಈ ದೇಶದಲ್ಲಿ ನ್ಯಾಯ ಎಲ್ಲರಿಗೂ ಒಂದೇ ಅಲ್ಲವೇ? ಎಲ್ಲರೂ ಸಮಾನ ನಾಗರೀಕರಲ್ಲವೇ? ರಸ್ತೆಯಲ್ಲಿ ಮುಸ್ಲಿಮರು ಮಾತ್ರ ನಮಾಝ್ ಮಾಡುವುದೇ? ಹಿಂದೂಗಳು ಏನೂ ಮಾಡುವುದಿಲ್ಲವೇ? ಎಂದು ಮರುಪ್ರಶ್ನೆ ಮಾಡುತ್ತಾರೆ.

ಆರಂಭದಲ್ಲಿ ಶಫೀಯುಲ್ಲಾ ಅವರ ಪ್ರಶ್ನೆಗೆ ಏನೂ ಉತ್ತರ ಕೊಡದೇ, ಹಾ… ಹಾ… ಎಂದಷ್ಟೇ ಹೇಳಿದ ಸುಜಿತ್ ಕುಮಾರ್, ಒಂದು ಹಂತದಲ್ಲಿ ಹಿಂದೂಗಳು ರಸ್ತೆಯಲ್ಲಿ ಏನೂ ಮಾಡುವುದಿಲ್ಲ ಎನ್ನುತ್ತಾರೆ. ಆಗ ಶಫೀಯುಲ್ಲಾ ನಿಮಗೆ ತಿಳಿದಿರದಿದ್ದರೆ ನಾನೇ ಆ ಬಗ್ಗೆ ಹೇಳಲೇ? ಹಿಂದೂಗಳು ರಸ್ತೆಯಲ್ಲಿ ಯಾವ ಆಚರಣೆಗಳನ್ನೂ ಮಾಡುವುದಿಲ್ಲವೇ ಎಂದು ಪ್ರಶ್ನಿಸುತ್ತಾರೆ. ಆ ವೇಳೆ ಸುಜಿತ್ ಕುಮಾರ್ ಅವರು ಹಿಂದೂಗಳು ರಸ್ತೆಯಲ್ಲಿ ಧಾರ್ಮಿಕ ಆಚರಣೆ ಮಾಡುತ್ತಾರೆ ಎಂದು ಒಪ್ಪಿಕೊಳ್ಳುತ್ತಾರೆ.

ಕನ್ವರ್ ಯಾತ್ರಾರ್ಥಿಗಳು ಎಲ್ಲಿ ಹೋಗುತ್ತಾರೆ? ನೀವು ನನಗೆ ಗೊತ್ತಿಲ್ಲ ಎಂದು ಹೇಳುತ್ತೀರಿ. ಜವಾಬ್ದಾರಿಯುತ ನಾಗರಿಕರಾಗಿ ಈ ಬಗ್ಗೆ ಹೇಳಿ ಎಂದು ಶಫೀಯುಲ್ಲಾ ತೀವ್ರವಾಗಿಯೇ ಪ್ರಶ್ನಿಸುತ್ತಾರೆ.

ಮುಂದುವರಿದು ಅವರು, ಹಿಂದೂಗಳು ಗಣೇಶ ಹಬ್ಬಕ್ಕೆ ಎಷ್ಟುದಿನ ಗಣೇಶ ಮೂರ್ತಿ ಕೂರಿಸುತ್ತಾರೆ? ಮನೆಯೊಳಗೆ ಕೂರಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಆಗ ಸುಜಿತ್ ಕುಮಾರ್ ಅವರು, ಗಣೇಶ ಮೂರ್ತಿಯನ್ನು 1,3,5,7 ದಿನ ಬೀದಿಯಲ್ಲಿ ಕೂರಿಸುತ್ತಾರೆ ಎನ್ನುತ್ತಾರೆ. ಅದಕ್ಕೆ ಶಫೀಯುಲ್ಲಾ ನಮ್ಮ ಕಡೆ ಇಷ್ಟು ದಿನಗಳು, ಮುಂಬೈನಲ್ಲಿ ಎಷ್ಟು ದಿನ ಬೀದಿಯಲ್ಲಿ ಕೂರಿಸುತ್ತಾರೆ ನಿಮಗೆ ತಿಳಿದಿದೆಯಾ? ಮುಂಬೈನ ಲಾಲ್ ಬಾಗ್ ಗಣೇಶನನ್ನು ಬೀದಿಯಲ್ಲಿ, ರಸ್ತೆಯಲ್ಲಿ ತಿಂಗಳ ಕಾಲ ಇರಿಸುತ್ತಾರಲ್ಲವೇ ಎಂದು ಹೇಳಿರುವುದು ವೀಡಿಯೊದಲ್ಲಿದೆ.

ಕೃಷ್ಣ ಜನ್ಮಾಷ್ಟಮಿಗೂ ಮೊಸರು ಕುಡಿಕೆಗೂ ಇದೇ ಪರಿಪಾಠವಿದೆಯಲ್ಲವೇ ಎಂದು ಅವರು ಸುಜಿತ್ ಕುಮಾರ್ ಗೆ ಹೇಳಿದ್ದಾರೆ. ದಕ್ಷಿಣ ಭಾರತದಲ್ಲಿ ನಡೆಯುವ ಕರಗ ಉತ್ಸವದ ಬಗ್ಗೆಯೂ ಹೇಳಿರುವ ಶಫೀಯುಲ್ಲಾ ಅದೂ ರಸ್ತೆಯಲ್ಲಿ ನಡೆಯುವ ಧಾರ್ಮಿಕ ಆಚರಣೆ ಎಂದು ನೆನಪಿಸಿದ್ದಾರೆ.

ಮುಂದುವರಿದು ಮಾತನಾಡಿರುವ ಶಫೀಯುಲ್ಲಾ ನಾನು ಈ ಪ್ರಶ್ನೆಯನ್ನು ನಿಮ್ಮಂತಹ ಹಲವರಿಗೆ ಕೇಳಿದ್ದೇನೆ. ನಮಾಝ್ ನಿರ್ವಹಿಸಿವುದು ಹೆಚ್ಚೋ? ಗಣೇಶನನ್ನು ಕೂರಿಸುವುದು ಹೆಚ್ಚೋ ನೀವೇ ಹೇಳಿ. ಗಣೇಶನನ್ನು ಕೂರಿಸುವ ಹಲವರು ನನ್ನ ಹಿಂದೂ ಸ್ನೇಹಿತರು ನನ್ನನ್ನೂ ಆ ಕಾರ್ಯಕ್ರಮಕ್ಕೆ ಕರೆಯುತ್ತಾರೆ. ನಾನೂ ಹೋಗಿದ್ದೇನೆ. ದಸರಾ ಸಂದರ್ಭದಲ್ಲಿಯೂ ಇದೇ ರೀತಿಯ ಆಚರಣೆಗಳು ನಡೆಯುತ್ತವೆ ಎಂದು ಶಫೀಯುಲ್ಲಾ ಹೇಳಿದ್ದಾರೆ.

ಎಲ್ಲ ಧರ್ಮಗಳ ಆಚರಣೆಗಳೂ ರಸ್ತೆಯಲ್ಲಿ ನಡೆಯುವಾಗ, ಅದೂ ದಿನಗಟ್ಟಲೆ, ವಾರಗಟ್ಟಲೆ ನಡೆಯುವಾಗ ಕೇವಲ ಒಂದು ಧರ್ಮದ ಆಚರಣೆ ಕೆಲವೇ ನಿಮಿಷ ನಡೆದ ಕೂಡಲೇ ಅದನ್ನು ಮಾತ್ರ ಎತ್ತಿಕೊಂಡು ದೊಡ್ಡ ವಿವಾದವಾಗಿಸುವುದು ಸರಿಯಲ್ಲ ಎಂದು ಶಫೀಯುಲ್ಲಾ ಅವರು ತಮ್ಮ ಉತ್ತರದ ಮೂಲಕ ಸಂದೇಶ ರವಾನಿಸಿದ್ದಾರೆ.

ಈ ಪಾಡ್ ಕಾಸ್ಟ್ ವೈರಲ್ ವೀಡಿಯೊಗೆ ಪ್ರತಿಕ್ರಿಯಿಸಿರುವ ಸರಾಹ್ ಡಿಯೋ ಎಂಬ ಬಳಕೆದಾರರು, ಯಾರೀ ಪಾಡ್ ಕಾಸ್ಟರ್? ಅವರ ಡಬಲ್ ಸ್ಟಾಂಡರ್ಡ್ ಪ್ರಶ್ನೆಗೆ ಉತ್ತರಿಸಲು ಸರಿಯಾದ ವ್ಯಕ್ತಿಯೇ ಬಂದಿದ್ದಾರೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News