ಹಸುವಿನ ಕೆಚ್ಚಲು ಕೊಯ್ದ ಪ್ರಕರಣ | ಸೂಕ್ತ ತನಿಖೆಗೆ ಆಗ್ರಹಿಸಿ ಬಿಜೆಪಿಯಿಂದ ರಾಜ್ಯಾದ್ಯಂತ ಪ್ರತಿಭಟನೆ : ಆರ್.ಅಶೋಕ್
ಬೆಂಗಳೂರು : ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕತ್ತರಿಸಿದ ಪ್ರಕರಣದ ಸೂಕ್ತ ತನಿಖೆಗೆ ಆಗ್ರಹಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಮಂಗಳವಾರ ಚಾಮರಾಜಪೇಟೆಯಲ್ಲಿ ಹಸುಗಳಿಗೆ ಪೂಜೆ ಸಲ್ಲಿಸಿ, ಮಾಲಕರಿಗೆ 1ಲಕ್ಷ ರೂ.ನಗದು ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಹಸುಗಳ ಕೆಚ್ಚಲು ಕತ್ತರಿಸಿದ್ದು, ರಕ್ತ ಸುರಿಯುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಆದರೆ, ಇದು ಒಬ್ಬರೇ ಮಾಡಿದ ಕೃತ್ಯವಲ್ಲ. ಇದರಲ್ಲಿ ಹಲವರು ಭಾಗಿಯಾಗಿದ್ದು, ಈ ಕುರಿತು ಪೊಲೀಸರು ಸರಿಯಾದ ತನಿಖೆ ಮಾಡಬೇಕಿತ್ತು ಎಂದರು.
ಪ್ರಯಾಗ್‍ರಾಜ್‍ನಲ್ಲಿ ಮಹಾಕುಂಭಮೇಳ ನಡೆಯುತ್ತಿದೆ. ಇಂತಹ ಸಮಯದಲ್ಲೇ ಈ ಕೃತ್ಯ ಮಾಡುವುದರ ಜೊತೆಗೆ ಹಸು ಮಾಲಕರಿಗೆ ಕಾಂಗ್ರೆಸ್ ಕಾರ್ಯಕರ್ತರು ಹಸುವನ್ನು ಪಡೆಯಲು ಒತ್ತಡ ಹೇರಿದ್ದಾರೆ. ಹಿಂದೂಗಳು ಬೇಡುವ ಸ್ಥಿತಿಯಲ್ಲಿಲ್ಲ. ಕಾಂಗ್ರೆಸ್‍ನವರು ಒಂದು ಕೈಯಲ್ಲಿ ಹಸುವನ್ನು ನೀಡಿ, ಮತ್ತೊಂದು ಕಡೆ ಅವರ ಕಡೆಯವರೇ ಹಸುವನ್ನು ಕತ್ತರಿಸುತ್ತಾರೆ. ನನಗೀಗ ಪೊಲೀಸರು ಹಾಗೂ ಸರಕಾರದ ಮೇಲೆ ಅನುಮಾನ ಎಂದು ಸಂಶಯ ವ್ಯಕ್ತಪಡಿಸಿದರು.
ಆರೋಪಿ ತನ್ನ ಜೇಬಿನಲ್ಲಿ ಬ್ಲೇಡ್ ಇಟ್ಟುಕೊಂಡು ಓಡಾಡುತ್ತಿದ್ದ, ಆತನಿಗೆ ಮತಿಭ್ರಮಣೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇಂತಹ ವ್ಯಕ್ತಿ ಹತ್ತು ವರ್ಷ ಕಾರ್ಖಾನೆಯಲ್ಲಿ ಕೆಲಸ ಮಾಡಲು ಸಾಧ್ಯವೇ? ಮುಂಜಾನೆ 3-4 ಗಂಟೆಗೆ ಆತ ಇಲ್ಲಿಗೆ ಬರಲು ಹೇಗೆ ಸಾಧ್ಯ? ಪಶು ಆಸ್ಪತ್ರೆ ಉಳಿವಿಗಾಗಿ ನಡೆದ ಹೋರಾಟದಲ್ಲಿ ಪಾಲ್ಗೊಂಡ ಕರ್ಣರ ಹಸುವಿನ ಕೆಚ್ಚಲನ್ನೇ ಕೊಯ್ದಿದ್ದೇಕೆ? ಎಂದು ಅವರು ಪಶ್ನಿಸಿದರು.
ಪಶು ಆಸ್ಪತ್ರೆ ಜಾಗ ಲೂಟಿಗೆ ಸಿಎಂ ಸಿದ್ದರಾಮಯ್ಯ ಖಾತೆ ತಿದ್ದುಪಡಿ ಮಾಡಿ ವಕ್ಫ್ ಮಂಡಳಿಗೆ ನೀಡಿದ್ದಾರೆ. ಹಸು ಮಾಲಕ ಕರ್ಣನ ಮೇಲೆ ದಾಳಿ ಮಾಡಲು ಸಾಧ್ಯವಾಗಿಲ್ಲ. ಆದರೆ ಹಸುವಿನ ಮೇಲೆ ದಾಳಿ ಮಾಡಿ ಕರ್ಣನಿಗೆ ಎಚ್ಚರಿಕೆ ನೀಡಿದ್ದಾರೆ. ಈ ಮತಬ್ಯಾಂಕ್ ರಾಜಕಾರಣಕ್ಕೆ ಹೆದರುವುದಿಲ್ಲ. ಇದು ಧರ್ಮಯುದ್ಧವಾಗಿದ್ದು, ಬಿಜೆಪಿ ಹೋರಾಟ ಮಾಡಲಿದೆ ಎಂದರು.
ತನಿಖೆ ಏಕೆ ಆಗಿಲ್ಲ: ಪರಿಷತ್ ಸದಸ್ಯ ಸಿ.ಟಿ.ರವಿ ಬಂಧಿಸಿ ಕಬ್ಬಿನ ಗದ್ದೆಯಲ್ಲಿ ಇರಿಸಲಾಗಿತ್ತು. ಆದರೆ ಈ ಪ್ರಕರಣದ ಆರೋಪಿಯನ್ನು ನೇರವಾಗಿ ಕೋರ್ಟ್‍ಗೆ ಹಾಜರುಪಡಿಸಲಾಗಿದೆ. ಪೊಲೀಸರು ತನಿಖೆ ಮಾಡಲು ಆರೋಪಿಯನ್ನು ಕಸ್ಟಡಿಗೆ ಪಡೆಯಬೇಕಿತ್ತು. ಅದನ್ನು ಮಾಡದೆ ತನಿಖೆ ಸ್ಥಗಿತಗೊಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.