ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ | ಮೂವರು ಆರೋಪಿಗಳಿಗೆ ಜಾಮೀನು
ಬೆಂಗಳೂರು : ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಧಾರವಾಡದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಇತ್ತೀಚೆಗೆ ಜಾಮೀನು ಮಂಜೂರು ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಎ1 ಪುಣೆಯ ಚಿಂಚವಾಡಾದ ಅಮೋಲ್ ಎ.ಕಾಳೆ, 2ನೇ ಆರೋಪಿಯಾದ ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್, 5ನೇ ಆರೋಪಿ ಮಹಾರಾಷ್ಟ್ರದ ಸಂಭಾಜಿ ನಗರದ ಶರದ್ ಕಲಾಸ್ಕರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶೆ ಪೂರ್ಣಿಮಾ ಎನ್.ಪೈ.ಪುರಸ್ಕರಿಸಿದ್ದಾರೆ.
ಈಗಾಗಲೇ ಪ್ರಕರಣದ ಆರೋಪಿಗಳಾದ ಪ್ರವೀಣ್, ವಾಸುದೇವ್ ಸೂರ್ಯವಂಶಿ, ಅಮಿತ್ ಬಡ್ಡಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ʼಪ್ರಕರಣದ ವಿಚಾರಣೆ ಶೀಘ್ರದಲ್ಲೇ ಮುಗಿಯುವ ಸಾಧ್ಯತೆಯೂ ಕಾಣುತ್ತಿಲ್ಲ. ಅರ್ಜಿದಾರರು ಜಾಮೀನು ಪಡೆಯಲು ಸೂಕ್ತ ಕಾರಣಗಳನ್ನು ನೀಡಿದ್ದಾರೆ’ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
2015ರ ಆಗಸ್ಟ್ 30ರಂದು ಧಾರವಾಡದ ಕಲ್ಯಾಣನಗರದಲ್ಲಿ ಕಲಬುರ್ಗಿ ಅವರಿಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಈ ಕುರಿತು ಧಾರವಾಡದ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.