ಕತ್ತಲಲ್ಲಿ ಕರಡಿ ಹುಡುಕುವಂತಾಗಿದೆ ಡಿ.ಕೆ.ಶಿವಕುಮಾರ್ ಕಥೆ: ಆರ್.ಅಶೋಕ್
ಬೆಂಗಳೂರು: ಸಿದ್ದರಾಮಯ್ಯ ಸಾವಿರ ಬಾರಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲವೆಂದು ಹೇಳಿದರೂ, ಎಲ್ಲ ನಾಯಕರು ಅಧಿಕಾರ ರಾಜಕಾರಣದಲ್ಲಿ ಮುಳುಗಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಕಥೆ ಕತ್ತಲಲ್ಲಿ ಕರಡಿಯನ್ನು ಹುಡುಕುವಂತಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕುರ್ಚಿ ಖಾಲಿ ಇಲ್ಲವೆಂದು ಮಾತನಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಮಂಡ್ಯಕ್ಕೆ ಹೋಗಿ ಅಧಿಕಾರ ಕೊಡಿ ಎಂದು ಜನರ ಮುಂದೆ ಹೇಳಿದ್ದರು. ಈಗ ಶಾಸಕರ ಮುಂದೆ ಹೋಗಿ ಅಂಗಲಾಚುತ್ತಿದ್ದಾರೆ. ಇವರ ಕಥೆ ಕತ್ತಲಲ್ಲಿ ಕರಡಿಯನ್ನು ಹುಡುಕುವಂತಾಗಿದೆ. ಈ ಪವರ್ ಶೇರಿಂಗ್ ಎಲ್ಲಿ ನಡೆದಿದೆ ಎಂದು ಜನರಿಗೆ ಸ್ಪಷ್ಟವಾಗಿ ತಿಳಿಸಲಿ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಶ್ಲೋಕ ಹೇಳಿದರೆ, ಸಚಿವ ಕೆ.ಎನ್.ರಾಜಣ್ಣ ಟೀಕೆ ಮಾಡುತ್ತಿದ್ದಾರೆ. ಸಚಿವ ಪರಮೇಶ್ವರ್ ಕೆಂಡಕಾರಿದ್ದಾರೆ. ಕೆಲವು ಶಾಸಕರು ಮುಂದಿನ ಸಿಎಂ ಶಿವಕುಮಾರ್ ಎನ್ನುತ್ತಿದ್ದಾರೆ. ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಬಂದು ಹೋದ ಬಳಿಕವೂ ಈ ಸಮಸ್ಯೆ ನಿವಾರಣೆಯಾಗುವುದಿಲ್ಲ. ಪವರ್ ಶೇರಿಂಗ್ ಬಗ್ಗೆ ಶಾಸಕರಿಗೆ ಸ್ಪಷ್ಟವಾಗಬೇಕಿದೆ ಎಂದು ಆರ್.ಅಶೋಕ್ ತಿಳಿಸಿದರು.
ರಾಜ್ಯದಲ್ಲಿ ಆಡಳಿತ ನೆಲ ಕಚ್ಚಿದೆ. ಅಭಿವೃದ್ಧಿ ಕಾರ್ಯವನ್ನು ಟಾರ್ಚ್ ಹಾಕಿ ಹುಡುಕಬೇಕಿದೆ. ಜನರು ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಇಂತಹ ಪಾಪಿ ಸರಕಾರ ಯಾಕಾದರೂ ಬಂತೆಂದು ಜನರು ಶಾಪ ಹಾಕುತ್ತಿದ್ದಾರೆ ಎಂದು ಆರ್.ಅಶೋಕ್ ಹೇಳಿದರು.