ಬೆಂಗಳೂರು ಸ್ಪೇಸ್ ಎಕ್ಸ್‌ ಪೋ-2024 | 17 ಶತಕೋಟಿ ಡಾಲರ್ ಆರ್ಥಿಕ ಮೌಲ್ಯ ಸೃಷ್ಟಿಸುವ ಗುರಿ : ಸಚಿವ ಪ್ರಿಯಾಂಕ್ ಖರ್ಗೆ

Update: 2024-09-18 14:27 GMT

ಬೆಂಗಳೂರು : ರಾಜ್ಯ ಸರಕಾರವು ಉದ್ಯಮ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಭವಿಷ್ಯದ ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಗೆ ರಾಜ್ಯವನ್ನು ಕೇಂದ್ರವಾಗಿಸಲು ಹಲವು ಪ್ರಯತ್ನಗಳನ್ನು ನಡೆಯುತ್ತಿದೆ. ನಾವು ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ.40ರಷ್ಟು ಪಾಲನ್ನು ನಿಯಂತ್ರಿಸುವ ಮೂಲಕ 17 ಶತಕೋಟಿ ಡಾಲರ್ ಆರ್ಥಿಕ ಮೌಲ್ಯವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬುಧವಾರ ನಗರದ ಹೊರವಲಯದಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆ ವತಿಯಿಂದ ಆಯೋಜಿಸಲಾಗಿರುವ ಬಾಹ್ಯಾಕಾಶ ಎಕ್ಸ್‌ ಪೋ 2024 ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ನಾವೀನ್ಯತೆ ಮತ್ತು ಅಭಿವೃದ್ಧಿಯಲ್ಲಿ ತನ್ನ ಬದ್ಧತೆಯನ್ನು ಎತ್ತಿ ತೋರಿಸಲು ಕರ್ನಾಟಕ ಸಜ್ಜಾಗಿದೆ. ಈ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸರಕಾರಿ ನೀತಿ, ಎಂಎಸ್‍ಎಂಇ ಬೆಂಬಲ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಪರಿಸರ ವ್ಯವಸ್ಥೆಯನ್ನು ನಮ್ಮ ಸರಕಾರ ನಿರ್ಮಿಸಿದೆ ಎಂದು ಅವರು ತಿಳಿಸಿದರು.

ಬಾಹ್ಯಾಕಾಶ ಉದ್ಯಮದಲ್ಲಿ ರಾಜ್ಯವು ಪ್ರೇರಕ ಶಕ್ತಿಯಾಗಿ ಹೊರಹೊಮ್ಮಿದೆ. ಹೊಸ ನೀತಿಗಳು ಮತ್ತು ಕಾರ್ಯಕ್ರಮಗಳ ಮೂಲಕ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ವ್ಯಾಪಾರದ ಪ್ರಾರಂಭಕ್ಕಾಗಿ ಸರಕಾರ ಬೆಂಬಲ ನೀಡುತ್ತಾ ಬರುತ್ತಿದೆ ಎಂದು ಹೇಳಿದ ಪ್ರಿಯಾಂಕ್ ಖರ್ಗೆ, ಬಾಹ್ಯಾಕಾಶ ಕ್ಷೇತ್ರಕ್ಕೆ ಪ್ರತ್ಯೇಕ ರಾಜ್ಯ ನೀತಿ, ಹೂಡಿಕೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ಕೆಲಸದಲ್ಲಿ ಸರಕಾರ ನಿರತವಾಗಿದ್ದು, ಬಾಹ್ಯಾಕಾಶ ತಂತ್ರಜ್ಞಾನಗಳ ಕೇಂದ್ರವನ್ನು ಸ್ಥಾಪಿಸುವತ್ತ ಗಮನ ಹರಿಸಿದೆ ಎಂದು ಪ್ರಕಟಿಸಿದರು.

ಗಮನಾರ್ಹವಾಗಿ, ಬೆಂಗಳೂರು ಮೂಲದ ಸ್ಪೇಸ್‍ಟೆಕ್ ಸ್ಟಾರ್ಟ್‍ಅಪ್ ಪಿಕ್ಸ್‌ ಸೆಲ್ ಇತ್ತೀಚೆಗೆ ನಾಸಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅವರ 476 ಮಿಲಿಯನ್ ಡಾಲರ್ ವಾಣಿಜ್ಯ ಕಾರ್ಯಕ್ರಮಕ್ಕೆ ಸೇರಿಕೊಂಡಿದೆ, ಈ ಮೈಲಿಗಲ್ಲು ಇಸ್ರೋದ ಬಾಹ್ಯಾಕಾಶ ಸ್ಟಾರ್ಟ್ ಅಪ್ ಹಬ್‍ನಿಂದ ಕರ್ನಾಟಕದ ವಿಕಾಸವನ್ನು ಒತ್ತಿಹೇಳುತ್ತದೆ, ಬಾಹ್ಯಾಕಾಶ ವಲಯದಲ್ಲಿ ಅದರ ಜಾಗತಿಕ ನಾಯಕತ್ವವನ್ನು ಪುನರುಚ್ಚರಿಸುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಬೆಂಗಳೂರು ಬಾಹ್ಯಾಕಾಶ ಎಕ್ಸ್‌ ಪೋ 2024 ಮೂಲಕ ಭಾರತದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಗುರಿಯನ್ನು ಪೂರೈಸುವಲ್ಲಿ ರಾಜ್ಯದ ಬದ್ಧತೆಯನ್ನು ತೋರಿಸಲಾಗುತ್ತಿದ್ದು ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ಪ್ರಗತಿಯನ್ನು ಪ್ರದರ್ಶಿಸಲು ಇದೊಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News