ಯತ್ನಾಳ್ ಸ್ವಪ್ರತಿಷ್ಟೆಯಿಂದ ಪ್ರತ್ಯೇಕ ಹೋರಾಟ ನಡೆಸುತ್ತಿರುವುದು ಸರಿಯಲ್ಲ : ಯಡಿಯೂರಪ್ಪ
ಬೆಂಗಳೂರು : ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಕೆಲವರು ನಡೆಸುತ್ತಿರುವ ಪ್ರತ್ಯೇಕ ಹೋರಾಟವನ್ನು ಕೈಬಿಟ್ಟು, ನಮ್ಮೊಂದಿಗೆ ಕೈಜೋಡಿಸಿ ಎಂದು ಈಗಾಗಲೇ ವಿಜಯೇಂದ್ರ ಮನವಿ ಮಾಡಿದ್ದಾರೆ. ಆದರೂ, ಯತ್ನಾಳ್ ಸ್ವಪ್ರತಿಷ್ಟೆಯಿಂದ ಪ್ರತ್ಯೇಕ ಹೋರಾಟ ನಡೆಸುತ್ತಿರುವುದು ಸರಿಯಲ್ಲ ಎಂದು ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆಕ್ಷೇಪಿಸಿದರು.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪಕ್ಷವನ್ನು ಬಲಪಡಿಸುವ ದೃಷ್ಟಿಯಿಂದ ಎಲ್ಲರೂ ಸಹಕಾರ ನೀಡಬೇಕು. ಉಳಿದದ್ದು ಅವರಿಗೆ ಬಿಟ್ಟದ್ದು ಮತ್ತು ಕೇಂದ್ರದ ನಾಯಕರಿಗೆ ಬಿಟ್ಟದ್ದು. ಯತ್ನಾಳ್ ಪ್ರತ್ಯೇಕ ಹೋರಾಟದ ಬಗ್ಗೆ ಹೈಕಮಾಂಡ್ ಗಮನಕ್ಕೂ ಇದೆ. ಅವರು ಏನು ಮಾಡುತ್ತಾರೆ, ನೋಡೋಣ ಎಂದು ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದರು.
ನಿರೀಕ್ಷೆಗೆ ಮೀರಿ ಹಿನ್ನಡೆ : ‘ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷಕ್ಕೆ ನಮ್ಮ ನಿರೀಕ್ಷೆಗೆ ಮೀರಿ ಹಿನ್ನಡೆಯಾಗಿದ್ದು, ಈ ಕುರಿತು ಎಲ್ಲರೂ ಕೂತು ಸಮಾಲೋಚನೆ ನಡೆಸುತ್ತೇವೆ. ಮುಂದಿನ ದಿನಗಳಲ್ಲಿ ಹೀಗೆ ಆಗದಂತೆ ಎಚ್ಚರ ವಹಿಸುತ್ತೇವೆ’ ಎಂದು ಹೇಳಿದರು.
ಉಪಚುನಾವಣೆ ಸೋಲಿಗೆ ಯಡಿಯೂರಪ್ಪ ಅಥವಾ ವಿಜಯೇಂದ್ರ ಕಾರಣ ಎನ್ನುವ ಪ್ರಶ್ನೆ ಉದ್ಬವಿಸುವುದಿಲ್ಲ. ಪಕ್ಷದ ಎಲ್ಲರೂ ಜವಾಬ್ದಾರಿ. ಪಕ್ಷದಿಂದ ಏನು ಲೋಪ ಆಗಿದೆ ಎಂಬುದನ್ನು ಚರ್ಚೆ ಮಾಡಿ ಸರಿಪಡಿಸಿಕೊಳ್ಳುವ ಕೆಲಸ ಮಾಡುತ್ತೇವೆ ಎಂದು ನುಡಿದರು.