ಮಿಲಿಟರಿ ಶಾಲೆಗೆ ಅರ್ಜಿ ಆಹ್ವಾನ
ಬೆಂಗಳೂರು : ಉತ್ತರಾಖಂಡ ರಾಜ್ಯದ ಡೆಹರಾಡೂನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಶಾಲೆಗೆ 2026ನೇ ಸಾಲಿಗೆ 8ನೇ ತರಗತಿಗಾಗಿ ಪ್ರವೇಶ ಬಯಸುವ ರಾಜ್ಯದ ಬಾಲಕ-ಬಾಲಕಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತಾ ಪ್ರವೇಶ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ ಜೂ.1ರಂದು ನಡೆಸಲಾಗುವುದು. ಅರ್ಜಿ ಸಲ್ಲಿಸಲು 2025ರ ಮಾ.31 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಸರಕಾರಂದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ 7ನೆ ತರಗತಿಯಲ್ಲಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ ಹಾಗೂ 2026ರ ಜ.1ಕ್ಕೆ 11 ವರ್ಷದಿಂದ 13 ವರ್ಷದೊಳಗಿರುವ ಬಾಲಕ-ಬಾಲಕಿಯರು ಮಾತ್ರ ಪ್ರವೇಶ ಪರೀಕ್ಷೆಗೆ ಅರ್ಹರು.
ಕಾಲೇಜಿನಲ್ಲಿ ವರ್ಷವೊಂದಕ್ಕೆ ಪ್ರಸಕ್ತ ವಿದ್ಯಾಭ್ಯಾಸ ಶುಲ್ಕ ಸಾಮಾನ್ಯ ವರ್ಗಕ್ಕೆ 98,650 ರೂ. ಹಾಗೂ ಎಸ್‍ಸಿ-ಎಸ್‍ಟಿ ವರ್ಗಕ್ಕೆ 81,850 ರೂ.ಗಳಾಗಿರುತ್ತದೆ. ಇದು ಕಾಲ ಕಾಲಕ್ಕೆ ಹೆಚ್ಚಾಗಬಹುದು, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯು ಪ್ರವೇಶ ಸಮಯದಲ್ಲಿ 30ಸಾವಿರ ರೂ.ಭದ್ರತಾ ಠೇವಣಿ ನೀಡಬೇಕಾಗುತ್ತದೆ. ಈ ಮೊತ್ತವನ್ನು ವಿದ್ಯಾರ್ಥಿಯು ಪದವೀಧರರಾದ ಬಳಿಕ ಹಿಂತಿರುಗಿಸಲಾಗುವುದು.
ಪ್ರಾಸ್ಪೆಕ್ಟಸ್ ಕಮ್ ಅರ್ಜಿ ನಮೂನೆ ಮತ್ತು ಹಳೆಯ ಪಶ್ನೆ ಪತ್ರಿಕೆಗಳ ಕಿರುಪುಸ್ತಕವನ್ನು ರಾಷ್ಟ್ರೀಯ ಭಾರತೀಯ ಮಿಲಿಟರಿ ಕಾಲೇಜು, ಗರಹಿ ಕ್ಯಾಂಟ್, ಡೆಹ್ರಾಡೂನ್, ಉತ್ತರಾಖಂಡ್, ಪಿನ್-248 003 ಈ ವಿಳಾಸದ ಮೂಲಕ ಪಡೆಯಬಹುದು. ಸಾಮಾನ್ಯ ಅಭ್ಯರ್ಥಿಗಳಿಗೆ 600ರೂ. ಪರಿಶಿಷ್ಟ ಜಾತಿ ಮತ್ತು ಪಂಗಡ ಅಭ್ಯರ್ಥಿಗಳಿಗೆ 555ರೂ. ಆನ್‍ಲೈನ್ ಪಾವತಿ ಮಾಡಬೇಕು. ಜಾಲತಾಣ www.rimc.gov.in ನಲ್ಲಿ ಪಾವತಿ ಸ್ವೀಕರಿಸಿದ ನಂತರ ಪ್ರಾಸ್ಪೆಕ್ಟಸ್ ಕಮ್ ಅರ್ಜಿ ನಮೂನೆ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳ ಕಿರುಪುಸ್ತಕಗಳನ್ನು ಅಂಚೆ ಮೂಲಕ ರವಾನಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-2558 9459 ಅಥವಾ ಸಮೀಪದಲ್ಲಿರುವ ತಮ್ಮ ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಾರ್ಯಾಲಯವನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.