ಸಿದ್ದರಾಮಯ್ಯ ಬೇಕಾದರೂ ಕೆಪಿಸಿಸಿ ಅಧ್ಯಕ್ಷರಾಗಬಹುದು, ನಾನಂತೂ ಆಕಾಂಕ್ಷಿಯಲ್ಲ: ಡಿ.ಕೆ. ಸುರೇಶ್
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸೇರಿದಂತೆ ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಜನ ಕೊಟ್ಟ ತೀರ್ಪನ್ನು ಗೌರವಯುತವಾಗಿ ಸ್ವೀಕರಿಸಿದ್ದೇನೆ. ಈಗಾಗಲೇ ಸಿಎಂ ಸ್ಥಾನದಲ್ಲಿ ಒಬ್ಬರು ಕೂತಿದ್ದಾರೆ. ಪಕ್ಷದ ಅದ್ಯಕ್ಷ ಸ್ಥಾನದಲ್ಲಿ ಮತ್ತೊಬ್ಬರು ಕೂತಿದ್ದಾರೆ. ಆ ಸ್ಥಾನಗಳು ಖಾಲಿಯಾಗುವ ಸಂದರ್ಭದಲ್ಲಿ ಪಕ್ಷ ಅದರ ಬಗ್ಗೆ ಚರ್ಚೆ ಮಾಡಲಿದೆ’ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ನಾನು-ನೀವು ಇಲ್ಲಿ ಕೂತು ಚರ್ಚೆ ಮಾಡಿದರೆ ಅರ್ಥವಿಲ್ಲ. ಏನೇ ತೀರ್ಮಾನ ಮಾಡಬೇಕಾದರೂ ಪಕ್ಷದ ರಾಷ್ಟ್ರೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ತೀರ್ಮಾನ ಮಾಡಬೇಕು. ಆಕಾಂಕ್ಷಿಗಳಿದ್ದಾರೆ, ಅಧ್ಯಕ್ಷ ಸ್ಥಾನದಲ್ಲಿ ಶಿವಕುಮಾರ್ ಅವರೇ ಇರಬೇಕು ಎಂದೇನಿಲ್ಲ. ಅವರು ನಾಲ್ಕೈದು ವರ್ಷಗಳಿಂದ ಪಕ್ಷ ಸಂಘಟಿಸಿ ಅಧಿಕಾರಕ್ಕೆ ತಂದಿದ್ದಾರೆ. ಆ ಹುದ್ದೆಗೆ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ, ಡಾ.ಪರಮೇಶ್ವರ್ ಮತ್ತೊಮ್ಮೆ ಆದರೂ ಸಂತೋಷ. ಈ ಸ್ಥಾನ ಅಲಂಕರಿಸಬೇಕೆಂದು ಬೇರೆ ಯಾರಿಗೆ ಆತುರವಿದೆಯೋ ಅವರೇ ಆದರೂ ಸಂತೋಷ. ಯಾರೂ ಆಗಬಾರದು ಎಂಬುದೇನಿಲ್ಲ. ಪಕ್ಷದ ದೃಷ್ಟಿಯಿಂದ ಎಲ್ಲರನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗಬೇಕಾದ ಗುರುತರ ಜವಾಬ್ದಾರಿ ಎಲ್ಲ ನಾಯಕರ ಮೇಲಿದೆ. ಸಿದ್ದರಾಮಯ್ಯ ಅವರು ಬೇಕಾದರೂ ಅಧ್ಯಕ್ಷರಾಗಬಹುದು, ನಾನಂತೂ ಆಕಾಂಕ್ಷಿಯಲ್ಲ" ಎಂದು ತಿಳಿಸಿದರು.
ಅಧ್ಯಕ್ಷ ಸ್ಥಾನ ಬದಲಾವಣೆಗೆ ಪಕ್ಷದಲ್ಲಿ ಯಾರೂ ತರಾತುರಿಯಲ್ಲಿಲ್ಲ. ಪಕ್ಷದ ಏಳಿಗೆ, ಒಳಿತು ಬಯಸುವವರು, ಜನರ ಸಂಕಷ್ಟ ಅರಿತಿರುವವರು, ತಮ್ಮ ಮುಂದಿರುವ ಸವಾಲು ತಿಳಿದು ಪಕ್ಷವನ್ನು ಸಂಘಟಿಸುವವರು ಈ ಸ್ಥಾನಕ್ಕೆ ಆಯ್ಕೆಯಾಗಬೇಕು ಎಂದು ಚಿಂತನ ಮಂಥನ ಸಭೆ ನಡೆದರೆ ಒಳ್ಳೆಯದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಸುರೇಶ್ ತಿಳಿಸಿದರು.
ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ: ವಿಶೇಷ ಸಂದರ್ಭಗಳಲ್ಲಿ ಸಚಿವರು, ನಾಯಕರು ಒಟ್ಟಿಗೆ ಸೇರಿ ಔತಣಕೂಟ ನಡೆಸುವುದು ಸಾಮಾನ್ಯ. ಇದಕ್ಕೆ ರಾಜಕೀಯವಾಗಿ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಹೀಗೆ ಊಟಕ್ಕೆ ಸೇರಿದಾಗ ಹಲವಾರು ಚರ್ಚೆ ಮಾಡುವುದು ಸಾಮಾನ್ಯ. ಹೊಸವರ್ಷದ ಹಿನ್ನೆಲೆಯಲ್ಲಿ ಕೆಲವು ಸಚಿವರು ಔತಣಕೂಟಕ್ಕೆ ಸೇರಿದ್ದರು. ಅದರಲ್ಲಿ ಸಿಎಂ ಸೇರಿದ್ದಾರೆ. ಇದಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.
ಪರಮೇಶ್ವರ್ ಸೇರಿದಂತೆ ಯಾರೂ ಸಭೆ ಕರೆಯಬಾರದು ಅಂತೇನಿಲ್ಲವಲ್ಲ? ಅವರೂ ಸಭೆ ಕರೆಯಬಹುದು, ನೀವು ಕರೆಯಬಹುದು, ನಾನೂ ಕರೆಯಬಹುದು. ಊಟಕ್ಕೆ ಕರೆಯುವುದರಲ್ಲಿ ಯಾವುದೇ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಪರಮೇಶ್ವರ್ ನಮ್ಮ ನಾಯಕರು, ಗೃಹ ಮಂತ್ರಿಗಳು. ಅವರಿಗೆ ತಮ್ಮದೇ ಆದ ಒತ್ತಡಗಳಿವೆ. ಅವರ ಸಮುದಾಯದ ಶಾಸಕರು ಅವರ ಮುಂದೆ ಕೆಲವು ಬೇಡಿಕೆ ಇಟ್ಟಿರಬಹುದು. ಬಜೆಟ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚರ್ಚೆ ಮಾಡಬಹುದು. ಕಾಂತರಾಜು ವರದಿ ಬಗ್ಗೆ ಚರ್ಚೆ ನಡೆಸಲು ಸಭೆ ಸೇರುವುದು ಸಾಮಾನ್ಯ ಎಂದು ತಿಳಿಸಿದರು.
ಅಭಿವೃದ್ಧಿಗೆ ಸಹಕಾರ ನೀಡಲಿ: ಕೇಂದ್ರ ಸಚಿವ ಕುಮಾರಸ್ವಾಮಿಗೆ ರಾಜ್ಯದ ಅಭಿವೃದ್ಧಿ ಮಾಡಲು ಸಿಕ್ಕಿದೆ. ಅವರು ಅಭಿವೃದ್ಧಿಗೆ ತಮ್ಮ ಸಲಹೆ ನೀಡಲಿ. ಶೇ.60, 40 ಆರೋಪ ಬಿಟ್ಟು, ಅವರಿಗೆ ಕೇಂದ್ರದಲ್ಲಿರುವ ಅಧಿಕಾರ ಬಳಸಿಕೊಂಡು, ರಾಜ್ಯಕ್ಕೆ ಯಾವ ರೀತಿ ಕೊಡುಗೆ ನೀಡಬಹುದು, ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಾದ ಪಾಲಿನ ಬಗ್ಗೆ, ಯೋಜನೆಗಳ ಬಗ್ಗೆ ಪ್ರಧಾನಿ ಮೇಲೆ ಒತ್ತಡ ಹಾಕಲಿ. ಅದು ಬಿಟ್ಟು ಶನಿವಾರ, ರವಿವಾರ ಬಂದು ಆರೋಪ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಟೀಕಿಸಿದರು.
ಅಧ್ಯಕ್ಷ ಸ್ಥಾನವನ್ನು ಪಕ್ಷ ಶಿವಕುಮಾರ್ ಗೆ ನೀಡಿದೆಯೇ ಹೊರತು, ಶಿವಕುಮಾರ್ ಕಿತ್ತುಕೊಂಡಿಲ್ಲ. ಪಕ್ಷದ ವರಿಷ್ಟರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಖರ್ಗೆ ಅವರು, ಶಿವಕುಮಾರ್ ಗೆ ಈ ಜವಾಬ್ದಾರಿ ನೀಡಿದ್ದಾರೆ. ಅವರು ಬೇಡ ಎಂದು ತೀರ್ಮಾನಿಸಿದರೆ ಈ ಸ್ಥಾನ ತ್ಯಜಿಸಲು ಶಿವಕುಮಾರ್ ಸಿದ್ಧರಿದ್ದಾರೆ. ಇವು ಶಾಶ್ವತವಾದ ಹುದ್ದೆಗಳಲ್ಲ ಎಂದರು.