ಜನರ ಆಶಯ ಈಡೇರಿಸದೆ ಬೆಲೆ ಏರಿಕೆ ಮಾಡಿರುವ ಕಾಂಗ್ರೆಸ್ ಸರಕಾರ ಬದುಕಿದ್ದೂ ಸತ್ತ ಹಾಗೆ : ವಿಜಯೇಂದ್ರ

ಮೈಸೂರು: ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಇಂದಿನಿಂದ ಒಂದು ತಿಂಗಳವರಗೆ ಬಿಜೆಪಿ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆಗೆ ಮೈಸೂರಿನಲ್ಲಿ ಚಾಲನೆ ನೀಡಲಾಯಿತು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಮುಂಡಿ ಬೆಟ್ಟದಲ್ಲಿರುವ ಶ್ರೀಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಮೈಸೂರು ನಗರದ ಎಂಸಿಡಿಸಿಸಿ ಬ್ಯಾಂಕ್ ವೃತ್ತದಲ್ಲಿ, ಕೇಂದ್ರ ಸಚಿವರು, ಸಂಸದರು, ಶಾಸಕರು ಸೇರಿದಂತೆ ಜಮಾವಣೆಗೊಂಡ ಬಿಜೆಪಿ ನಾಯಕರುಗಳು ಮತ್ತು ಕಾರ್ಯಕರ್ತರು ಪಾದಯಾತ್ರೆ ಮೂಲಕ ಅಶೋಕ ರಸ್ತೆ ಮಾರ್ಗವಾಗಿ ಪುರಭವನದ ಬಳಿ ಇರುವ ಅಂಬೇಡ್ಕರ್ ಪ್ರತಿಮೆವರೆಗೂ ಆಗಮಿಸಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜನರಿಗೆ ಹಲವಾರು ಭರವಸೆಗಳನ್ನು ನೀಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಜನರ ಆಶೋತ್ತರಗಳಿಗೆ ವಿರುದ್ಧವಾಗಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸುವ ಮೂಲಕ ಬದುಕಿದ್ದು ಸತ್ತ ಹಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ಧರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಹಾಲಿನ ಬೆಲೆಯನ್ನು 9 ರೂ. ಏರಿಸಿದ್ದಾರೆ. 2.50 ರೂ.ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ ತರಕಾರಿ ಸೇರಿದಂತೆ ದಿನನಿತ್ಯದ ಎಲ್ಲಾ ಬೆಲೆಗಳು ಹೆಚ್ಚಳವಾಗುವಂತೆ ಮಾಡಿದ್ದಾರೆ. ಜನರ ಮೇಲೆ ಇಷ್ಟೊಂದು ಬೆಲೆ ಏರಿಕೆ ಮಾಡಿಕೊಂಡು ಸರಕಾರ ನಡೆಸಲು ಸಾಧ್ಯವಿಲ್ಲ. ಹಾಗಾಗಿ ಈ ಸರಕಾರ ಬದುಕಿದ್ದು ಸತ್ತಂತೆ ಎಂದು ಕಿಡಿಕಾರಿದರು.
ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ, ಅಹಿಂದ ವರ್ಗವನ್ನು ಮರೆತು ಬಿಟ್ಟರು. ವಾಲ್ಮೀಕಿ ಹಣವನ್ನು ಲೂಟಿ ಹೊಡೆದರು.ಎಸ್.ಸಿ.ಪಿ-ಟಿಎಸ್ಪಿಯ 38 ಸಾವಿರ ಕೋಟಿ ಹಣವನ್ನು ವರ್ಗಾವಣೆ ಮಾಡಿ ಎಸ್ಸಿ, ಎಸ್ಟಿಗಳಿಗೆ ಅನ್ಯಾಯ ಮಾಡಿದರು. ಹಿಂದೂಗಳಿಗೆ ಅನ್ಯಾಯ ಮಾಡಿ ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಶೇ.4 ಮೀಸಲಾತಿ ನೀಡುವ ಮೂಲಕ ಅಹಿಂದನಾಯರಾಗಿದ್ದ ನೀವು ಅಲ್ಪಸಂಖ್ಯಾತರ ನಾಯಕರಾಗಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪ್ರಾಣಿಗಳು ಮತ್ತು ಅರಣ್ಯವನ್ನು ಉಳಿಸುವ ದೃಷ್ಟಿಯಿಂದ ಕೇರಳಕ್ಕೆ ರಾತ್ರಿ ವೇಳೆ ಸಂಚಾರವನ್ನು ನಿಷೇಧ ಮಾಡಿದ್ದರು. ಆದರೆ ನಿಮ್ಮ ರಾಹುಲ್ ಗಾಂಧಿ, ಪ್ರಿಯಾಂಕ ವಾದ್ರ ಅವರನ್ನು ಖುಷಿಪಡಿಸಲು ರಾತ್ರಿ ಸಂಚಾರ ನಿರ್ಬಂಧವನ್ನು ಹಿಂಪಡೆಯುವ ಮೂಲಕ ವನ್ಯಪ್ರಾಣಿಗಳು ಮತ್ತು ಅರಣ್ಯ ನಾಶಕ್ಕೆ ಮುಂದಾಗಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ನೀವು ಎಷ್ಟು ದಿನ ಮುಖ್ಯಮಂತ್ರಿಯಾಗಿದ್ದೇನೆ, ಎಷ್ಟು ದಿನ ಅಧಿಕಾರ ನಡೆಸಿದ್ದೇನೆ, ಎಷ್ಟು ಬಜೆಟ್ ಮಂಡಿಸಿದ್ದೇನೆ ಎನ್ನುವುದು ಮುಖ್ಯವಲ್ಲ. ಅಧಿಕಾರದಲ್ಲಿದ್ದು ರಾಜ್ಯದ ಜನರಿಗೆ ಏನು ಕೊಟ್ಟಿದ್ದೀನಿ ಎಂಬುದು ಮುಖ್ಯ. ನಿಮ್ಮ ಅಧಿಕಾರವಧಿಯಲ್ಲಿ ಯಾವ ಅಭಿವೃದ್ಧಿ ಮಾಡಿದ್ದೀರಿ ಎಂದು ಜನ ಕೇಳುತ್ತಿದ್ದಾರೆ ಎಂದು ಹೇಳಿದರು.
ಯಾತ್ರೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿಧಾನಸಭೆ ಮತ್ತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ಬಾಮಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಸಂಸದ ಯದುವೀರ್ ಕೃಷ್ಣರಾಜ ಒಡೆಯರ್, ವಿಧಾನಪರಿಷತ್ ಸದಸ್ಯರಾದ ಸಿ.ಟಿ.ರವಿ, ರವಿಕುಮಾರ್, ಶಾಸಕ ಅರವಿಂದ ಬೆಲ್ಲದ್, ಡಾ.ಅಶ್ವತ್ಥ ನಾರಾಯಣ, ಮಾಜಿ ಸಚಿವ ಮುರುಗೇಶ್ ಮುರಾಣಿ, ಮಾಜಿ ಸಂಸದ ಪ್ರತಾಪ್ ಸಿಂಹ, ಸಂಸದ ಪಿ.ಸಿ.ಮೋಹನ್, ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಶಾಸಕ ಹರ್ಷವರ್ಧನ್, ಪಿ.ರಾಜೀವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜನರಿಗೆ ಟೋಪಿ ಹಾಕಿದ ಸಿಎಂ : ಆರ್.ಅಶೋಕ್
ಮುಖ್ಯಮಂತ್ರಿ ಸಿದ್ದರಾಮಯ್ಯ ಕಳ್ಳ, ಡಿಸಿಎಂ ಡಿ.ಕೆ. ಶಿವಕುಮಾರ್ ಮಳ್ಳ. ಜನರ ಬದುಕಿನ ಜೊತೆ ಚೆಲ್ಲಾಟ ಮಾಡುತ್ತಿರುವ ಸಿದ್ದರಾಮಯ್ಯ ಸೊಳ್ಳೆ, ಡಿ.ಕೆ. ಶಿವಕುಮಾರ್ ತಿಗಣೆಯಾಗಿ ಜನರ ರಕ್ತ ಹೀರುತ್ತಿದ್ದಾರೆ. ಸಿದ್ದರಾಮಯ್ಯ ಟೋಪಿ ಹಾಕಿಲ್ಲದಿದ್ದರೂ ಎಲ್ಲರಿಗೂ ಟೋಪಿ ಹಾಕುತ್ತಿದ್ದಾರೆ ಎಂದರು.
ಕಾಂಗ್ರೆಸ್ ಸರಕಾರ 48 ವಸ್ತುಗಳ ಬೆಲೆ ಏರಿಕೆ ಮಾಡಿ ಇತಿಹಾಸ ಸೃಷ್ಟಿಸಿದೆ. ಮದ್ಯ, ರಸ್ತೆ, ವಾಹನ ತೆರಿಗೆ ಹೆಚ್ಚಿಸಿದ್ದಾರೆ. ಜನ ವಿರೋಧಿ ಆಡಳಿತ ಹೀಗೆಯೇ ಮುಂದುವರೆದರೆ ನೀವು ರಸ್ತೆಯಲ್ಲಿ ಓಡಾಡುವುದು ಕಷ್ಟವಾಗುತ್ತದೆ.
-ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ.