ಬಿಬಿಎಂಪಿ ವ್ಯಾಪ್ತಿಯ ಕಾಮಗಾರಿಯಲ್ಲಿ ಹಗರಣ ಆರೋಪ | ಡಿ.ಕೆ.ಶಿವಕುಮಾರ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಶಾಸಕ ಮುನಿರತ್ನ

Update: 2025-04-13 19:57 IST
ಬಿಬಿಎಂಪಿ ವ್ಯಾಪ್ತಿಯ ಕಾಮಗಾರಿಯಲ್ಲಿ ಹಗರಣ ಆರೋಪ | ಡಿ.ಕೆ.ಶಿವಕುಮಾರ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಶಾಸಕ ಮುನಿರತ್ನ

ಮುನಿರತ್ನ/ ಡಿ.ಕೆ.ಶಿವಕುಮಾರ್ 

  • whatsapp icon

ಬೆಂಗಳೂರು : ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತಿರುವ 2,000 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶೇ.15ರಷ್ಟು ಕಮಿಷನ್‌ ಪಡೆದಿದ್ದಾರೆ’ ಎಂದು ಆರೋಪಿಸಿ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರು ಪ್ರಾಸಿಕ್ಯೂಷನ್ ನಡೆಸಲು ಅನುಮತಿ ನೀಡುವಂತೆ ಕೋರಿ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.

ರವಿವಾರ ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ ಮುನಿರತ್ನ, ಬೆಂಗಳೂರು ನಗರ ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕೆಲವು ದಾಖಲೆಗಳನ್ನು ಸಲ್ಲಿಸಿ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ದೂರು ದಾಖಲಿಸಿ ಅವರನ್ನು ತನಿಖೆಗೆ ಒಳಪಡಿಸಬೇಕು. ಇದೊಂದು ಬೃಹತ್ ಭ್ರಷ್ಟಾಚಾರದ ಪ್ರಕರಣವಾಗಿರುವುದರಿಂದ ತನಿಖೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

ದೂರಿನಲ್ಲಿ ಏನಿದೆ?: ವಿವಿಧ ಕಾಮಗಾರಿಗಳ ಗುತ್ತಿಗೆ ನೀಡಲು ಟೆಂಡರ್ ಕರೆಯದೆ, ಪ್ರಕ್ರಿಯೆ ನಡೆಸಲಾಗುತ್ತಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಸಂಬಂಧಿಗಳಿಗೆ ಗುತ್ತಿಗೆ ನೀಡಲು ಮುಂದಾಗಿದ್ದು, ಡಿ.ಕೆ.ಶಿವಕುಮಾರ್ ಪರವಾಗಿ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಗುತ್ತಿಗೆದಾರರಿಂದ ಶೇ.15ರಷ್ಟು ಕಮಿಷನ್ ಈಗಾಗಲೇ ಪಡೆದಿದ್ದಾರೆ ಆರೋಪಿಸಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಹ ಇದರಲ್ಲಿ ಭಾಗಿಯಾಗಿದ್ದಾರೆ. ರಾಜ್ಯದ ಗುತ್ತಿಗೆದಾರರ ಬಿಡ್‍ಗಳನ್ನು ಅನಗತ್ಯವಾಗಿ ತಿರಸ್ಕರಿಸುತ್ತಿದ್ದಾರೆ. ಕೆಲವು ಕಾಮಗಾರಿಗಳಲ್ಲಿ ತಮ್ಮದೇ ಬೇನಾಮಿ ಕಂಪನಿಗಳ ಮೂಲಕ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದು, ಗುತ್ತಿಗೆ ಪಡೆದಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸ್ಟಾರ್ ಚಂದ್ರು ಅವರ ಸ್ಟಾರ್ ಬಿಲ್ಡರ್ಸ್‍ಗೆ ಬಿಜೆಪಿ ಶಾಸಕರಾಗಿದ್ದರೂ ಕಾಂಗ್ರೆಸ್ ಶಾಸಕರಂತೆ ವರ್ತಿಸುತ್ತಿರುವ ಎಸ್.ಟಿ.ಸೋಮಶೇಖರ್ ಪ್ರತಿನಿಧಿಸುತ್ತಿರುವ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ 232 ಕೋಟಿ ರೂ. ಮೊತ್ತದ ಕಾಮಗಾರಿಗಳ ಗುತ್ತಿಗೆ ನೀಡಿದ್ದಾರೆ ಎಂದು ತಿಳಿದ್ದಾರೆ.

ಬೆಂಗಳೂರು ನಗರಕ್ಕೆ ಎರಡು ಸಾವಿರ ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಇದರಲ್ಲಿ ವಿಶ್ವಬ್ಯಾಂಕ್‍ನಿಂದ ಸಾಲ ರೂಪದಲ್ಲಿ 1700 ಕೋಟಿ ರೂ. ಪಡೆಯಲಾಗಿದೆ ಮತ್ತು ಸಾರ್ವಜನಿಕ ತೆರಿಗೆ 300 ಕೋಟಿ ರೂ. ಅನುದಾನವಾಗಿದೆ. ಆಂಧ್ರ ಪ್ರದೇಶದ ಬಲಿಷ್ಠ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 200 ಕೋಟಿ ರೂ. ಪ್ಯಾಕೇಜ್ ಅನುದಾನಗಳಿಗೆ ಟೆಂಡರ್ ಪ್ರಕ್ರಿಯೆಯನ್ನು ಮಾಡಲಾಗಿದೆ.

ಚಂದ್ರಬಾಬು ನಾಯ್ಡು ಸರಕಾರದಲ್ಲಿನ ಶಾಸಕ ಹಾಗೂ ಇವರ ಸಂಬಂಧಿಯೊಬ್ಬರ ಜೆ.ಎಂ.ಸಿ ಕನ್‍ಷ್ಟಕ್ಷನ್ಸ್ ಹೆಸರಿಗೆ ಹಾಗೂ ಇವರ ಜೊತೆಯಲ್ಲಿರುವ ಆಂಧ್ರ ಪ್ರದೇಶದ ಗುತ್ತಿಗೆದಾರರಿಗೆ 1768 ಕೋಟಿ ರೂ.ಗಳ ಪ್ಯಾಕೆಜ್‍ನ ಕಾರ್ಯಾದೇಶವನ್ನು ನೀಡಲು ಉದ್ದೇಶಿಸಲಾಗಿದೆ. ಅಲ್ಲದೇ ಗುತ್ತಿಗೆದಾರ ಆರ್.ಎನ್.ಶೆಟ್ಟಿ ಜೊತೆಯಲ್ಲಿ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ಸುಮಾರು ಶೇ.15ರಷ್ಟು ಕಮಿಷನ್ ಹಣದ ಮುಂಗಡವನ್ನು ತಲುಪಿಸಲಾಗಿದೆ ಎಂದು ಆರೋಪಿಸಿದ್ದಾರೆ.

ರಾಜ್ಯದ ಗುತ್ತಿಗೆದಾರರಿಗೆ ನೇರವಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಬಾಹ್ಯ ಒತ್ತಡ ಹಾಕಿ ಮೌಖಿಕವಾಗಿ ಸೂಚಿಸಿದ್ದಾರೆ. ಕೆಲವು ಅಧಿಕಾರಿಗಳನ್ನು ಬಳಸಿಕೊಂಡು ತಾವೇ ಕೆಲವು ಗುತ್ತಿಗೆದಾರರನ್ನು ಟೆಂಡರ್‍ನಲ್ಲಿ ಭಾಗವಹಿಸುವಂತೆ ಸೂಚಿಸಿ, ತಮಗೆ ಬೇಕಾದ ಹೊರರಾಜ್ಯದ ಗುತ್ತಿಗೆದಾರರಿಗೆ ಕಾರ್ಯಾದೇಶವನ್ನು ನೀಡಲು ಸಂಚು ಮಾಡಿದ್ದು, ಈ ಎಲ್ಲಾ ಅವ್ಯವಹಾರಗಳು ಮುಖ್ಯಮಂತ್ರಿ ಗಮನಕ್ಕೆ ಬರದಂತೆ ಶಿವಕುಮಾರ್ ನೋಡಿಕೊಂಡಿದ್ದಾರೆ.

ಈ ಅಕ್ರಮದಲ್ಲಿ ಯಾವುದೇ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರ ಪಾತ್ರ ಇಲ್ಲ. ಇದನ್ನು ಶಿವಕುಮಾರ್ ನೇರವಾಗಿ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಇದರೊಂದಿಗೆ ಕೂಡಲೇ ಎಲ್‍ಒಸಿ ಪಡೆಯಲು ಶೇ.15ರಷ್ಟು ಹಣವನ್ನು ಸಂದಾಯ ಮಾಡಿಸಿಕೊಳ್ಳಲಾಗುತ್ತಿದೆ. ಈ ಎಲ್ಲ ಅಕ್ರಮಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಬೇಕು ಎಂದು ಮುನಿರತ್ನ ದೂರಿನಲ್ಲಿ ಕೋರಿದ್ದಾರೆ.

ಸುಮಾರು 20 ನಿಮಿಷಗಳ ಕಾಲ ಮುನಿರತ್ನ ಅವರಿಂದ ದೂರು ಆಲಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕಾನೂನು ತಜ್ಞರು ಹಾಗೂ ಸಂಬಂಧಪಟ್ಟವರಿಂದ ಅಭಿಪ್ರಾಯ ಪಡೆದು ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

‘ಬೆಂಗಳೂರಿನಲ್ಲಿ ಒಟ್ಟು 16 ವರ್ಕ್ ಆರ್ಡರ್ ಕೊಟ್ಟಿದ್ದಾರೆ. ನಮ್ಮ ಕ್ಷೇತ್ರದಲ್ಲಿ 216 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಬಿಎಸ್‍ಆರ್ ಕಂಪೆನಿಗೆ ಟೆಂಡರ್ ನೀಡಿದ್ದಾರೆ. ವರ್ಲ್ಡ್‌ ಬ್ಯಾಂಕ್ ನಿಂದ ರಾಜಾಕಾಲುವೆ ಕಾಮಗಾರಿಗಳಿಗೆ ಅಂತ 2 ಸಾವಿರ ಕೋಟಿ ರೂ. ಸಾಲ ತಂದಿದ್ದಾರೆ. ಇದರ ಟೆಂಡರ್ ಅನ್ನು ಅನರ್ಹ ಕಂಪೆನಿಗಳಿಗೆ ಕೊಡುತ್ತಿದ್ದಾರೆ. ಇದರಲ್ಲಿ 400 ಕೋಟಿ ರೂ. ಕಮೀಷನ್ ಹೊಡೆಯಲಾಗಿದೆ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಇಂತಹ ಗುತ್ತಿಗೆದಾರರಿಗೆ ಇಂತಹ ಕಾಮಗಾರಿ ಎಂದು ನಿಗದಿ ಮಾಡಿಕೊಂಡು ಟೆಂಡರ್ ಕೊಡುತ್ತಿದ್ದಾರೆ. ಮಂಗಳವಾರ ಹೈಕೋರ್ಟ್‍ನಲ್ಲಿ ಇದರ ವಿರುದ್ಧ ಪಿಐಎಲ್ ಹಾಕಲಾಗುವುದು. ಈ ಹಗರಣಕ್ಕೆ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ನೇರ ಹೊಣೆಗಾರರು’

-ಮುನಿರತ್ನ, ಬಿಜೆಪಿ ಶಾಸಕ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News