ʼಜಾತಿ ಗಣತಿ ʼ ಯಾರ ಹಕ್ಕು ಕಸಿಯುವುದಿಲ್ಲ, ಮತ್ತಿನ್ಯಾರಿಗೋ ಹಕ್ಕು ನೀಡುವ ಉದ್ದೇಶವೂ ಇಲ್ಲ : ಸಚಿವ ಮಹದೇವಪ್ಪ
ಎಚ್.ಸಿ. ಮಹದೇವಪ್ಪ
ಬೆಂಗಳೂರು : ಜಾತಿಗಣತಿ ವರದಿಗೂ, ರಾಜಕೀಯಕ್ಕೂ ಸಂಬಂಧವಿಲ್ಲ. ಕೆಲವರು ವಿಜ್ಞಾನವನ್ನೇ ತಿಳಿಯದೆ ಅವೈಜ್ಞಾನಿಕ ಎಂದು ಟೀಕೆ ಮಾಡುತ್ತಿದ್ದಾರೆ. ಅವರು ಇನ್ನೂ ವರದಿ ನೋಡಿಲ್ಲ. ಹಾಗಿದ್ದರೂ ಹೇಗೆ ಟೀಕೆ ಮಾಡಲು ಸಾಧ್ಯ?, ಈ ವರದಿ ಆಧರಿಸಿ ಯಾರ ಹಕ್ಕುಗಳನ್ನೂ ಕಸಿಯುವುದಿಲ್ಲ, ಮತ್ತಿನ್ಯಾರಿಗೋ ಹಕ್ಕು ನೀಡುವ ಉದ್ದೇಶವೂ ಇಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ವರದಿ ಆಧರಿಸಿ ಯಾರ ಹಕ್ಕುಗಳನ್ನೂ ಕಸಿಯುವ ಉದ್ದೇಶವಿಲ್ಲ. ಮೀಸಲಾತಿ ಪರಿಷ್ಕರಣೆ ಮಾಡಬೇಕು ಎಂದು ವರದಿಯಲ್ಲಿ ಶಿಫಾರಸು ನೀಡಿದರೆ ಅದನ್ನು ಅಧ್ಯಯನ ನಡೆಸಲಾಗುವುದು, ಸದ್ಯದ ಪರಿಸ್ಥಿತಿಯಲ್ಲಿ ಜನಸಂಖ್ಯೆ ಸ್ಫೋಟವಾಗುತ್ತಿದೆ. ಹೀಗಾಗಿ ಎಲ್ಲರಿಗೂ ಅವಕಾಶಗಳು ಸಿಗಬೇಕು. ಆ ನಿಟ್ಟಿನಲ್ಲಿ ವೈಜ್ಞಾನಿಕ ಕ್ರಮದಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
2015ರಲ್ಲಿ ಸುಮಾರು 160 ಕೋಟಿ ರೂ. ಖರ್ಚು ಮಾಡಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಲಾಗಿದೆ. ಅದರಲ್ಲಿ ಜಾತಿಯ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಸಮಾಜದ ಬದಲಾವಣೆ ಕುರಿತು ಈ ಸಮೀಕ್ಷೆ ನಡೆಸಿದ್ದು, ಅದನ್ನು ಅನುಷ್ಠಾನಕ್ಕೆ ತರಲು ಸರಕಾರ ಬದ್ಧವಾಗಿದೆ ಎಂದು ಎಚ್.ಸಿ.ಮಹದೇವಪ್ಪ ಹೇಳಿದರು.
ಕಾಂಗ್ರೆಸ್‍ನ ಚುನಾವಣಾ ಪ್ರಣಾಳಿಕೆಯಲ್ಲಿ ದೇಶದಲ್ಲಿ ಜಾತಿ ಜನಗಣತಿ ಆಗಬೇಕೆಂದು ಹೇಳಿತ್ತು. ಭಾರತದ ಜನಗಣತಿಯಲ್ಲಿ ಜಾತಿ ಮಾಹಿತಿ ಸಂಗ್ರಹಿಸಲು ಪ್ರಯತ್ನಗಳಾಗಿತ್ತು. ಅದನ್ನು ಪಟ್ಟಭದ್ರ ಹಿತಾಸಕ್ತಿಗಳು ಎಂದು ಆರೋಪಿಸಿದ್ದರು. ಎಸ್‍ಸಿ, ಎಸ್‍ಟಿಗೆ ರಾಜ್ಯಾಂಗ ಬದ್ಧವಾಗಿ ಮೀಸಲಾತಿ ಇದೆ. ಪ್ರವರ್ಗಗಳಿಗೆ ಮೀಸಲಾತಿ ನೀಡುವ ಬಗ್ಗೆ ಚರ್ಚೆಯಾಗಬೇಕು ಎಂದು ಎಚ್.ಸಿ.ಮಹದೇವಪ್ಪ ತಿಳಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಜಾತಿ ಜನಗಣತಿಯಾಗಿತ್ತು. ಸ್ವಾತಂತ್ರ್ಯ ನಂತರದಲ್ಲಿ ದೇಶದ ಜನಸಂಖ್ಯೆ 35 ಕೋಟಿ ಇತ್ತು. ಈಗ 140 ಕೋಟಿಗೂ ಅಧಿಕವಾಗಿದೆ. ಅದಕ್ಕೆ ಅನುಗುಣವಾಗಿ ಅಸಮಾನತೆಯನ್ನು ತೊಡೆದು ಹಾಕಿ ಸಮಸಮಾಜ ನಿರ್ಮಾಣ ಮಾಡಲು ಈ ರೀತಿಯ ಅಧ್ಯಯನ ಅಗತ್ಯವಿತ್ತು ಎಂದು ಎಚ್.ಸಿ.ಮಹದೇವಪ್ಪ ಹೇಳಿದರು.
ದೇಶದಲ್ಲಿ ಸಾವಿರಾರು ಜಾತಿಗಳಿವೆ. ಎಲ್ಲರಿಗೂ ಸಂಪತ್ತಿನ ಸಮಾನ ಹಂಚಿಕೆಯಾಗಿದೆಯೇ?, ಸಾರ್ವಜನಿಕ ಜೀವನದಲ್ಲಿರುವವರು ಸಮಸಮಾಜದ ಬಗ್ಗೆ ಯೋಚಿಸಬೇಕೇ ಹೊರತು ಟೀಕೆ ಮಾಡುವುದನ್ನೇ ವೃತ್ತಿ ಮಾಡಿಕೊಳ್ಳಬಾರದು. ಬಿಜೆಪಿಯವರ ಟೀಕೆ ರಾಜಕೀಯ ಪ್ರೇರಿತವಾದದ್ದು ಎಂದು ಎಚ್.ಸಿ.ಮಹದೇವಪ್ಪ ಹೇಳಿದರು.
ಪ್ರಗತಿಪರವಾದ ವರದಿ: ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಿಂದುಳಿದ ಸಮುದಾಯಗಳ ಸುಧಾರಣೆಗಾಗಿ ಉತ್ತಮ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ರೂಪಿಸುವ ಅಗತ್ಯವಿದೆ. ಹಿಂದುಳಿದ ವರ್ಗಗಳ ವರದಿ ಯಾರ ಪರ ಅಥವಾ ಯಾರ ವಿರುದ್ಧವೂ ಇಲ್ಲ. ವೈಜ್ಞಾನಿಕವಾಗಿ ದತ್ತಾಂಶ ಸಂಗ್ರಹಿಸಲಾಗಿದೆ. ಇದು ಅತ್ಯಂತ ಪ್ರಗತಿಪರವಾದ ವರದಿ. ಆಯೋಗದ ವರದಿಯಲ್ಲಿ ಹಲವಾರು ಶಿಫಾರಸುಗಳನ್ನು ನೀಡಲಾಗಿದೆ. ಜನಸಂಖ್ಯೆ ಹೆಚ್ಚಳ, ಸ್ಥಿತಿಗತಿಗಳ ಕುರಿತು ಅಧ್ಯಯನ ನಡೆಯಲಿದೆ ಎಂದು ಎಚ್.ಸಿ.ಮಹದೇವಪ್ಪ ತಿಳಿಸಿದರು.