ಸಾಮಾಜಿಕ-ಆರ್ಥಿಕ ಸಮೀಕ್ಷಾ ವರದಿ ಬಗ್ಗೆ ಆತುರದ ನಿರ್ಧಾರ ಇಲ್ಲ: ಡಿ.ಕೆ.ಶಿವಕುಮಾರ್

Update: 2025-04-13 20:45 IST
PHOTO OF DK Shivakumar

ಡಿ.ಕೆ.ಶಿವಕುಮಾರ್

  • whatsapp icon

ಬೆಂಗಳೂರು : ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವರದಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರವು ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಈ ವರದಿಯ ಬಗ್ಗೆ ಕೇಳಿ ಬರುತ್ತಿರುವ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಅಲ್ಲದೇ, ವಾಸ್ತವಾಂಶಗಳ ಆಧಾರದ ಮೇಲೆ ಎಲ್ಲ ವರ್ಗಗಳಿಗೂ ನ್ಯಾಯ ಒದಗಿಸುವ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು. ವಿಧಾನಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ಜಾತಿಗಣತಿ ಬಗ್ಗೆ ವೀರಶೈವ ಮಹಾಸಭಾ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಮಾಡಿರುವ ಟೀಕೆ ಹಾಗೂ ವರದಿಯ ಅಧ್ಯಯನಕ್ಕೆ ತಜ್ಞರ ಸಮಿತಿ ನೇಮಕ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ವೀರಶೈವ ಮಹಾಸಭಾದವರು ಅವರ ಸಮಾಜ ರಕ್ಷಣೆ ಮಾಡಿಕೊಳ್ಳಲು ಹೊರಟಿದ್ದು, ಅವರನ್ನು ನಾವು ಏಕೆ ಟೀಕೆ ಮಾಡಬೇಕು. ಪ್ರಜಾಪ್ರಭುತ್ವ, ಸಂವಿಧಾನದ ಪ್ರಕಾರವಾಗಿ ಅವರು ತಮ್ಮ ನಿಲುವುಗಳನ್ನು ಪ್ರತಿಪಾದನೆ ಮಾಡಲಿ ಎಂದು ಹೇಳಿದರು.

ಮುಖ್ಯಮಂತ್ರಿ ಜಾತಿಗಣತಿ ವರದಿಯ ಬಗ್ಗೆ ಚರ್ಚೆ ನಡೆಸಲು ಜನಪ್ರತಿನಿಧಿಗಳಿಗೂ ವಿಧಾನಸಭೆಯಲ್ಲಿ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದಕ್ಕಿಂತ ಮುಕ್ತವಾಗಿ ಇನ್ನೇನು ಮಾಡಲು ಸಾಧ್ಯ ಎಂದು ಶಿವಕುಮಾರ್ ಪ್ರಶ್ನಿಸಿದರು.

ಚುನಾವಣೆ ಪೂರ್ವದಲ್ಲಿ ಒಕ್ಕಲಿಗ ಸಮುದಾಯ ನನ್ನ ಬೆನ್ನಿಗೆ ನಿಲ್ಲಬೇಕು ಎಂದು ತಾವು ಹೇಳಿಕೆ ನೀಡಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಬೇರೆ ವಿಚಾರ. ಈಗ ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿದ್ದೇನೆ. ಎಲ್ಲರಿಗೂ ನ್ಯಾಯ ಕೊಡಿಸುವುದು ನಮ್ಮ ಕರ್ತವ್ಯ, ಧ್ವನಿ, ಧ್ಯೇಯ, ಉದ್ದೇಶ, ಸಂಕಲ್ಪ ಎಂದರು.

ಧರ್ಮದ ಹೆಸರಲ್ಲಿ ರಾಜಕಾರಣ ನೀಚತನ: ಬೆಂಗಳೂರು ಭಾವೈಕ್ಯತೆಯ ದೊಡ್ಡ ಸಂಕೇತ. ಕರಗ ಆಚರಣೆ ವೇಳೆ ದರ್ಗಾಕ್ಕೂ ಭೇಟಿ ನೀಡಲಾಗುತ್ತದೆ. ಧರ್ಮ, ದೇವಸ್ಥಾನದ ಹೆಸರಿನಲ್ಲಿ ರಾಜಕಾರಣ ಮಾಡುವುದು ನೀಚತನ. ಇದನ್ನು ಯಾರೂ ಸಹ ಮಾಡಬಾರದು ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಕರಗ ಆಚರಣೆಗೆ ಸರಕಾರದಿಂದ ಅನುದಾನ ಬಿಡುಗಡೆ ಮಾಡುವುದಕ್ಕೆ ನಿಯಮಾವಳಿ ಇದೆ. ಯಾರದೋ ಕೈಗೆ ಹಣ ನೀಡಲು ಆಗುವುದಿಲ್ಲ. ಜಿಲ್ಲಾಧಿಕಾರಿಗೆ ಜವಾಬ್ದಾರಿ ವಹಿಸಿದ್ದೇವೆ. ಅವರು ಯಾರಿಗೆ ಹಣ ನೀಡಬೇಕೋ ಅವರಿಗೆ ಹಣ ನೀಡುತ್ತಾರೆ. ಬಜೆಟ್ ಅಲ್ಲಿಯೇ ಹಣ ಮೀಲಿಟ್ಟಿದ್ದೇವೆ. ಕರಗ ಉತ್ಸವ ಚೆನ್ನಾಗಿ ನಡೆಯಲು ಜಿಲ್ಲಾಧಿಕಾರಿ, ಪೊಲೀಸರು ಶ್ರಮವಹಿಸಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News