ಬೆಂಗಳೂರಿನ ರಸ್ತೆಗಳ ಗುಣಮಟ್ಟ ಹೆಚ್ಚಿಸಲು 1600 ಕಿ.ಮೀ ಬ್ಲಾಕ್ ಮತ್ತು ವೈಟ್ ಟಾಪಿಂಗ್ : ಡಿ.ಕೆ.ಶಿವಕುಮಾರ್

Update: 2025-04-07 19:17 IST
PHOTO OF D.K. Shivakumar

 ಡಿ.ಕೆ. ಶಿವಕುಮಾರ್

  • whatsapp icon

ಬೆಂಗಳೂರು: ಬೆಂಗಳೂರಿನ ರಸ್ತೆಗಳ ಗುಣಮಟ್ಟ ಹೆಚ್ಚಿಸಲು ನಗರದ 1600 ಕಿ.ಮೀ ನಷ್ಟು ಬ್ಲಾಕ್ ಮತ್ತು ವೈಟ್ ಟಾಪಿಂಗ್ ಮಾಡಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸೋಮವಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ನಗರದ 10 ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆಗಳ ಡಾಂಬರೀಕರಣ ಕಾಮಗಾರಿಗಳ ಭೂಮಿ ಪೂಜೆಯನ್ನು ನೆರವೇರಿಸಿದ ಬಳಿಕ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಬೆಂಗಳೂರು ನಗರದ ವಿವಿಧೆಡೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಸೋಮವಾರ ಒಂದೇ ದಿನ 10 ಕಡೆಗಳಲ್ಲಿ ಬ್ಲಾಕ್ ಟಾಪಿಂಗ್ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಬೆಂಗಳೂರು ನಗರದೊಳಗೆ ಒಟ್ಟು 1600 ಕಿ.ಮೀ ರಸ್ತೆಗೆ ವೈಟ್ ಟಾಪಿಂಗ್ ಹಾಗೂ ಬ್ಲಾಕ್ ಟಾಪಿಂಗ್ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಅವರು ಹೇಳಿದರು.

ಈ ಹಿಂದೆ 196 ಕಿ.ಮೀ ಉದ್ದದ ರಸ್ತೆ ಕಾಮಗಾರಿ ಕೈಗೊತ್ತಿಕೊಂಡಿದ್ದೆವು. ಇಂದು ಸುಮಾರು 450 ಕಿ.ಮೀ ಉದ್ದದ ರಸ್ತೆಗೆ ಕಾಮಗಾರಿ ಮಾಡಲಾಗುತ್ತಿದೆ. ಇನ್ನು 350 ಕಿ.ಮೀ ಉದ್ದದ ಕಾಮಗಾರಿ ಡಿಫೆಕ್ಟ್ ಲಾಯಬಲಿಟಿ ಪಿರಿಯಡ್ (ಡಿಎಲ್ ಪಿ)ಯಾಗಿ ಬಾಕಿ ಉಳಿದಿದ್ದು, ಇದರ ಹಿನ್ನೆಲೆಯಲ್ಲಿ ಇನ್ನು ಕೆಲ ಕಾಲ ಈ ರಸ್ತೆಗಳಲ್ಲಿ ಹಾನಿಯಾದರೆ ಗುತ್ತಿಗೆದಾರರೇ ಅದನ್ನು ಸರಿಪಡಿಸಬೇಕಾಗುತ್ತದೆ. ಹೀಗಾಗಿ ಈ ರಸ್ತೆಯ ಕಾಮಗಾರಿ ಕೈಗೆತ್ತಿಕೊಂಡಿಲ್ಲ ಎಂದು ಶಿವಕುಮಾರ್ ತಿಳಿಸಿದರು.

ಬ್ರ್ಯಾಂಡ್ ಬೆಂಗಳೂರು ಅಡಿಯಲ್ಲಿ ರಸ್ತೆಗಳ ಉನ್ನತೀಕರಣಕ್ಕೆ ಮುಖ್ಯಮಂತ್ರಿ ಬಜೆಟ್ ನಲ್ಲಿ 6 ಸಾವಿರ ಕೋಟಿ ರೂ. ನೀಡಿದ್ದಾರೆ. ಬೆಂಗಳೂರಿನ ಮುಕ್ಕಾಲು ಭಾಗದ ರಸ್ತೆಯ ಬ್ಲಾಕ್ ಹಾಗೂ ವೈಟ್ ಟಾಪಿಂಗ್ ಕೆಲಸ ತೆಗೆದುಕೊಂಡಿದ್ದೇವೆ. ಈ ರೀತಿಯ ರಸ್ತೆಗಳು 30 ವರ್ಷಗಳ ಕಾಲ ಬಾಳಿಕೆ ಬರುತ್ತದೆ ಎಂದು ಅವರು ಹೇಳಿದರು.

ಗುಣಮಟ್ಟದ ಕಾಮಗಾರಿ ನಡೆಯುತ್ತಿದ್ದು, ಸ್ವತಃ ನಾನೇ ಈ ರಸ್ತೆಗಳ ಕಾಮಗಾರಿ ಪರಿಶೀಲನೆ ಮಾಡಿದ್ದೇನೆ. 1600 ಕಿ.ಮೀ ಉದ್ದದ ಮುಖ್ಯರಸ್ತೆ (ಆರ್ಟಿರಿಯಲ್) ಉಪಮುಖ್ಯ ರಸ್ತೆ (ಸಬ್ ಆರ್ಟಿರಿಯಲ್ ರೋಡ್)ಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಈ ಕಾಮಗಾರಿಗಳ ಗುಣಮಟ್ಟ ಪರೀಕ್ಷೆಗೆ ಪ್ರತ್ಯೇಕ ತಂಡವನ್ನು ರಚಿಸಲಾಗಿದ್ದು, ಈ ಎಲ್ಲ ಕಾಮಗಾರಿಗಳು ಪಾರದರ್ಶಕವಾಗಿ ನಡೆಯುತ್ತಿದೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.

ಬೆಂಗಳೂರಿಗೆ ವಿಶೇಷ ಕಾಳಜಿವಹಿಸಲಾಗುವುದು. ಪೊಲೀಸ್ ಜಂಟಿ ಆಯುಕ್ತರ ಜತೆ ಚರ್ಚೆ ಮಾಡಿದ್ದು, ಎಲ್ಲೆಲ್ಲಿ ರಸ್ತೆ ಸರಿಯಿಲ್ಲ ಎಂದು ಪೊಲೀಸರ ಗಮನಕ್ಕೆ ಬರುತ್ತದೆಯೋ ಅದನ್ನು ಪಾಲಿಕೆ ಆಯುಕ್ತರಿಗೆ ತಿಳಿಸಬೇಕು ಎಂದು ತಿಳಿಸಿದ್ದೇನೆ. ರಸ್ತೆ ಹದಗೆಟ್ಟಿರುವುದು ನಮ್ಮ ಇಂಜಿನಿಯರ್‍ಗಳಿಗೆ, ಶಾಸಕರ ಕಣ್ಣಿಗೆ ಕಾಣದಿರಬಹುದು. ಆದರೆ ಪೊಲೀಸ್ ಇಲಾಖೆಯವರ ಗಮನಕ್ಕೆ ಬಂದರೆ ಅದನ್ನು ಲಿಖಿತ ರೂಪದಲ್ಲಿ ಮಾಹಿತಿ ನೀಡುವಂತೆ ಸೂಚಿಸಿದ್ದೇನೆ ಎಂದು ಅವರು ಹೇಳಿದರು.

ಇನ್ನು ಮಳೆನೀರುಗಾಲುವೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ವಿಶ್ವಬ್ಯಾಂಕ್ ನಿಂದ 2 ಸಾವಿರ ಕೋಟಿ ರೂ. ನೆರವು ಪಡೆಯುತ್ತಿದ್ದೇವೆ. ಕಸದ ಸಮಸ್ಯೆಯನ್ನು ನಾವು ನಿಭಾಯಿಸುತ್ತಿದ್ದೇವೆ. ಯಾರು ಏನೇ ಟೀಕೆ ಮಾಡಿದರೂ, ಇದನ್ನು ಬಗೆಹರಿಸುವುದು ನಮ್ಮ ಜವಾಬ್ದಾರಿ. ಇದಕ್ಕಾಗಿ ನಾವು ಟೆಂಡರ್ ಗಳನ್ನು ಕರೆಯಲಾಗಿದೆ. ನಾವು ನಮ್ಮ ಕೆಲಸ ಮಾಡುತ್ತೇವೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಶಿವಕುಮಾರ್ ತಿಳಿಸಿದರು.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News