ಸಿಇಟಿ ಪರೀಕ್ಷೆಗೆ ಕೆಇಎ ಸಿದ್ಧತೆ; ಎ.15ರಂದು ಕನ್ನಡ, ಎ.16 ಮತ್ತು ಎ.17ರಂದು ವಿಜ್ಞಾನ ವಿಷಯಗಳಿಗೆ ಪರೀಕ್ಷೆ

ಸಾಂದರ್ಭಿಕ ಚಿತ್ರ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹೊರನಾಡು ಕನ್ನಡಿಗರಿಗೆ ಎ.15ರಂದು ಕನ್ನಡ, ಎ.16 ಮತ್ತು ಎ.17ರಂದು ವಿಜ್ಞಾನ ವಿಷಯಗಳಿಗೆ ಸಿಇಟಿ ನಡೆಸುತ್ತಿದ್ದು, ಈಗಾಗಲೇ ಪರೀಕ್ಷೆಗಳನ್ನು ನಡೆಸಲು ಪ್ರಾಧಿಕಾರ ಸಕಲ ರೀತಿಯ ತಯಾರಿ ನಡೆಸಿದೆ.
ದ್ವಿತೀಯ ಪಿಯುಸಿಯ ಮೊದಲನೇ ಪರೀಕ್ಷೆಯಲ್ಲಿ ನಿಗದಿತ ಅಂಕಗಳನ್ನು ಗಳಿಸದೆ ಅನುತ್ತೀರ್ಣರಾಗಿರುವ ಅಭ್ಯರ್ಥಿಗಳು 2 ಮತ್ತು 3ನೆ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಅವಕಾಶ ಇರುತ್ತದೆ. ಹೀಗಾಗಿ ಯಾರೆಲ್ಲ ಶುಲ್ಕ ಕಟ್ಟಿ ಅರ್ಜಿ ಸಲ್ಲಿಸಿದ್ದಾರೋ, ಅವರೆಲ್ಲರೂ ಸಾಮಾನ್ಯ ಪ್ರವೇಶ ಪರೀಕ್ಷೆಗೆ(ಸಿಇಟಿ) ಹಾಜರಾಗಿ ಪರೀಕ್ಷೆ ಬರೆಯಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಸಲಹೆ ನೀಡಿದ್ದಾರೆ.
ದ್ವಿತೀಯ ಪಿಯುಸಿಯ ಮೊದಲನೆ ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದಿದೆ ಎಂದು ಸಿಇಟಿ ಪರೀಕ್ಷೆ ಬರೆಯದೆ ಕೈಚೆಲ್ಲುವುದು ಸರಿಯಲ್ಲ. ದ್ವಿತೀಯ ಪಿಯುಸಿಯ ಎರಡನೆ ಮತ್ತು ಮೂರನೆ ಪರೀಕ್ಷೆ ಬರೆಯುವುದಕ್ಕೂ ಅವಕಾಶ ಇದ್ದು, ಅಲ್ಲಿ ತಮ್ಮ ಫಲಿತಾಂಶವನ್ನು ಉತ್ತಮಪಡಿಸಿಕೊಳ್ಳಬಹುದು.
ಸಿಇಟಿ ಬರೆದಿದ್ದರೆ ಮಾತ್ರ ಪಿಯುಸಿಯ 3ನೇ ಪರೀಕ್ಷೆಯಲ್ಲಿ ಅರ್ಹರಾದವರಿಗೂ ಸಿಇಟಿ ರ‍್ಯಾಂಕ್ ಕೊಟ್ಟು, ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ಅವಕಾಶ ಮಾಡಬಹುದು. ಆದರೆ ಸಿಇಟಿಯೇ ಬರೆಯದಿದ್ದರೆ ರ‍್ಯಾಂಕ್ ಗೆ ಪರಿಗಣಿಸಲು ಸಾಧ್ಯ ಇರುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಹಿಂದಿನ ವರ್ಷ ಪಿಯುಸಿ ಪರೀಕ್ಷೆ-3ರಲ್ಲಿ ಅರ್ಹತೆಯಾದ ಆನೇಕರಿಗೆ ರ‍್ಯಾಂಕ್ ಕೊಟ್ಟು, ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಸಿಇಟಿ ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬಾರದು. ಸಿಇಟಿ ಪರೀಕ್ಷೆ ವರ್ಷಕ್ಕೆ ಒಮ್ಮೆ ಮಾತ್ರ ನಡೆಸುವುದರಿಂದ ಅದನ್ನು ತಪ್ಪದೇ ಬರೆಯಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಈ ವರ್ಷ 3.3 ಲಕ್ಷ ಅಭ್ಯರ್ಥಿಗಳು ಸಿಇಟಿ ಬರೆಯಲು ಶುಲ್ಕ ಪಾವತಿಸಿದ್ದು, ಅವರಲ್ಲಿ ಇದುವರೆಗೂ 2.85 ಲಕ್ಷ ಮಂದಿ ತಮ್ಮ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಇನ್ನೂ ಸುಮಾರು 45 ಸಾವಿರ ಮಂದಿ ಡೌನ್ ಮಾಡಿಕೊಳ್ಳಬೇಕಾಗಿದೆ. ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕೆಇಎ ಈಗಾಗಲೇ ಎಸ್‍ಎಂಎಸ್ ಅನ್ನು ಕಳುಹಿಸಿದೆ ಎಂದು ಅವರು ತಿಳಿಸಿದ್ದಾರೆ.
ಪಿಯುಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾಗಿದ್ದರೂ, ಸಿಇಟಿ ಬರೆಸುವ ವಿಷಯದಲ್ಲಿ ಪೋಷಕರೂ ಎಚ್ಚರವಹಿಸಬೇಕು. ಫಲಿತಾಂಶವನ್ನು ಉತ್ತಮ ಪಡಿಸಿಕೊಳ್ಳಲು ಸರಕಾರ ಇನ್ನೂ ಎರಡು ಅವಕಾಶ ನೀಡುತ್ತಿದೆ. ಹೀಗಾಗಿ ಒಮ್ಮೆ ಮಾತ್ರ ನಡೆಯುವ ಸಿಇಟಿ ಪರೀಕ್ಷೆಯಿಂದ ಯಾರೂ ವಿಮುಖರಾಗುವುದು ಬೇಡ ಎಂದೂ ಪ್ರಸನ್ನ ಹೇಳಿದ್ದಾರೆ.
ಸಿಇಟಿ ಫಲಿತಾಂಶ:
ಪಿಯುಸಿ ಪರೀಕ್ಷೆ-2ರ ಫಲಿತಾಂಶದ ಬಳಿಕವೇ ಸಿಇಟಿ ಫಲಿತಾಂಶವನ್ನು ಪ್ರಕಟಿಸಲು ರಾಜ್ಯ ಸರಕಾರ ಕ್ರಮವಹಿಸಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿಇಟಿ ರ್ಯಾಂಕ್‍ಗೆ ಪಿಯುಸಿ ಪರೀಕ್ಷೆ-2 ಮತ್ತು 3ರ ಪೈಕಿ ಅತ್ಯಧಿಕ ಅಂಕ ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದೆ.