ನನ್ನ ಬಳಿ ಟನ್ ಗಟ್ಟಲೆ ದಾಖಲೆಗಳಿವೆ ಎಂಬುದು ಸುಳ್ಳಲ್ಲ, ಅಕ್ಷರಶಃ ಸತ್ಯ: ಎಚ್.ಡಿ. ಕುಮಾರಸ್ವಾಮಿ

Update: 2025-04-12 20:15 IST
ನನ್ನ ಬಳಿ ಟನ್ ಗಟ್ಟಲೆ ದಾಖಲೆಗಳಿವೆ ಎಂಬುದು ಸುಳ್ಳಲ್ಲ, ಅಕ್ಷರಶಃ ಸತ್ಯ: ಎಚ್.ಡಿ. ಕುಮಾರಸ್ವಾಮಿ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (Photo: X/@hd_kumaraswamy)

  • whatsapp icon

ಬೆಂಗಳೂರು: ನನ್ನ ಬಳಿ ಟನ್ ಗಟ್ಟಲೆ ದಾಖಲೆಗಳಿವೆ ಎಂಬುದು ಸುಳ್ಳಲ್ಲ. ಅಕ್ಷರಶಃ ಸತ್ಯ. ಆದರೆ, ಕೆಲವು ಕಾಂಗ್ರೆಸ್ ಪುಡಾರಿಗಳು ನನ್ನನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ನನ್ನ ದನಿಯನ್ನು ಅಡಗಿಸುವ ಕೆಲಸ ಯಾರಿಂದಲೂ ಸಾಧ್ಯವಿಲ್ಲ. ಹೆದರುವ ವ್ಯಕ್ತಿಯೂ ನಾನಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ನಗರದಲ್ಲಿ ಫ್ರೀಡಂ ಪಾರ್ಕ್‍ನಲ್ಲಿ ನಡೆದ ಪ್ರತಿಭಟನೆ ಪಾಲ್ಗೊಂಡು ಮಾತನಾಡಿದ ಅವರು, ಟನ್ ಗಟ್ಟಲೆ ದಾಖಲೆ ಇದೆ ಎಂದು ಹೇಳಿದ್ದೆ, ಅದು ನಿಜ. ಹಿಂದೆ ಅಧಿಕಾರದಲ್ಲಿದ್ದಾಗ ನನ್ನ ಧ್ವನಿ ಅಡಗಿಸುವ ಕೆಲಸ ಮಾಡಿದ್ದರು. ಈಗಲೂ ಕಾಂಗ್ರೆಸ್ ಪಕ್ಷದ ಪುಡಾರಿಗಳು ನನ್ನನ್ನು ಹೆದರಿಸಿ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ನಾನು ಹೆದರುವ ವ್ಯಕ್ತಿ ಅಲ್ಲ ಎಂದರು.

ನನ್ನ ವಿರುದ್ಧ ಪ್ರತಿಭಟನೆ ಮಾಡಿ ಲಾರಿಯಲ್ಲಿ ದಾಖಲೆಗಳನ್ನು ತಂದು ಕೊಡುತ್ತಾರಂತೆ. ತಂದು ಕೊಡಲಿ, ನಾನೂ ನೋಡುತ್ತೇನೆ. ಈ ಕಾಂಗ್ರೆಸ್ ಪುಡಾರಿಗಳು ಯಾವ ಮಟ್ಟದಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ನನ್ನಲ್ಲಿರುವ ದಾಖಲೆಗಳನ್ನು ಬಿಚ್ಚಿಟ್ಟರೆ ಜನರೇ ಇವರನ್ನು ಓಡಿಸುತ್ತಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ನಾನು ಯಾವುದೇ ಕಾನೂನು ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿಲ್ಲ. ನ್ಯಾಯ, ಕೋರ್ಟ್ ಇದೆ ಎಂದು ಹೋರಾಟ ಮಾಡುತ್ತಿದ್ದೇನೆ. ನನ್ನಲ್ಲಿ ಅಧಿಕಾರ ಇದ್ದಾಗಲೂ ನಾನು ನನ್ನ ಕೆಲಸ ಮಾಡಿಕೊಳ್ಳಲಿಲ್ಲ. ಈಗ ಕೇಂದ್ರ ಸಚಿವನಾಗಿದ್ದಾಗಲೂ ಕಾಂಗ್ರೆಸ್‍ನವರು ನನಗೆ ಕಿರುಕುಳ ನೀಡುತ್ತಿದ್ದಾರೆ. ಅದಕ್ಕೆ ಹೆದರುವುದಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಗಣಿ ಆರೋಪಕ್ಕೆ ಸಿದ್ದರಾಮಯ್ಯ ಏನು ಹೇಳುತ್ತಾರೆ?:

ಸಿದ್ದರಾಮಯ್ಯ ಅವರು ಮೊದಲ ಅವಧಿಗೆ ಸಿಎಂ ಆಗಿದ್ದ ಸಂದರ್ಭದಲ್ಲಿ ಗಣಿ ಗುತ್ತಿಗೆ ನವೀಕರಣಕ್ಕೆ 500 ಕೋಟಿ ರೂ. ಕಿಕ್‍ಬ್ಯಾಕ್ ಪಡೆದಿರುವ ಆರೋಪ ಬಂದಿದೆ. ಗಣಿ ಗುತ್ತಿಗೆ ನವೀಕರಣದಿಂದ ಸರಕಾರದ ಬೊಕ್ಕಸಕ್ಕೆ 5,000 ಕೋಟಿ ರೂ. ನಷ್ಟ ಉಂಟು ಮಾಡಿರುವ ಗಂಭೀರ ಆಪಾದನೆಯನ್ನು ಸಿದ್ದರಾಮಯ್ಯ ಎದುರಿಸುತ್ತಿದ್ದಾರೆ. ನನ್ನ ಮೇಲೆ ಗಣಿ ಗುತ್ತಿಗೆ ಆರೋಪ ಮಾಡಿರುವ ಸಿದ್ದರಾಮಯ್ಯ ಅವರು, ಈಗ ತಮ್ಮ ಸುತ್ತ ಸುತ್ತಿಕೊಂಡಿರುವ ಗಣಿ ಅಕ್ರಮದ ಬಗ್ಗೆ ಮಾತನಾಡಲಿ. ತಮ್ಮ ವಿರುದ್ಧ ಬಂದಿರುವ ಆರೋಪಕ್ಕೆ ಅವರು ಏನು ಹೇಳುತ್ತಾರೆ? ಎಂದು ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿ ನಾಟಕ:

ಜಾತಿಗಣತಿ ವರದಿಗೆ ಅರ್ಥವೇ ಇಲ್ಲ, ಕಾಂತರಾಜು ಆಯೋಗದ ವರದಿ ಸಿದ್ದ ಮಾಡಿ 10 ವರ್ಷಗಳೇ ಕಳೆದಿವೆ. ಜನರಲ್ಲಿ ಗ್ಯಾರಂಟಿ ವೈಫಲ್ಯ, ಭ್ರಷ್ಟಾಚಾರ, ದರ ಏರಿಕೆ ವಿರುದ್ಧ ಆಕ್ರೋಶ ಸ್ಫೋಟವಾಗುವ ಹಂತದಲ್ಲಿದೆ. ಹೀಗಾಗಿ ಜನರ ಗಮನ ಬೇರೆಡೆಗೆ ಹೊರಳಿಸಲು ಜಾತಿ ಗಣತಿ ನಾಟಕ ನಡೆಸಿದ್ದಾರೆ. ಜಾತಿ ಸಂಘರ್ಷಕ್ಕೆ ಏನೇನು ಮಾಡಬೇಕೋ ಅದಕ್ಕೆ ವೇದಿಕೆ ಸಿದ್ಧ ಮಾಡಲು ಸಿದ್ದರಾಮಯ್ಯ ಹೊರಟಿದ್ದಾರೆ. ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಸಿದ್ದರಾಮಯ್ಯ ಈ ನಾಟಕ ಮಾಡುತ್ತಿದ್ದಾರೆ. ಈ ಸರಕಾರ ಜಾತಿಗಣತಿ ಮಾಡಬೇಕಾದರೆ ಹೊಸದಾಗಿ ಸಮೀಕ್ಷೆ ಮಾಡಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News