ಮಂಗಳೂರು: ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ನೂತನ ಕಟ್ಟಡ ‘ಬಹರ್- ಎ- ನೂರ್’ ಉದ್ಘಾಟನೆ

Update: 2025-04-12 15:33 IST
ಮಂಗಳೂರು: ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ನೂತನ ಕಟ್ಟಡ ‘ಬಹರ್- ಎ- ನೂರ್’ ಉದ್ಘಾಟನೆ
  • whatsapp icon

ಮಂಗಳೂರು, ಎ.12: ಮೀನುಗಾರರ ಬಹು ಸಮಯದ ಬೇಡಿಕೆಯಂತೆ ಕಡಲ ನಡುವೆ ಮೀನುಗಾರರು ತುರ್ತು ಅವಘಡ, ಅನಾರೋಗ್ಯ ಪರಿಸ್ಥಿತಿಗೆ ತಕ್ಷಣ ಸ್ಪಂದಿಸಲು ಸಹಕಾರಿಯಾಗುವಂತೆ ಸೀ ಆ್ಯಂಬುಲೆನ್ಸ್ ವ್ಯವಸ್ಥೆಗೆ ಈಗಾಗಲೇ ಟೆಂಡರ್ ಕರೆಯಲಾಗುತ್ತಿದ್ದು, ಆಗಸ್ಟ್ ನೊಳಗೆ ಕಾರ್ಯಗತವಾಗಬಹುದು ಎಂದು ರಾಜ್ಯದ ಮೀನುಗಾರಿಕಾ ಸಚಿವ ಮಂಕಾಳ ಎಸ್. ವೈದ್ಯ ತಿಳಿಸಿದ್ದಾರೆ.

 

ಮೀನುಗಾರಿಕಾ ಬಂದರಿನ ಮುಖ್ಯದ್ವಾರದ ಬಳಿ ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿಯಮಿತದ ‘ಬಹರ್- ಎ- ನೂರ್’ ನೂತನ ಕಟ್ಟಡದಲ್ಲಿ ಶನಿವಾರ ಮಂಜುಗಡ್ಡೆ ಸ್ಥಾವರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

 

ಮಂಗಳೂರು ಧಕ್ಕೆಯ ಮೂರನೆ ಹಂತದ ಕಾಮಗಾರಿ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಒಟ್ಟಾಗಿ ಸುಮಾರು 80 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಟೆಂಡರ್ ಕರೆಯಲಾಗಿದೆ. ಡ್ರೆಜ್ಜಿಂಗ್ ಕಾಮಗಾರಿಗೂ ಟೆಂಡರ್ ಕರೆಯಲಾಗಿದೆ. ನೂತನ ಸರಕಾರವು ಮೀನುಗಾರರಿಗೆ ನೀಡುತ್ತಿದ್ದ 1.50 ಲಕ್ಷ ಲೀಟರ್ ಡೀಸೆಲನ್ನು 2 ಲಕ್ಷ ಲೀಟರ್ಗೆ ಏರಿಕೆ ಮಾಡಿದ್ದು, ಅದನ್ನು ಐದು ತಿಂಗಳ ಅವಧಿಯೊಳಗೆ ಉಪಯೋಗಿಸಲು ಸಹಕಾರಿಯಾಗುವಂತೆ ಕ್ರಮ ವಹಿಸಲಾಗಿದೆ ಎಂದು ಸಚಿವರು ಹೇಳಿದರು.

 

ಮೀನುಗಾರಿಕಾ ಇಲಾಖೆಯ ನಿರ್ದೇಶಕ ದಿನೇಶ್ ಕುಮಾರ್ ಕೆ. ಮಾತನಾಡಿ, ನೂತನ ಕಟ್ಟಡದಲ್ಲಿ ಆರಂಭಗೊಂಡಿರುವ ಮಂಜುಗಡ್ಡೆ ಸ್ಥಾವರಕ್ಕೆ ಮತ್ಸ ಸಂಪದ ಯೋಜನೆಯಡಿ ಯಾವ ರೀತಿಯಲ್ಲಿ ಸಹಕಾರ ಒದಗಿಸಲಾಗುವುದು ಎಂಬ ಬಗ್ಗೆ ಪರಿಶೀಲಿಸಲಾಗುವುದು. ಧಕೆಯಲ್ಲಿ ಮೂರನೆ ಹಂತದ ಕಾಮಗಾರಿ ಹಾಗೂ ಇತರ ಕಾಮಗಾರಿಗಳು ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಹೇಳಿದರು.

ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಬಹರ್ - ಎ- ನೂರ್ ನೂತನ ಕಟ್ಟಡವನ್ನು ಉದ್ಘಾಟಿಸಿದರು.

 

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸಾಗರಮಾಲ ಯೋಜನೆಯಡಿ ಮಂಗಳೂರು ಧಕ್ಕೆಯ ಮೈನಸ್ 7 ಮೀಟರ್ ಡ್ರೆಜ್ಜಿಂಗ್ಗೆ 9 ಬಾರಿ ಟೆಂಡರ್ ಕರೆಯಲಾಗಿದೆ. ಮೂರನೆ ಹಂತದ ಧಕ್ಕೆ ಅಭಿವೃದ್ಧಿ ಕಾಮಗಾರಿ ಮಂಜೂರುಗೊಂಡು ಎರಡು ವರ್ಷಗಳಾದರೂ ಕಾಮಗಾರಿ ಆರಂಭವಾಗಿಲ್ಲ ಎಂದು ಹೇಳಿದರು.

 

ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಜೆ. ಮುಹಮ್ಮದ್ ಇಸಾಕ್ ಅಧ್ಯಕ್ಷತೆ ವಹಿಸಿದ್ದರು.

 

ಮಾಜಿ ಮೇಯರ್ಗಳಾದ ಶಶಿಧರ ಹೆಗ್ಡೆ, ಪ್ರೇಮಾನಂದ ಶೆಟ್ಟಿ, ವಿಪಕ್ಷ ಮಾಜಿ ನಾಯಕ ಅಬ್ದುಲ್ ರವೂಫ್, ಮಾಜಿ ಸದಸ್ಯರಾದ ಸಂಶುದ್ದೀನ್, ಸಿಎ ಪ್ರವೀಣ್ ಕುಮಾರ್ ಶೆಟ್ಟಿ, ವಕೀಲ ಉದಯಾನಂದ ಎ., ಟ್ರಾಲ್ ಬೋಟ್ ಯೂನಿಯನ್ ಅಧ್ಯಕ್ಷ ಚೇತನ್ ಬೆಂಗ್ರೆ, ಪರ್ಸಿನ್ ಬೋಟ್ ಯೂನಿಯನ್ ಅಧ್ಯಕ್ಷ ಅನಿಲ್ ಕುಮಾರ್, ಮಂಗಳೂರು ಹಸಿ ಮೀನು ಯೂನಿಯನ್ ಅಧ್ಯಕ್ಷ ಕೆ.ಎಲ್. ಇಸ್ಮಾಯೀಲ್, ಸೀಫುಡ್ ಬೈಯರ್ಸ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಎಂ. ಇಬ್ರಾಹೀಂ, ಒಣಮೀನು ವ್ಯಾಪಾರಸ್ಥರ ಸಂಘದ ಅಧ್ಯಕ, ಅಹ್ಮದ್, ಮಂಗಳೂರು ಮೀನು ಮಾರುಕಟ್ಟೆ ಕಮಿಷನ್ ಏಜೆಂಟ್ ಕೆ. ಅಶ್ರಫ್, ಅಲ್ಪಸಂಖ್ಯಾತ ಮೀನುಗಾರರ ಗ್ರಾಹಕರ ಸಹಕಾರಿ ಸಂಘದ ಅಧ್ಯಕ್ಷ ಅಬ್ದುಲ್ ರಹಿಮಾನ್, ಸಂಘದ ನಿರ್ದೇಶಕರು ಹಾಗೂ ಇತರರು ಉಪಸ್ಥಿತರಿದ್ದರು.

 

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಬ್ದುಲ್ ಲತೀಫ್ ಸ್ವಾಗತಿಸಿದರು. ಸಲಹೆಗಾರ ಮಲಾರ್ ಮುಹಮ್ಮದ್ ಮುಸ್ತಫ ಪ್ರಾಸ್ತಾವಿಕವಾಗಿ ಮಾತನಾಡಿದರು. ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.

 

ಕಾರವಾರ- ಉಡುಪಿ- ಮಂಗಳೂರು ಸಮಗ್ರ ಮೀನುಗಾರಿಕಾ ನೀತಿ ಅಗತ್ಯ

ಕರ್ನಾಟಕದ ಕರಾವಳಿಯಲ್ಲಿ ಸಮಗ್ರ ಮೀನುಗಾರಿಕಾ ನೀತಿಯನ್ನು ರೂಪಿಸಬೇಕಾಗಿದೆ. ಈ ಮೂಲಕ ಭವಿಷ್ಯದಲ್ಲಿ ಕರಾವಳಿ ಪ್ರದೇಶದ ಭವಿಷ್ಯದ ಮೀನುಗಾರರಿಗೆ ಪೂರಕವಾಗಿ ಕ್ರಮಗಳನ್ನು ಕೈಗೊಳ್ಳಲು ಸಾಧ್ಯಾಗಲಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

ಇಂದು ಕಡಲು ನೋಡದವರು ಕೂಡಾ ಬೋಟುಗಳನ್ನು ಹೊಂದಿದ್ದಾರೆ. ಆದರೆ ಉತ್ತಮ ಮೀನುಗಾರಿಕೆಯ ಜತೆಗೆ ನಮ್ಮ ಜಲ ಮತ್ತು ಜಲ ಕೃಷಿಯನ್ನು ಸಂರಕ್ಷಿಸುವ ಜವಾಬ್ಧಾರಿಯೂ ಮೀನುಗಾರರದ್ದಾಗಬೇಕು. ಮರಿ ಮೀನು ಹಿಡಿಯುವಂತಹ ಪ್ರಕ್ರಿಯೆಗಳಿಗೆ ಕಡಿವಾಣ ಹಾಕುವ ಕೆಲಸವೂ ಮೀನುಗಾರರು ಮಾಡುವ ಮೂಲಕ ನಮ್ಮ ಮೀನಿನ ಸಂಪತ್ತನ್ನು ಮುಂದಿನ ಜನಾಂಗಕ್ಕೂ ಸಂರಕ್ಷಿಸುವ ನಿಟ್ಟಿನಲ್ಲಿ ಅಗತ್ಯ ರೂಪುರೇಷೆಗಳನ್ನು ಮೀನುಗಾರಿಕಾ ಸಂಘಟನೆಗಳ ಮೂಲಕ ಮಾಡಬೇಕು. ಜತೆಗೆ ಒಗ್ಗಟ್ಟಿನಿಂದ ಸೌಹಾರ್ದ ಸಮಾಜವನ್ನು ಕಟ್ಟುವ ಸಕಾರಾತ್ಮಕ ಚಿಂತನೆಯನ್ನು ಮೀನುಗಾರರು ಬೆಳೆಸಿಕೊಳ್ಳಬೇಕು. ಮಂಗಳೂರು ಧಕ್ಕೆಯಲ್ಲಿನ ದೋಣಿಗಳ ದಟ್ಟಣೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸುವ ನಿಟ್ಟಿನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕೋಟೆಪುರದಲ್ಲಿ ಮೀನಿ ಮೀನುಗಾರಿಕಾ ಜೆಟ್ಟಿ ಕಾಮಗಾರಿ ಆರಂಭಗೊಳ್ಳಲಿದೆ. 200 ಕೋಟಿರೂ. ವೆಚ್ಚದಲ್ಲಿ ಬೋಳಾರ ಹಾಗೂ ಕೋಟೆಪುರ ನಡುವೆ ಮೀನುಗಾರಿಕಾ ಸೇತುವೆ ನಿರ್ಮಾಣಕ್ಕೆ ಅನುಮೋದನೆ ದೊರಕಿದೆ ಎಂದು ಅವರು ತಿಳಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News