ಬೆಲೆ ಏರಿಕೆಯ ಮೂಲ ಪುರುಷ ತಾವೇ ಎಂದು ಪ್ರಧಾನಿ ಮೋದಿ ಸಾಬೀತು ಪಡಿಸಿದ್ದಾರೆ : ದಿನೇಶ್ ಗುಂಡೂರಾವ್

ಬೆಂಗಳೂರು: ರಾಜ್ಯ ಬಿಜೆಪಿ ನಾಯಕರಿಗೆ ಜನಾಕ್ರೋಶಯಾತ್ರೆ ಯನ್ನು ರಾಜ್ಯ ಸರ್ಕಾರದ ವಿರುದ್ಧ ಮಾಡಬೇಕೋ ಅಥವಾ ಕೇಂದ್ರ ಸರ್ಕಾರದ ವಿರುದ್ಧ ಮಾಡಬೇಕೋ ಎಂಬುದೇ ದೊಡ್ಡ ಗೊಂದಲವಾಗಿದೆ. ರಾಜ್ಯ ಬಿಜೆಪಿ ನಾಯಕರಿಗೆ ಇಂತಹ ಮುಖಭಂಗದ ಪರಿಸ್ಥಿತಿ ಬರಬಾರದಿತ್ತು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಣಕಿಸಿದ್ದಾರೆ.
ಸಾಮಾಜಿಕ ಜಾಲತಾಣ X ನಲ್ಲಿ ಟ್ವೀಟ್ ಮಾಡಿರುವ ಅವರು, ನಮ್ಮ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುತ್ತಿರುವ ಬಿಜೆಪಿ ನಾಯಕರ ಪರಿಸ್ಥಿತಿ ಇಂಗು ತಿಂದ ಮಂಗನಂತಾಗಿದೆ. ಬೆಲೆಯೇರಿಕೆ ವಿಚಾರವನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಹೊರಟಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಸ್ವತಃ ಮೋದಿಯವರೆ ಮುಟ್ಟಿ ನೋಡಿಕೊಳ್ಳುವಂತೆ ಶಾಕ್ ಕೊಟ್ಟಿದ್ದಾರೆ ಎಂದು ಕುಟುಕಿದ್ದಾರೆ.
ರಾಜ್ಯ ಬಿಜೆಪಿ ನಾಯಕರು ಇಲ್ಲಿ ಬೆಲೆಯೇರಿಕೆಯಾಗಿದೆ ಎಂದು ಬೀದಿ ನಾಟಕ ಆಡುವ ಹೊತ್ತಿನಲ್ಲೇ ಪ್ರಧಾನಿ ಮೋದಿಯವರು ಅಡುಗೆ ಅನಿಲ ದರ ಹಾಗೂ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಸುಂಕ ಹೆಚ್ಚಿಸಿದ್ದಾರೆ. ಈ ಮೂಲಕ ಬೆಲೆ ಏರಿಕೆಗೆ ಮೂಲ ಪುರುಷರೇ ತಾವು ಎಂದು ಸಾಬೀತು ಪಡಿಸಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.