ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಬೀದಿಗಿಳಿದ 25ಸಾವಿರಕ್ಕೂ ಅಧಿಕ ಆಶಾ ಕಾರ್ಯಕರ್ತೆಯರು

Update: 2025-01-07 14:18 GMT

ಬೆಂಗಳೂರು: ಮಾಸಿಕ 15ಸಾವಿರ ರೂ.ನಿಶ್ಚಿತ ಗೌರವಧನ ನಿಗದಿ ಮಾಡುವುದು ಸೇರಿದಂತೆ ಇತರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ಇಲ್ಲಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿರುವ 25 ಸಾವಿರಕ್ಕೂ ಅಧಿಕ ಆಶಾ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಿದ್ದಾರೆ.

ಧರಣಿ ಸತ್ಯಾಗ್ರಹನಿರತ ಆಶಾ ಕಾರ್ಯಕತೆಯರು, ‘ಆಶಾಗಳಿಗೆ ಗೌರವಧನ 15 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು, ರಾಜ್ಯ ಸರಕಾರ ನುಡಿದಂತೆ ನಡೆಯಬೇಕು, ಹೋರಾಟದ ಹಕ್ಕನ್ನು ಹತ್ತಿಕ್ಕಿದ ಆರೋಗ್ಯ ಇಲಾಖೆಗೆ ಧಿಕ್ಕಾರ’ ಎಂಬ ಘೋಷಣೆ ಕೂಗಿ, ಗೌರವಧನ ಹೆಚ್ಚಿಸುವ ವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಆಶಾಗಳ ಹೋರಾಟ ಬೆಂಬಲಿಸಿ ಮಾತನಾಡಿದ ಸಾಹಿತಿ ಪ್ರೊ.ಅಲ್ಲಮಪ್ರಭು ಬೆಟ್ಟದೂರು, ಪ್ರಸ್ತುತ ಹೆಚ್ಚುತ್ತಿರುವ ಜೀವನ ವೆಚ್ಚ, ಬೆಲೆ ಏರಿಕೆಯಿಂದ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಜ್ಯ ಸರಕಾರವು ಆಶಾ ಕಾರ್ಯಕರ್ತರಿಗೆ ಮಾಸಿಕ 15ಸಾವಿರ ರೂ.ನಿಶ್ಚಿತ ಗೌರವಧನವನ್ನು ಪಾವತಿ ಮಾಡಿ, ಗೌರವ ತೋರಿಸಬೇಕು ಎಂದು ಸಲಹೆ ನೀಡಿದರು.

ಆಶಾ ಕಾರ್ಯಕರ್ತೆಯರ ಬೇಡಿಕೆ ಅತ್ಯಂತ ನ್ಯಾಯಯುತವಾದದ್ದು. ‘ಶ್ರಮ ನಿಮ್ಮದು, ಫಲ ನಮ್ಮದು’ ಎಂಬ ಧೋರಣೆಯನ್ನು ತಾಳದೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾರ್ಯಕರ್ತೆಯರಿಗೆ ನೀಡಿದ ಭರವಸೆಯಂತೆ ನಡೆಯಬೇಕು. ಆ ಮೂಲಕ ಆಶಾ ಕಾರ್ಯಕರ್ತೆಯರಿಗೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಎಸ್‍ಯುಸಿಐ) ರಾಜ್ಯ ಕಾರ್ಯದರ್ಶಿ ಕೆ. ಉಮಾ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಿರುವ ಆಶಾ ಕಾರ್ಯಕರ್ತೆಯರು ಹೆಣ್ಣುಮಕ್ಕಳಿಗೆ ಆಶಾದಾಯಕ ಶಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಸರಕಾರ ಗೌರವಧನ ನೀಡುತ್ತೇವೆ ಎನ್ನುತ್ತದೆ, ನೀಡಬೇಕಾದ ಗೌರವ ನೀಡುತ್ತಿಲ್ಲ, ಪ್ರೋತ್ಸಾಹಧನ ಎನ್ನುತ್ತಾರೆ ನಿಜವಾದ ಪ್ರೋತ್ಸಾಹ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇವಲ 15ಸಾವಿರ ರೂ. ಗೌರವ ಧನ ಹೆಚ್ಚಳ ಕೇಳುತ್ತಾ ಹೋರಾಟಕ್ಕೆ ಬರುತ್ತಿದ್ದ ಆಶಾ ಕಾರ್ಯಕರ್ತೆಯರನ್ನು ಹತ್ತಿಕ್ಕಲು ರಾಜ್ಯ ಸರಕಾರ ಪ್ರಯ್ತತ್ನಿಸಿದೆ. ನಾವು ಹೆಣ್ಣು ಮಕ್ಕಳ ಪರ ಎಂದು ಹೇಳಿಕೊಂಡೆ ಅವರನ್ನು ಹೆದರಿಸಿ, ಬೆದರಿಸುವುದು ಎಂತಹ ಧೋರಣೆ ಎಂದ ಪ್ರಶ್ನಿಸಿದ ಅವರು, ಯಾವುದೇ ಕುತಂತ್ರಗಳಿಗೆ ಬಲಿಯಾಗದೆ ಎಲ್ಲ ಅಡೆತಡೆಗಳನ್ನು ಮೀರಿ ಚಳವಳಿಗೆ ಬಂದಿರುವ ಆಶಾ ಕಾರ್ಯಕರ್ತೆಯರು ಎಲ್ಲರಿಗೂ ಸ್ಫೂರ್ತಿ ಎಂದರು.

ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್‍ನ(ಎಐಯುಟಿಯುಸಿ) ಕೇಂದ್ರ ಸಮಿತಿಯ ಅಧ್ಯಕ್ಷ ಕೆ.ರಾಧಾಕೃಷ್ಣ ಮಾತನಾಡಿ, ದೇಶದಲ್ಲಿ ಸಂಪತ್ತಿನ ಅಸಮಾನ ಹಂಚಿಕೆಯಿಂದಾಗಿ ಅಸಮಾನತೆ, ತಾರತಮ್ಯ ಎಲ್ಲೆ ಮೀರಿದೆ. ಜಾಗತೀಕರಣ, ಖಾಸಗೀಕರಣ ನೀತಿಗಳ ನಂತರ ಖಾಯಂ ನೌಕರಿ ಪದ್ಧತಿ ತೆಗೆದು ಗುತ್ತಿಗೆ ಪದ್ಧತಿ ಆಧಾರದ ಮೇಲೆ ಉದ್ಯೋಗ ನೀಡಲಾಗುತ್ತಿದೆ ಎಂದರು.

50ಸಾವಿರ ರೂ. ಸಂಬಳ ನೀಡಬೇಕಾದ ಜಾಗದಲ್ಲಿ ಕೇವಲ 5 ಸಾವಿರ ರೂ. ಸಂಬಳ ನೀಡಲಾಗುತ್ತಿದೆ. ಗುತ್ತಿಗೆ ಪದ್ಧತಿಯು ಆರೋಗ್ಯ, ಶಿಕ್ಷಣ, ಇಂಜಿನಿಯರಿಂಗ್ ಸೇರಿ ಎಲ್ಲ ಕ್ಷೇತ್ರಗಳಿಗೂ ಆವರಿಸಿ ಅನ್ಯಾಯ ತಾಂಡವವಾಡುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕಡುಬಡತನದಲ್ಲಿರುವ ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ಬಿಟ್ಟಿ ಚಾಕರಿ ಮಾಡಿಸಿಕೊಳ್ಳುತ್ತಾ ಅತ್ಯಂತ ಕಡಿಮೆ ವೇತನ ನೀಡಿ ಶೋಷಿಸುತ್ತಿರುವುದು ಹೇಯ ಸಂಗತಿ. ಕೋವಿಡ್ ವಿರುದ್ಧ ಮುಂಚೂಣಿ ಯೋಧರು ಎಂದು ಅವರನ್ನು ಹೊಗಳಿಕೆಯ ಹೊನ್ನಶೂಲಕ್ಕೆ ಏರಿಸಲಾಗಿದೆ. ಇಂತಹ ಸಂಧರ್ಭದಲ್ಲಿ ಎಲ್ಲ ಕೇಂದ್ರ ಕಾರ್ಮಿಕ ಸಂಘಟನೆಗಳು ಜೊತೆಗೂಡಿ ಕನಿಷ್ಠ ವೇತನ 30 ಸಾವಿರ ರೂ. ನೀಡಬೇಕು ಎಂದು ಕೇಂದ್ರ ಸರಕಾರಕ್ಕೆ ಆಗ್ರಹಿಸಿವೆ. ಆದರೆ ಇಲ್ಲಿ ನೀವು ಕೇಳುತ್ತಿರುವುದು ಕೇವಲ 15 ಸಾವಿರ ರೂ. ಗೌರವ ಧನ ಹೆಚ್ಚಳ ಅಷ್ಟೇ ಎಂದು ಅವರು ತಿಳಿಸಿದರು.

ಇತಿಹಾಸದಲ್ಲಿ ಯಾವುದೇ ಹೋರಾಟವು ತ್ಯಾಗ ಬಲಿದಾನಗಳಿಲ್ಲದೆ ಯಶಸ್ವಿಯಾಗಿಲ್ಲ. ಹಾಗಾಗಿ ಯಾವುದೇ ನೀವು ತೊಂದರೆಗಳು ಎದುರಾದರೂ ಈ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಗೆಲ್ಲುವ ತನಕ, ಸರಕಾರವು ಸರಿದಾರಿಗೆ ಬರುವ ತನಕ ಮುಂದುವರಿಯಬೇಕು ಎಂದು ಕೆ.ರಾಧಾಕೃಷ್ಣ ಕರೆ ನೀಡಿದರು.

ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಮಾತನಾಡಿ, ಆರೋಗ್ಯ ಕ್ಷೇತ್ರದ ಶಕ್ತಿ ನೀವು ನ್ಯಾಯ ಸಿಗುವವರೆಗೂ ನಿಮ್ಮ ಹೋರಾಟವನ್ನು ವ್ಯವಸ್ಥಿತವಾಗಿ ಮುಂದುವರಿಸಿ ಗೆಲುವು ನಿಮ್ಮದೇ ಎಂದು ಹೇಳಿದರು. ಎಐಯುಟಿಯುಸಿ ರಾಜ್ಯ ಅಧ್ಯಕ್ಷ ಕೆ. ಸೋಮಶೇಖರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿ, ಸಮಸ್ಯೆಯನ್ನು ಬಗೆಹರಿಸುವವರೆಗೆ ಹೋರಾಟ ನಡೆಸಲಾಗುವುದು ಎಂದರು. ಇದೇ ವೇಳೆ ರಾಜ್ಯ ಉಪಾಧ್ಯಕ್ಷರಾದ ಎಂ. ಉಮಾದೇವಿ, ಟಿ.ಎಸ್. ರಮಾ ಸೇರಿದಂತೆ ಮತ್ತಿತರರು ಇದ್ದರು.

ಪ್ರತಿಭಟನೆಯ ಸ್ಥಳಕ್ಕೆ ಆರೋಗ್ಯ ಅಭಿಯಾನ ನಿರ್ದೇಶಕ ಡಾ. ತ್ರಿವೇಣಿ, ಆಶಾ ಕಾರ್ಯಕ್ರಮದ ಉಪನಿರ್ದೇಶಕ ಡಾ. ಪ್ರಭುಗೌಡ ಪಾಟೀಲ್ ಆಗಮಿಸಿ, ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತರುವುದಾಗಿ ಹೇಳಿದರು.

ಬೇಡಿಕೆ ಈಡೇರಿಸುವವರೆಗೆ ಹೋರಾಟ ನಿಲ್ಲದು:

‘ರಾಜ್ಯ ಸರಕಾರವು ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವ ಲಕ್ಷಣ ಕಾಣಿಸುತ್ತಿಲ್ಲ. ಬೇಡಿಕೆ ಈಡೇರಿಸುವ ಸಲುವಾಗಿ ಅನೇಕ ಸಭೆಗಳನ್ನು ನಡೆಸಿದ್ದರೂ, ಯಾವುದೇ ಪ್ರಯೋಜನಗಳು ಆಗಿಲ್ಲ. ಹೀಗಾಗಿ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಹೋರಾಟವನ್ನು ನಾಳೆಯು(ಜ.8) ಮುಂದುವರೆಸಲಾಗುವುದು.

-ಡಿ. ನಾಗಲಕ್ಷ್ಮೀ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ

ಆಶಾ ಕಾರ್ಯಕರ್ತೆಯರ ಬೇಡಿಕೆಗಳು:

ಹದಿನೈದು ಸಾವಿರ ರೂ.ಮಾಸಿಕ ಗೌರವಧನ ನಿಗದಿಪಡಿಸುವುದು.

ಬಾಕಿ ಇರುವ ಪ್ರೋತ್ಸಾಹ ಧನ ಬಿಡುಗಡೆ ಮಾಡುವುದು.

ನಗರ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕನಿಷ್ಠ 2 ಸಾವಿರ ರೂ. ಗೌರವಧನ ಪಾವತಿ.

ಸೇವೆಯಲ್ಲಿ ಇರುವಾಗ ಆಗುವ ಅನಾಹುತಗಳಿಗೆ ಇಲಾಖೆಯೇ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು.

ಮೊಬೈಲ್ ಕೆಲಸಗಳನ್ನು ಒತ್ತಾಯಪೂರ್ವಕವಾಗಿ ಮಾಡಿಸಿಕೊಳ್ಳುತ್ತಿರುವುದನ್ನು ಕೈಬಿಡಬೇಕು.

ಕಾರ್ಯಕರ್ತೆಯರನ್ನು ಸರಕಾರಿ ನೌಕರರೆಂದು ಪರಿಗಣಿಸಿ ನಿಯಮನುಸಾರ ಸೌಲಭ್ಯಗಳನ್ನು ನೀಡಬೇಕು.

 

 

 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News