ಎಸ್‌ಸಿ-ಎಸ್‌ಟಿ ಸಮಾವೇಶ ಸಹಿಸಲ್ಲ ಎಂದು ಯಾರಾದರು ಹೇಳಿದರೆ ತಕ್ಕ ಉತ್ತರ ಕೊಡುತ್ತೇವೆ : ಜಿ.ಪರಮೇಶ್ವರ್‌

Update: 2025-01-08 07:58 GMT

ಜಿ.ಪರಮೇಶ್ವರ್‌(PC:PTI)

ಬೆಂಗಳೂರು : ಎಸ್‌ಸಿ-ಎಸ್‌ಟಿ ಸಮಾವೇಶದ ಕುರಿತು ಚರ್ಚೆ ಮಾಡುವುದನ್ನು ಸಹಿಸುವುದಿಲ್ಲ ಎಂಬುದಾಗಿ ನನಗೆ ಯಾರು ಹೇಳಿಲ್ಲ. ಒಂದು ವೇಳೆ ಸಭೆ ಮಾಡಿದರೆ ಸಹಿಸುವುದಿಲ್ಲ ಎಂದು ಯಾರಾದರು ಹೇಳಿದರೆ ಅದಕ್ಕೆ ಸರಿಯಾಗಿ ಉತ್ತರ ಕೊಡುತ್ತೇವೆ. ಆ ಶಕ್ತಿ ನಮಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಗೂ ಮೊದಲು ಚಿತ್ರದುರ್ಗದಲ್ಲಿ ಎಸ್‌ಸಿ-ಎಸ್‌ಟಿ ಸಮಾವೇಶ ಮಾಡಲಾಗಿತ್ತು. ಸರಕಾರ ಅಧಿಕಾರಕ್ಕೆ ಬಂದರೆ ಅನೇಕ ಸಮಸ್ಯೆಗಳ‌ನ್ನು ಬಗೆಹರಿಸುವುದಾಗಿ ಹೇಳಿಕೊಂಡಿದ್ದೆವು. ಚಿತ್ರದುರ್ಗ ರೆಸ್ಯುಲ್ಯೂಷನ್ ಅಂತ ಹೆಸರು ಕೊಟ್ಟು ಬೇಡಿಕೆಗಳನ್ನು ಇಟ್ಟಿದ್ದರು. ಅದರಂತೆಯೇ ಸರಕಾರ ಅಧಿಕಾರಕ್ಕೆ ಬಂತು. ಅನೇಕ ಭರವಸೆಗಳನ್ನು ಈಡೇರಿಸುವ ಕೆಲಸಗಳನ್ನು ಸರಕಾರ ಮಾಡಿದೆ ಎಂದು ಹೇಳಿದರು.

ಕೇಂದ್ರ ಸರಕಾರದಿಂದ ಪೋಸ್ಟ್ ಮೆಟ್ರಿಕ್ ಸ್ಕಾಲರ್‌ಶಿಪ್ ಬರುತ್ತಿಲ್ಲ. ಕೇಂದ್ರದಿಂದ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನದ ಪಾಲು ಸಹ ರಾಜ್ಯಕ್ಕೆ ಬರುತ್ತಿಲ್ಲ. ಎಲ್ಲವನ್ನು ಚರ್ಚೆ ಮಾಡಬೇಕಿದೆ. ಒಗ್ಗಟ್ಟಾಗಿ ಸಮಸ್ಯೆಗಳನ್ನು ಬಗೆಹರಿಸಬೇಕು. ಈ ನಿಟ್ಟಿನಲ್ಲಿ ಸಭೆ ಸೇರಲು ತೀರ್ಮಾನಿಸಲಾಗಿತ್ತು. ಈ ವಿಚಾರವನ್ನು ದೆಹಲಿ ನಾಯಕರ ಗಮನಕ್ಕೆ ತಂದಿರಲಿಲ್ಲ. ನಮ್ಮದೇ ಆಂತರಿಕ ವಿಚಾರ ಆಗಿರುವುದರಿಂದ ಹೇಳುವ ಅವಶ್ಯಕತೆ ಇಲ್ಲ ಎಂಬ ಕಾರಣದಿಂದ ಹೇಳಿರಲಿಲ್ಲ. ಪಕ್ಷದ ವಿಚಾರಗಳು ಹಾಗೂ ಸರಕಾರದ ತೀರ್ಮಾನಗಳು ನಡೆದಾಗ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಅವರ ಗಮನಕ್ಕೆ ಹೋಗುತ್ತದೆ. ಸುರ್ಜೆವಾಲಾ ಅವರು ನನಗೆ ಕರೆ ಮಾಡಿ ಸಮಾವೇಶದಲ್ಲಿ ನಾನು ಭಾಗವಹಿಸಬೇಕು ಎಂದು ತಿಳಿಸಿದರು. ರಾಜಕೀಯ ಪ್ರೇರಿತ ಅಥವಾ ರಾಜಕೀಯಕ್ಕಾಗಿ ಮಾಡುತ್ತಿರುವ ಸಮಾವೇಶ ಅಲ್ಲ. ನೀವು ಭಾಗವಹಿಸುವಂತೆ ಆಹ್ವಾನಿಸಿದೆ. ಈಗ ಆಗುವುದಿಲ್ಲ. ಮುಂದೆ ಸಮಯ ನೀಡುತ್ತೇನೆ. ಆಗ ಸಮಾವೇಶ ಮಾಡಿ ಭಾಗವಹಿಸುತ್ತೇನೆ ಎಂದು ಸುರ್ಜೇವಾಲಾ ಅವರು ತಿಳಿಸಿದರು. ಪ್ರಧಾನ ಕಾರ್ಯದರ್ಶಿಗಳು ಹೇಳಿದ್ದರಿಂದ‌ ಮುಂದೂಡಿದ್ದೇವೆ. ಸಮಾವೇಶ ಏರ್ಪಡಿಸುತ್ತಿರುವುದರನ್ನು ರದ್ದು ಮಾಡಿಲ್ಲ. ಅವರ ಸಮಯ ತೆಗೆದುಕೊಂಡು ಚರ್ಚೆ ಮಾಡುತ್ತೇವೆ‌ ಎಂದು ಸ್ಪಷ್ಟಪಡಿಸಿದರು.

ಡಿನ್ನರ್ ಬಗ್ಗೆ ಏನೇನೋ ವ್ಯಾಖ್ಯಾನ ಮಾಡಲಾಗುತ್ತಿದೆ.‌ ಡಿನ್ನರ್ ಅಂದರೆ ಊಟ. 7 ಗಂಟೆಗೆ ಸಭೆಗೆ ಕರೆಯಲಾಗಿತ್ತು. ಎರಡು ಅಥವಾ ಮೂರು ತಾಸು ಚರ್ಚೆ ಆಗಬಹುದು. ಊಟದ ಸಮಯ ಆಗುವುದರಿಂದ, ನಿಮ್ಮ ಮನೆಗೆ ಹೋಗಿ ಊಟ ಮಾಡಿಕೊಂಡು ಬಿಡಿ ಅಂತ ಹೇಳುವುದರ ಬದಲು, ಊಟಕ್ಕೆ ಏರ್ಪಾಟು ಮಾಡಲಾಗಿತ್ತು‌ ಎಂದರು.

ಈ ಹಿಂದೆ ನಡೆದ ಚಿತ್ರದುರ್ಗ ಸಭೆಯಲ್ಲಿ ಹೈಕಮಾಂಡ್‌ ಭಾಗವಹಿಸಿತ್ತು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ, ಪ್ರಧಾನ ಕಾರ್ದರ್ಶಿಗಳು ಭಾಗವಹಿಸಿದ್ದರು. ಸಮಾವೇಶ ನಡೆಸಲು ಹೈಕಮಾಂಡ್ ವಿರೋಧ ವ್ಯಕ್ತಪಡಿಸಿಲ್ಲ. ವಿರೋಧ ಮಾಡಿದ್ದರೆ ನಿಲ್ಲಿಸಿ ಎಂದು ಹೇಳುತ್ತಿದ್ದರು. ಆ ರೀತಿ ಬೆಳವಣಿಗೆ ಏನೂ ಆಗಿಲ್ಲ. ಸಭೆ ಬೇರೆ ರೀತಿಯ ಆಯಾಮ ಪಡೆದುಕೊಳ್ಳುತ್ತದೆ ಎಂದು ಹೈಕಮಾಂಡ್‌ಗೆ ದೂರು ನೀಡಿರುವ ಬಗ್ಗೆ ನನಗೆ ಗೊತ್ತಿಲ್ಲ. ಸುರ್ಜೆವಾಲಾ ಅವರು ಕರೆ ಮಾಡಿ‌ ಕೇಳಿದಾಗ ರಾಜಕೀಯ ಲೇಪನ ಇಲ್ಲ‌ ಎಂಬುದನ್ನು ಹೇಳಿದ್ದೇನೆ ಎಂದರು.

ಪೂರ್ವಭಾವಿ ಸಭೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸಬೇಕು ಎನ್ನುವುದರ ಬಗ್ಗೆಯೂ ಚರ್ಚಿಸಲಾಗಿತ್ತು. ಇದರಲ್ಲಿ ಮುಚ್ಚಿಡುವಂತದ್ದು ಏನು ಇಲ್ಲ. ಮುಚ್ಚಿಟ್ಟುಕೊಂಡು ರಾಜಕಾರಣ ಮಾಡುವಂತದ್ದು ಏನಿದೆ. ಯಾವ ವಿಷಯದ ಬಗ್ಗೆ ಚರ್ಚೆ ಮಾಡಬೇಕು, ಬಹಿರಂಗವಾಗಿ ಚರ್ಚೆ ಮಾಡುತ್ತೇವೆ. ಅದನ್ನು ಯಾರಿಗೂ ಗೊತ್ತಾಗದಂತೆ ನಾಲ್ಕು ಗೋಡೆ‌ ಮಧ್ಯೆ ಚರ್ಚಿಸುವಂತ ಅನಿವಾರ್ಯತೆ ಇಲ್ಲ. ಅನೇಕ ಜ್ವಲಂತ ಸಮಸ್ಯೆಗಳಿವೆ. ದಲಿತ ಸಮುದಾಯಕ್ಕೆ ಆಗುತ್ತಿರುವ ತೊಂದರೆಗಳ ಬಗ್ಗೆ ಚರ್ಚೆ ಮಾಡಬೇಕಲ್ಲವೇ? ಎಂದರು.

 ಶರಣಾಗುವಂತೆ ನಕ್ಸಲರಿಗೆ ಕರೆ ಕೊಡಲಾಗಿತ್ತು :

ನಕ್ಸಲರು ಶರಣಾಗುತ್ತಿದ್ದಾರೆ ಎಂಬುದನ್ನು ಮಾತ್ರ ಹೇಳಬಲ್ಲೆ. ವಿಕ್ರಂಗೌಡ ಸಾವು ಆದಾಗ, ನೀವೆಲ್ಲ ಶರಣಾಗುವಂತೆ ನಕ್ಸಲರಿಗೆ ಕರೆ ಕೊಡಲಾಗಿತ್ತು. ಜೀವನದಲ್ಲಿ ಯಾಕೆ ಈ ದಾರಿ ಹಿಡಿದಿದ್ದೀರಿ. ಸಮಾಜದ‌ ಮುನ್ನೆಲೆಗೆ ಬನ್ನಿ ಎಂದು ಆಹ್ವಾನ ನೀಡಿದ್ದೆ. ಅದೇ ರೀತಿಯಾಗಿ ಎಎನ್‌ಎಫ್ ಹಿರಿಯ ಅಧಿಕಾರಿಗಳು‌ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಕರೆ ಕೊಟ್ಟಿದ್ದರು. ಅನೇಕ ಪ್ರಕರಣಗಳಿವುದು ನಿಜ. ಶರಣಾದ ನಂತರ ಯಾವ ರೀತಿ ಚರ್ಚೆ ಮಾಡಬೇಕು, ಕಾನೂನಿನಲ್ಲಿ ಏನು ಅವಕಾಶವಿದೆ ಎಂಬುದನ್ನು ನೋಡುತ್ತೇವೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News