ಪಕ್ಷದಲ್ಲಿ ನಾನು, ಸರಕಾರದಲ್ಲಿ ಸಿಎಂ ಹೇಳಿಕೆಯೇ ಅಂತಿಮ : ಡಿ.ಕೆ.ಶಿವಕುಮಾರ್

Update: 2025-01-08 14:31 GMT

ಬೆಂಗಳೂರು : ಕಾಂಗ್ರೆಸ್ ಕಚೇರಿಯಲ್ಲಿ ನಾನು, ಸರಕಾರದ ವಿಚಾರದಲ್ಲಿ ಸಿಎಂ ಅವರ ಹೇಳಿಕೆಯೇ ಅಂತಿಮ. ಬೇರೆ ಹೇಳಿಕೆಗಳಿಗೆ ಬೆಲೆ ಇರುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಬುಧವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ‘ಅಧಿಕಾರ ಹಂಚಿಕೆ ಬಗ್ಗೆ ಸರಕಾರದ ವಲಯದಲ್ಲಿ ಹಲವು ಹೇಳಿಕೆ ಕೇಳಿಬರುತ್ತಿವೆ’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಹೇಳಿಕೆಯೂ ಕೇಳಿಬಂದಿಲ್ಲ. ಸರಕಾರ ಬಲಿಷ್ಠವಾಗಿದೆ. ಎಲ್ಲರೂ ಪಕ್ಷ ಬಲವರ್ಧನೆಗೆ ಹೆಚ್ಚೆಚ್ಚು ಕೆಲಸ ಮಾಡುತ್ತಿದ್ದೇವೆ ಎಂದರು.

ನಮ್ಮಲ್ಲಿ ಒಗ್ಗಟ್ಟಿದೆ, ಯಾರಿಗೂ ಬಿಕ್ಕಟ್ಟಿಲ್ಲ. ಬಿಕ್ಕಟ್ಟಿದ್ದರೆ ಅದು ವಿಪಕ್ಷದಲ್ಲಿರಬೇಕು. ಅವರಿಗೆ ಸೂಜಿ ದಾರ ಕಳುಹಿಸಿಕೊಡುತ್ತೇನೆ. ಮೊದಲು ಅವರು ತಮ್ಮ ಒಡೆದ ಮನೆಯನ್ನು ಒಲಿದುಕೊಳ್ಳಲಿ. ನಮ್ಮಲ್ಲಿ ಬಿಕ್ಕಟ್ಟಿದೆಯೆಂದು ಹೇಳಿದವರು ಯಾರು? ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

ವಿಪಕ್ಷಗಳು ಟೀಕೆ, ಆರೋಪಗಳನ್ನು ಮಾಡುತ್ತಿರಲಿ. ನಾವು ನಮ್ಮ ಸಿದ್ಧಾಂತ, ಆಚಾರ ವಿಚಾರವನ್ನು ಸರಕಾರದ ಮೂಲಕ ಹೇಳುತ್ತೇವೆ. ಬಸವಣ್ಣ, ಕೆಂಪೇಗೌಡ, ಅಂಬೇಡ್ಕರ್, ಗಾಂಧೀಜಿ ಅವರ ಪ್ರತಿಮೆ ಮಾಡುತ್ತೇವೆ. ಈ ದೇಶದಲ್ಲಿ ಅತಿ ಹೆಚ್ಚು ಪ್ರತಿಮೆಗಳಿರುವುದು ಅಂಬೇಡ್ಕರ್ ಅವರದ್ದು, ಕೆಲವರು ಇದನ್ನು ಮರೆತಿದ್ದಾರೆ. ವಿಧಾನಸೌಧದ ಮುಂದೆ ಇರುವ ಅಂಬೇಡ್ಕರ್ ಹಾಗೂ ಗಾಂಧೀಜಿ, ನೆಹರೂ ಅವರ ಪ್ರತಿಮೆ ಸರಕಾರದ್ದಲ್ಲವೇ? ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News