ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾಗತರಾದ 6 ಮಂದಿ ನಕ್ಸಲರು

Update: 2025-01-08 15:59 GMT

ಬೆಂಗಳೂರು : ಹಲವು ದಶಕಗಳ ಕಾಲ ಬಂದೂಕು ಹಿಡಿದು ಹೋರಾಟ ನಡೆಸಿದ್ದ ಆರು ಮಂದಿ ನಕ್ಸಲೀಯರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಪರಮೇಶ್ವರ್ ಸೇರಿದಂತೆ ಪೊಲೀಸ್ ವರಿಷ್ಠಾಧಿಕಾರಿಗಳ ಮುಂದೆ ಶರಣಾಗಿದ್ದು, ಈ ಮೂಲಕ ರಾಜ್ಯದಲ್ಲಿ ನಕ್ಸಲ್ ಶಸ್ತ್ರಾಸ್ತ್ರ ಅಂತ್ಯ ಕಂಡಿದೆ.

ಬುಧವಾರ ‘ನಕ್ಸಲ್ ಶರಣಾಗತಿ ಮತ್ತು ಪುನರ್ ವಸತಿ ಸಮಿತಿ’ ಹಾಗೂ ‘ಶಾಂತಿಗಾಗಿ ನಾಗರಿಕ ವೇದಿಕೆ’ ಸದಸ್ಯರ ನೇತೃತ್ವದಲ್ಲಿ ಚಿಕ್ಕಮಗಳೂರಿನಿಂದ ನೇರವಾಗಿ ಬೆಂಗಳೂರಿನ ಮುಖ್ಯಮಂತ್ರಿ ಗೃಹ ಕಚೇರಿಗೆ ಆಗಮಿಸಿದ ನಕ್ಸಲರಾದ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ಕೆ.ವಸಂತ್ ಹಾಗೂ ಟಿ.ಎನ್.ಜೀಶ್ ರಾಜ್ಯ ಸರಕಾರದ ಮುಂದೆ ಶರಣಾದರು.

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಸೇರಿದಂತೆ ಪ್ರಮುಖರು ‘ಸಂವಿಧಾನ ಪ್ರತಿ, ಗುಲಾಬಿ ಹೂವು’ ನೀಡಿ ಸ್ವಾಗತಿಸಿದರು. ಇದೇ ವೇಳೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ನಕ್ಸಲರು ಮನವಿ ಸಲ್ಲಿಸಿದಾಗ ಸಚಿವ ಸಂಪಟುದಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಪ್ರಕಟಿಸಿದರು.

ಈ ವೇಳೆ ನಕ್ಸಲ್ ನಾಯಕಿ ಮುಂಡಗಾರು ಲತಾ ಮಾತನಾಡಿ, ‘ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಆರು ಜನ ಮುಖ್ಯವಾಹಿನಿಗೆ ಬರಬೇಕೆಂದು ತೀರ್ಮಾನ ಮಾಡಿ ಎರಡು ಹಂತದ ಚರ್ಚೆ ನಡೆಸಿದ್ದೇವೆ. ನಮ್ಮ ಹಕ್ಕೊತ್ತಾಯಗಳನ್ನು ಸರಕಾರ ಈಡೇರಿಸುತ್ತದೆ ಎಂಬ ಭರವಸೆ ಇದೆ. ಜನರ ಪರವಾಗಿ ಹೋರಾಟ ಮಾಡಲು ಹಿಂಜರಿಯುವುದಿಲ್ಲ. ನಮ್ಮ ಉಸಿರಿರುವವರೆಗೂ ಭರವಸೆ ನೀಡುತ್ತೇವೆ’ ಎಂದು ಹೇಳಿದರು.

ಬೇಡಿಕೆಗಳೇನು?: ‘ಮೂರು ರಾಜ್ಯದಲ್ಲಿ ಭೂಮಿ ಇಲ್ಲದ ಪ್ರತೀ ಕುಟುಂಬಕ್ಕೆ 5 ಎಕರೆ ಕೃಷಿ ಯೋಗ್ಯ ಭೂಮಿ ಕೊಡಬೇಕು. ಭೂಮಿ ಇರುವವರಿಗೆ ಶಾಶ್ವತ ಹಕ್ಕುಪತ್ರ ಕೊಡಬೇಕು. ಆದಿವಾಸಿಗಳಿಗೆ ಭೂಮಿ ಮತ್ತು ಶಾಶ್ವತ ಹಕ್ಕುಪತ್ರ ನೀಡಬೇಕು. ಕೃಷಿ ಯೋಗ್ಯ ಪಾಳು ಭೂಮಿಯನ್ನು ಭೂಹೀನರಿಗೆ ಹಂಚಬೇಕು. ಕಸ್ತೂರಿ ರಂಗನ್ ವರದಿ ರದ್ದುಗೊಳಿಸಬೇಕು.

ಪಶ್ಚಿಮ ಘಟ್ಟದಲ್ಲಿ ಪ್ರವಾಸೋದ್ಯಮಕ್ಕಾಗಿ ಪರಿಸರ ನಾಶ ನಿಲ್ಲಿಸಬೇಕು. ನಿರುದ್ಯೋಗಿ ಯುವ ಜನಾಂಗಕ್ಕೆ ಅವರ ಅರ್ಹತೆಗೆ ತಕ್ಕಂತೆ ಸರಕಾರಿ ಉದ್ಯೋಗ ಕೊಡಬೇಕು, ಮುಖ್ಯವಾಹಿನಿಗೆ ಬಂದ 15 ದಿನಗಳೊಳಗೆ ನಮ್ಮ ಎಲ್ಲ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ರೀತಿಯ ಚಿಕಿತ್ಸೆ ಕೊಡಿಸಬೇಕು’ ಎಂಬುದು ಸೇರಿದಂತೆ 18 ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಬಿಗಿ ಬಂದೋಬಸ್ತ್: ಶೃಂಗೇರಿ ಸಮೀಪದ ಕಡೆಕಲ್ಲು ಮೂಲಕ ಬಾಳೆಹೊನ್ನೂರು ಕಡೆಯಿಂದ ಚಿಕ್ಕಮಗಳೂರಿಗೆ ಆರು ಮಂದಿ ನಕ್ಸಲರನ್ನು ಮೂರ್ನಾಲ್ಕು ವಾಹನಗಳಲ್ಲಿ ಪೊಲೀಸ್ ಭದ್ರತೆಯೊಂದಿಗೆ ಬೇಲೂರು ರಸ್ತೆಯ ಮೂಲಕ ಬೆಂಗಳೂರಿಗೆ ಸಂಜೆ ಕರೆ ತರಲಾಯಿತು. ಈ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಅದರಲ್ಲೂ ಸಿಎಂ ಗೃಹ ಕಚೇರಿ ಪ್ರವೇಶಿಸುವ ಮುಖ್ಯ ರಸ್ತೆಗಳನ್ನು ಕೆಲ ಕಾಲ ಬಂದ್ ಮಾಡಲಾಗಿತ್ತು. ಇದರಿಂದ ವಾಹನ ಸವಾರರು ರಸ್ತೆಯಲ್ಲಿಯೇ ಸಾಲು ಸಾಲಾಗಿ ನಿಂತಿದ್ದ ದೃಶ್ಯ ಕಂಡಿತು.

ಈ ಸಂದರ್ಭದಲ್ಲಿ ‘ನಕ್ಸಲ್ ಶರಣಾಗತಿ ಮತ್ತು ಪುನರ್ ವಸತಿ ಸಮಿತಿ’ ಸದಸ್ಯರಾದ ಡಾ.ಬಂಜಗೆರೆ ಜಯಪ್ರಕಾಶ್, ಪಾರ್ವತೀಶ ಬಿಳಿದಾಳೆ, ಕೆ.ಪಿ.ಶ್ರೀಪಾಲ್, ‘ಶಾಂತಿಗಾಗಿ ನಾಗರಿಕ ವೇದಿಕೆ’ಯ ಪ್ರೊ. ನಗರಗೆರೆ ರಮೇಶ್, ಪ್ರೊ.ವಿ.ಎಸ್.ಶ್ರೀಧರ್, ನೂರ್ ಶ್ರೀಧರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಪೊಲೀಸರ ವಶಕ್ಕೆ: ಶರಣಾಗಿರುವ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಆರು ಮಂದಿ ನಕ್ಸಲೀಯರನ್ನು ವಶಕ್ಕೆ ಪಡೆದ ಪೊಲೀಸರು, ಆಯಾ ಪ್ರಕರಣಗಳಿಗೆ ಸಂಬಂಧಿಸಿದ ವ್ಯಾಪ್ತಿಯ ನ್ಯಾಯಾಲಯಗಳಲ್ಲಿ ಗುರುವಾರ (ಜ.9) ಹಾಜರುಪಡಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ರಾಜ್ಯ ಸರಕಾರ ಘೋಷಿಸಿದ್ದ ನಕ್ಸಲ್ ಶರಣಾಗತಿ ಪ್ಯಾಕೇಜ್ ಅಡಿಯಲ್ಲಿ ಹಾಗಲಗಂಚಿ ವೆಂಕಟೇಶ್, ಮಲ್ಲಿಕಾ, ಹೊರ್ಲೆ ಜಯ, ಸಿರಿಮನೆ ನಾಗರಾಜ್, ನೂರ್ ಶ್ರೀಧರ್, ನೀಲಗುಳಿ ಪದ್ಮನಾಭ, ಪರಶುರಾಮ, ಭಾರತಿ, ಕನ್ಯಾಕುಮಾರಿ, ಶಿವು, ಚನ್ನಮ್ಮ ಸೇರಿ ಒಟ್ಟು 14 ಮಂದಿ ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಮರಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News