ಆಶಾ ಕಾರ್ಯಕರ್ತೆಯರಿಗೆ 9,500 ರೂ. ಮುಂಗಡವಾಗಿ ನೀಡಲು ಸಿದ್ಧ : ದಿನೇಶ್ ಗುಂಡೂರಾವ್

Update: 2025-01-08 16:54 GMT

ಬೆಂಗಳೂರು: ಆಶಾ ಕಾರ್ಯಕರ್ತೆಯರಿಗೆ ಪ್ರಸ್ತುತ ನೀಡುತ್ತಿರುವ 8 ಸಾವಿರ ರೂ. ಖಚಿತ ಗೌರವಧನ ಬದಲಾಗಿ 9,500 ರೂಪಾಯಿಗಳನ್ನು ಮುಂಗಡವಾಗಿ ನೀಡಲು ಸರಕಾರ ಸಿದ್ಧ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬುಧವಾರ ಇಲ್ಲಿನ ಫ್ರೀಡಂ ಪಾರ್ಕ್‍ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಮುಷ್ಕರ ಕೈ ಬಿಟ್ಟು ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸಹಕಾರ ನೀಡಬೇಕು. ಹೆಚ್ಚಿನ ಪ್ರೋತ್ಸಾಹಧನ ಕೇಂದ್ರ ಸರಕಾರದ ಅನುದಾನದ ಮೇಲೆ ಒದಗಿಸಲಾಗುತ್ತಿದೆ. ಆರ್.ಸಿ.ಎಚ್ ಪೊರ್ಟಲ್ ನಲ್ಲಿ ಆಶಾ ಕಾರ್ಯಕರ್ತೆಯರ ಕಾರ್ಯಚಟುವಟುಕೆಗಳ ಆಧಾರದ ಮೇಲೆ ಪ್ರೋತ್ಸಾಹಧನ ಲಭ್ಯವಾಗುವಂತದ್ದು ಎಂದರು.

ಪ್ರಸ್ತುತ ಗೌರವಧನ ಹಾಗೂ ಪ್ರೋತ್ಸಾಹಧನ ಸೇರಿ ಸರಾಸರಿ ಒಬ್ಬ ಆಶಾ ಕಾರ್ಯಕರ್ತೆಗೆ ಮಾಸಿಕ 9,500 ರೂ. ಪಾವತಿ ಮಾಡಲಾಗುತ್ತಿದೆ. ಇದನ್ನು ಮುಂಗಡವಾಗಿ ಆಶಾ ಕಾರ್ಯಕರ್ತೆಯರಿಗೆ ಒದಗಿಸಲು ಸಿದ್ಧ. ಆದರೆ ಗೌರವಧನದ ಹೊರತಾಗಿ ಆಶಾ ಕಾರ್ಯಕರ್ತೆಯರಿಗೆ ಲಭ್ಯವಾಗುತ್ತಿರುವ ಪ್ರೋತ್ಸಾಹಧನವನ್ನೂ ಮಾಸಿಕ ವೇತನದ ರೂಪದಲ್ಲಿ ನಿಗದಿಪಡಿಸಿ ನೀಡುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ ಎಂದು ಅವರು ತಿಳಿಸಿದರು.

ಮುಂಬರುವ ರಾಜ್ಯ ಬಜೆಟ್‍ನಲ್ಲಿ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು. ರಾಜ್ಯ ಸರಕಾರದಿಂದ ನೀಡುತ್ತಿರುವ ಗೌರವಧನ ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಸಕಾರಾತ್ಮಕ ಚಿಂತನೆ ಹೊಂದಿದ್ದಾರೆ. ಈ ಬಾರಿಯ ಬಜೆಟ್‍ನಲ್ಲಿ ಈ ಬಗ್ಗೆ ನಿರ್ಧಾರ ಹೊರಬೀಳಲಿದೆ. ಹೀಗಾಗಿ ಆಶಾ ಕಾರ್ಯಕರ್ತೆಯರು ಮುಷ್ಕರ ಕೈ ಬಿಡಬೇಕು ಎಂದು ಅವರು ಮನವಿ ಮಾಡಿದರು.

ಇನ್ನು ರಜೆಗಳನ್ನು ಕೇಳುವುದು ಆಶಾ ಕಾರ್ಯಕರ್ತೆಯರ ಹಕ್ಕು. ಈ ನಿಟ್ಟಿನಲ್ಲಿ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ದಿನೇಶ್ ಗುಂಡೂರಾವ್ ಭರವಸೆ ನೀಡಿದರು.

ಬೇಡಿಕೆ ಈಡೇರುವವರೆಗೆ ಮುಷ್ಕರ ವಾಪಾಸ್ ಇಲ್ಲ: ಸಚಿವರ ಭೇಟಿ ನಂತರವೂ ಸಂಘದ ಮುಖಂಡರು ಸಭೆ ನಡೆಸಿದ್ದು, ಈಗಾಗಲೇ ಈ ಎಲ್ಲ ಸಮಸ್ಯೆಗಳ ಕುರಿತು, ವಿವಿಧ ಹಂತದಲ್ಲಿ 16ಕ್ಕೂ ಹೆಚ್ಚು ಸಭೆಗಳು ನಡೆದಿವೆ. ಆದರೆ ಈ ಸಮಸ್ಯೆಗಳು ಬಗೆಹರಿದಿಲ್ಲ. ಅಲ್ಲದೇ ನಿಶ್ಚಿತವಾಗಿ 15ಸಾವಿರ ರೂ.ಗೌರವಧನವನ್ನು ನಿಗದಿ ಮಾಡಬೇಕು. ಇದನ್ನು ಒಪ್ಪುವವರೆಗೂ ಮುಷ್ಕರ ಮುಂದುವರೆಯಲಿದೆ ಎಂದು ನಿರ್ಧರಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News