ಮಂಡ್ಯ ಹೊರ ವರ್ತುಲ ರಸ್ತೆ ಯೋಜನೆ, ಬೈಪಾಸ್ ಅಭಿವೃದ್ಧಿ; ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕುಮಾರಸ್ವಾಮಿ ಮನವಿ

Update: 2025-01-08 12:18 GMT

ಹೊಸದಿಲ್ಲಿ : ರಾಜ್ಯದ ವಿವಿಧ ಹೆದ್ದಾರಿ ಯೋಜನೆಗಳ ಬಗ್ಗೆ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಅವರನ್ನು ಬುಧವಾರ ಭೇಟಿಯಾಗಿ ಚರ್ಚೆ ನಡೆಸಿದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ, ಮಂಡ್ಯ ಹೊರ ವರ್ತುಲ ರಸ್ತೆ ಯೋಜನೆ, ಬೈಪಾಸ್ ಅಭಿವೃದ್ಧಿ ಸೇರಿದಂತೆ ಹಲವಾರು ಮನವಿಗಳನ್ನು ಸಲ್ಲಿಸಿ ಆದಷ್ಟು ಬೇಗ ಕ್ರಮ ವಹಿಸುವಂತೆ ಕೋರಿದರು.

ರಾಜ್ಯದಲ್ಲಿ ಹಲವಾರು ಹೆದ್ದಾರಿ ಯೋಜನೆಗಳ ಅಭಿವೃದ್ಧಿ ಆಗಬೇಕಿದ್ದು, ಆ ಬಗ್ಗೆ ಕ್ರಮ ವಹಿಸಬೇಕು ಎಂದು ಹತ್ತಕ್ಕೂ ಹೆಚ್ಚು ಯೋಜನೆಗಳ ಮನವಿ ಪತ್ರಗಳನ್ನು ಕುಮಾರಸ್ವಾಮಿ ಸಲ್ಲಿಸಿದರು. ಈ ಪೈಕಿ ಕೆಲ ಯೋಜನೆಗಳ ಬಗ್ಗೆ ತಕ್ಷಣವೇ ಖುದ್ದಾಗಿ ಗಮನ ಹರಿಸುವುದಾಗಿ ಗಡ್ಕರಿ ಭರವಸೆ ನೀಡಿದರು.

ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು ಮುಂತಾದ ಜಿಲ್ಲೆಗಳ ಹೆದ್ದಾರಿಗಳ ಅಭಿವೃದ್ಧಿ ಬಗ್ಗೆ ಸಾರಿಗೆ ಸಚಿವರ ಜತೆ ಕುಮಾರಸ್ವಾಮಿ ಸಮಾಲೋಚನೆ ನಡೆಸಿದರು. ನಮ್ಮ ಮನವಿಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ ನಿತಿನ್ ಗಡ್ಕರಿ, ಎಲ್ಲ ಯೋಜನೆಗಳ ಬಗ್ಗೆ ಖುದ್ದು ಗಮನ ಹರಿಸುವುದಾಗಿ ಭರವಸೆ ನೀಡಿದರು ಎಂಬುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಮಂಡ್ಯದ ಹೊರ ವರ್ತುಲ ರಸ್ತೆ: ಮಂಡ್ಯ ಹೆದ್ದಾರಿಯ ಬೈಪಾಸ್ ರಸ್ತೆ ಅಗಲೀಕರಣ ಮಾಡುವುದು, ಅದರ ವೈಟ್ ಟ್ಯಾಪಿಂಗ್ ಹಾಗೂ ಎನ್‍ಎಚ್-275ರಲ್ಲಿರುವ ಮಂಡ್ಯ ನಗರದ ಎಲ್ಲ ಜಂಕ್ಷನ್ ಗಳು, ಪಾದಚಾರಿ ಮಾರ್ಗಗಳನ್ನೂ ಅಭಿವೃದ್ಧಿ ಮಾಡಬೇಕು ಎಂದು ಕುಮಾರಸ್ವಾಮಿ ಕೋರಿದರು.

ಮಂಡ್ಯ ಹೆದ್ದಾರಿಯ ಬೈಪಾಸ್ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಹಳ್ಳದಿಣ್ಣೆ ಬಿದ್ದು ವಾಹನ ಸವಾರರಿಗೆ ಬಹಳಷ್ಟು ತೊಂದರೆ ಆಗಿದೆ. ರಾತ್ರಿ ಸಮಯದಲ್ಲಿ ಈ ರಸ್ತೆಯಲ್ಲಿ ಸಂಚಾರ ಮಾಡುವುದು ಅಪಾಯಕಾರಿ ಆಗಿದೆ ಎಂದು ಗಡ್ಕರಿ ಅವರಿಗೆ ಮನವರಿಕೆ ಮಾಡಿಕೊಟ್ಟ ಕುಮಾರಸ್ವಾಮಿ, ಜೇವರ್ಗಿ-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ (ಎನ್‍ಎಚ್-150ಎ)ಯಲ್ಲಿನ ಪಾಂಡವಪುರ ಪಟ್ಟಣ, ಕಿರಂಗೂರು ಬಳಿಯ ಹೆದ್ದಾರಿ ಅಭಿವೃದ್ಧಿ ಮಾಡುವ ಬಗ್ಗೆಯೂ ಚರ್ಚೆ ನಡೆಸಿದರು.

ಆಂಧ್ರ ಪ್ರದೇಶದ ಕುಪ್ಪಂ-ಬಂಗಾರಪೇಟೆ-ಕೋಲಾರ-ಚಿಂತಾಮಣಿ, ಚಿಂತಾಮಣಿಯ ಗಜಾನನ ಸರ್ಕಲ್-ಚೇಳೂರು, ರಾಷ್ಟ್ರೀಯ ಹೆದ್ದಾರಿ ಎನ್‍ಎಚ್-75ರಿಂದ ಹೊಸಕೋಟೆ-ಎಚ್.ಕ್ರಾಸ್-ಚಿಂತಾಮಣಿ ನಡುವೆ ಸಂಪರ್ಕ ಕಲ್ಪಿಸುವ ಎನ್‍ಎಚ್-69, ಎನ್‍ಎಚ್-42ರಿಂದ ಹೊಸಕೋಟೆ-ಗೌನಿಪಲ್ಲಿ-ಶ್ರೀನಿವಾಸಪುರ ಮೂಲಕ ಎನ್‍ಎಚ್-75ಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಯೋಜನೆಗಳ ಬಗ್ಗೆಯೂ ಅವರು ನಿತಿನ್ ಗಡ್ಕರಿಯ ಗಮನ ಸೆಳೆದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News