75,509 ಕೋಟಿ ರೂ.ʼಗ್ಯಾರೆಂಟಿʼಗೆ ಬಿಡುಗಡೆ, 5 ವರ್ಷ ಯೋಜನೆ ನಿಲ್ಲಲ್ಲ : ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಪ್ರಸಕ್ತ ಆರ್ಥಿಕ ಸಾಲಿನ ಫೆಬ್ರವರಿ ಅಂತ್ಯದ ವರೆಗೆ ಗ್ಯಾರಂಟಿ ಯೋಜನೆಗಳಿಗೆ 75,509 ಕೋಟಿ ರೂ.ಹಣ ಬಿಡುಗಡೆ ಮಾಡಲಾಗಿದೆ. ಆದರೂ ಸರಕಾರ ದಿವಾಳಿಯಾಗಿಲ್ಲ, ಮುಂದಿನ 5 ವರ್ಷಗಳ ವರೆಗೂ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳದೆ ಜನರಿಗೆ ತಲುಪುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಚರ್ಚೆಯಲ್ಲಿ ಮಾತನಾಡಿದ ಅವರು, ಗ್ಯಾರೆÀಂಟಿ ಯೋಜನೆಗಳನ್ನು ನೀವು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಕಲು ಮಾಡಿದ್ದೀರಿ. ವಿರೋಧ ಮಾಡುವುದಾದರೆ ನಕಲು ಏಕೆ ಮಾಡಬೇಕಿತ್ತು. ಸತ್ಯ ಯಾವಾಗಲೂ ಕಹಿಯಾಗಿರುತ್ತದೆ.ಆದರೆ ನಾವು ವಾಸ್ತವವನ್ನು ಹೇಳುತ್ತಿದ್ದೇವೆ ಎಂದರು.
ಜನವರಿಯಲ್ಲಿ ಆಂಧ್ರಪ್ರದೇಶದ ಚಂದ್ರಬಾಬು ನಾಯ್ದು ಅವರ ಸರಕಾರದ ಮಂತ್ರಿಗಳು ಹಾಗೂ ಅಧಿಕಾರಿಗಳು ಗ್ಯಾರೆಂಟಿ ಯೋಜನೆಗಳ ಕುರಿತು ಅಧ್ಯಯನ ಮಾಡಿ ಹೋಗಿದ್ದಾರೆ. ಸಚಿವ ರಾಮಲಿಂಗಾರೆಡ್ಡಿ ಹಾಗೂ ನನ್ನನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಫೆಬ್ರವರಿಯಲ್ಲಿ ಮಹಾರಾಷ್ಟ್ರದ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್, ಶಕ್ತಿ ಯೋಜನೆ ಬಗ್ಗೆ ಚರ್ಚಿಸಿ ತೆರಳಿದ್ದಾರೆ. ಅಲ್ಲಿರುವುದು ಬಿಜೆಪಿ ಸರಕಾರ.ಇನ್ನೂ ಮಾರ್ಚ್‍ನಲ್ಲಿ ಕೇರಳದಿಂದ ಸಚಿವರು ಬಂದು ಅಧ್ಯಯನ ಮಾಡಿ ಹೋದರು. ಇವರೆಲ್ಲಾ ಸುಮ್ಮನೆ ಬಂದು ಹೋಗುತ್ತಾರೆಯೇ? ಎಂದು ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದರು.
ಕೇಂದ್ರ ಸರಕಾರದ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ ಅಧ್ಯಕ್ಷರೂ ಆದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ಸಚಿವ ಜಿತೇಂದ್ರ ಸಿಂಗ್ ಪ್ರಶಂಸೆಯ ವರದಿಯನ್ನು ಕೇಂದ್ರ ಸರಕಾರಕ್ಕೆ ಕೊಟ್ಟಿದ್ದಾರೆ. ಈ ಎರಡೂ ವರದಿಗಳು ಸರಕಾರಕ್ಕೆ ಉಪಯುಕ್ತವಾಗಿದ್ದರೂ ಮೊಸರಲ್ಲಿ ಕಲ್ಲು ಹುಡುಕುತ್ತಿದ್ದೀರಿ. ನಿಮಗೆ ಎಷ್ಟು ಹುಡುಕಿದರೂ ಮೊಸರಲ್ಲಿ ಕಲ್ಲು ಸಿಗುವುದಿಲ್ಲ. ನೀವು ಮಾಡುತ್ತಿರುವುದು ಇದೊಂದು ರಾಜಕೀಯ ಪ್ರೇರಿತ ಕೆಲಸ. ಈಗಲಾದರೂ ಸಕಾರಾತ್ಮಕವಾಗಿ ಟೀಕೆ ಮಾಡಬೇಕೆಂದು ಸಿದ್ದರಾಮಯ್ಯ ಹೇಳಿದರು.
ಲೋಕಸಭಾ ಚುನಾವಣೆ ನಂತರದಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುವುದು ಎಂದು ಸುಳ್ಳು ಆರೋಪ, ಅಪಪ್ರಚಾರ ಮಾಡಲಾಯಿತು. ಜನರಿಗೆ ಈ ಕಾರ್ಯಕ್ರಮಗಳ ಸತ್ಯಾಸತ್ಯತೆ ಗೊತ್ತಿದೆ. ಫಲಾನುಭವಿಗಳಿಗೆ ಇದರಿಂದ ಪ್ರಯೋಜನವಾಗಿದ್ದು, 2023 ಜೂನ್ 11 ರಿಂದ 410 ಕೋಟಿ ಜನ ಶಕ್ತಿ ಯೋಜನೆಯಡಿ ಓಡಾಡಿದ್ದಾರೆ. ನೀವು ಎಷ್ಟೇ ಸುಳ್ಳು ಹೇಳಿದರೂ ಉಪಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಸೋತಿದ್ದೀರಿ ಎಂದು ಟೀಕಿಸಿದರು.
ನಿಮ್ಮ ಟೀಕೆ, ಆಪಾದನೆಗಳು ಮಾಡಿದ ನಂತರ ಉಪಚುನಾವಣೆಗಳು ನಡೆದಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಗೆದ್ದಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ 25 ಸಾವಿರಕ್ಕೂ ಹೆಚ್ಚು ಅಂತರದಿಂದ ಗೆದ್ದಿದ್ದೇವೆ. ಶಿಗ್ಗಾಂವಿ ಕ್ಷೇತ್ರದಲ್ಲಿ 13 ಸಾವಿರ ಅಂತರದಿಂದ ಹಾಗೂ ಸಂಡೂರು ಕ್ಷೇತ್ರದಲ್ಲಿ 9 ಸಾವಿರ ಅಂತರದಲ್ಲಿ ಗೆದ್ದಿದ್ದೇವೆ. ಮೂರೂ ಕಡೆ ಮಕಾಡೆ ಮಲಗಿದಿರಿ ನೀವು. ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸಿದರೆ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ದೇಶದ 100 ಕೋಟಿ ಜನರಿಗೆ ಕೊಳ್ಳುವ ಆಯ್ಕೆಗಳೇ ಇಲ್ಲ ಎಂದು ವರದಿ ಬಂದಿತ್ತು. 20.5 ಕೋಟಿ ಕುಟುಂಬಗಳು ಅಂದರೆ ನೂರು ಕೋಟಿ ಜನರ ವಾರ್ಷಿಕ ಆದಾಯ 87000 ರೂಪಾಯಿಗಿಂತ ಕಡಿಮೆ ಇದೆ ಎನ್ನುವ ವರದಿ ಬಂದಿದೆ. ಅಸಮಾನತೆ ಅಷ್ಟರ ಮಟ್ಟಿಗೆ ಇದೆ. ದೇಶದಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಇರುವವರೆಗೆ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಗುವುದಿಲ್ಲ.
ಕೊಳ್ಳುವ ಶಕ್ತಿಯನ್ನು ಹೆಚ್ಚು ಮಾಡುವ ಸಾರ್ವತ್ರಿಕ ಮೂಲ ಆದಾಯ ತತ್ವ ಅಗತ್ಯ. ಆರ್ಥಿಕ, ಸಾಮಾಜಿಕ ಶಕ್ತಿಯನ್ನು ಜನರಲ್ಲಿ ತುಂಬಿದರೆ ಜನರ ಹಾಗೂ ರಾಜ್ಯದ ಅಭಿವೃದ್ಧಿ ಸಾಧ್ಯ. ನಾವು ಸಮಾಜದ ಶೇ.90ರಷ್ಟು ಜನರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬಿದ್ದೇವೆ. ನೀವು ಸಮಾಜದ ಶೇ.10ರಷ್ಟು ಜನರಿಗೆ ಶಕ್ತಿ ತುಂಬುತ್ತಿದ್ದೀರಿ. ಶೇ.94ರಲ್ಲಿ ಶೇ.34ರಷ್ಟು ಇದ್ದ ಶ್ರೀಮಂತರ ಸಂಖ್ಯೆ ಈಗ ಶೇ.57ಗೆ ಹೆಚ್ಚಾಗಿದೆ. ಶೇ.50 ಜನರಿಗೆ ಇರುವ ಆರ್ಥಿಕ ಶಕ್ತಿ ಶೇ.15ಗೆ ಕುಸಿದಿದೆ. ಇದು ಆತಂಕಕಾರಿ ಸಂಗತಿ ಅಲ್ಲವೇ? ಶ್ರೀಮಂತರು ಶ್ರೀಮಂತರಾದರೆ, ಬಡವರು ಬಡವರಾಗುತ್ತಿದ್ದಾರೆ.ಈ ಅಸಮಾನತೆಯನ್ನು ತೊಡೆದು ಹಾಕಲು ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಅಂಕಿಅಂಶ ಪ್ರದರ್ಶಿಸಿದರು.
ಗ್ಯಾರಂಟಿ ಯೋಜನೆಗಳಿಂದ ಬಡವರಲ್ಲಿ ಆತ್ಮವಿಶ್ವಾಸ ಹೆಚ್ಚಿದ್ದು ಮಾತ್ರವಲ್ಲ, ಸ್ವಾಭಿಮಾನ ಹೆಚ್ಚುತ್ತಿದೆ. ಜನರು ಸಾಮಾಜಿಕವಾಗಿ ಆರ್ಥಿಕವಾಗಿ ನಿರ್ಭಯವಾಗಿ, ಅವರ ಬದುಕು ಸುಧಾರಣೆಯಾಗಿದೆ. ಸಮಾನತೆಯ ಭಾವ ಉಂಟಾಗುತ್ತಿದೆ ಎಂದ ಅವರು, ವೈರುಧ್ಯತೆ ಇರುವ ಸಮಾಜಕ್ಕೆ ನಾವು ಕಾಲಿಡುತ್ತಿದ್ದು, ರಾಜಕೀಯ ಸ್ವಾತಂತ್ರ್ಯ ದೊರೆತರೆ ಸಾಲದು, ನಮಗೆ ಆರ್ಥಿಕ ಸಾಮಾಜಿಕ ಸ್ವಾತಂತ್ಯ ಸಿಕ್ಕಿಲ್ಲ. ಅದು ಸಿಗಬೇಕಾದರೆ ಕಟ್ಟ ಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ಕೊಂಡೊಯ್ಯುವ ಕೆಲಸವಾಗಬೇಕು ಎಂದು ಅಂಬೇಡ್ಕರ್ ಹೇಳಿದ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.
32 ಸಾವಿರ ಕೋಟಿ ಬಿಲ್ ಬಾಕಿ, ವಾಗ್ವಾದ: ಬಿಜೆಪಿ ಸರಕಾರದ ಬಳುವಳಿಯಿಂದಾಗಿ 32 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳ ಬಿಲ್ ಬಾಕಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಗೆ ತಿಳಿಸಿದಾಗ ಕೆಲಕಾಲ ಆಡಳಿತರೂಢ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ಜರುಗಿತು.
ಬಿಜೆಪಿ ಸರಕಾರ ಅವಧಿಯಲ್ಲಿ ಹಣವಿಲ್ಲದಿದ್ದರೂ 2,75,686 ಕಾಮಗಾರಿಗಳನ್ನು ಮಂಜೂರು ಮಾಡಿದ್ದಾರೆ. ಅಲ್ಲದೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 1,66,426 ಕೋಟಿ ರೂ. ಅನುಮೋದನೆ ನೀಡಿದ್ದಾರೆ. ಹೀಗಾಗಿ ನೀರಾವರಿ, ಇಂಧನ, ನಗರಾಭಿವೃದ್ಧಿ, ಬೆಂಗಳೂರು ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ 32 ಸಾವಿರ ಕೋಟಿ ರೂ. ಬಿಲ್ ಬಾಕಿ ಇದೆ. ಇದು ಬಿಜೆಪಿ ಸರಕಾರ ಬಳುವಳಿ ಎಂದು ಆರೋಪಿಸಿದರು.
ಇದರಿಂದಾಗಿ ನಾವು ಕಷ್ಟ ಅನುಭವಿಸಬೇಕು. ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವಾಗ ನಾವೆಷ್ಟು ಬಿಟ್ಟು ಹೋಗಿದ್ದೆವು ಎಂಬುದನ್ನು ಹೇಳುವುದಾಗಿ ತಿಳಿಸಿದರು. 15ನೆ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ್ದ 11,495 ಕೋಟಿ ರೂ. ಕರ್ನಾಟಕಕ್ಕೆ ಬರಬೇಕಿತ್ತು. ಬಿಜೆಪಿ ಅಧಿಕಾರದಲ್ಲಿದ್ದಾಗ ಕೇಳಲೇ ಇಲ್ಲ. 1 ರೂ. ಕೂಡ ಬರಲಿಲ್ಲ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮೂರು ಬಾರಿ ಭೇಟಿಯಾಗಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಬಿಜೆಪಿಯವರು ಅದರ ಬಗ್ಗೆ ಮಾತನಾಡಲಿಲ್ಲ. ಕರ್ನಾಟಕಕ್ಕೆ ಅನ್ಯಾಯವಾದಾಗ ರಾಜ್ಯದ ಪರ ದನಿಯೆತ್ತಿ ನ್ಯಾಯಯುತವಾಗಿ ಬರಬೇಕಾದ್ದನ್ನು ಕೇಂದ್ರದಿಂದ ಕೇಳಲಿಲ್ಲ. ಏನೂ ಕೇಳದೆ ಅನುದಾನ ಇಲ್ಲ ಎಂದರೆ ಹೇಗೆ ಎಂದು ಬಿಜೆಪಿ ಶಾಸಕರನ್ನು ತರಾಟೆಗೆ ತೆಗೆದುಕೊಂಡರು.