ಜಾತಿ ಹೆಸರಿನಲ್ಲಿ ಅಧ್ಯಕ್ಷನಾಗಿದ್ದು ನೀನು: ವಿಜಯೇಂದ್ರಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

ಸಿದ್ದರಾಮಯ್ಯ/ವಿಜಯೇಂದ್ರ
ಬೆಂಗಳೂರು : ಜಾತಿ ಹೆಸರಿನಲ್ಲಿ ಅಧ್ಯಕ್ಷ ಆಗಿದ್ದು, ಅದನ್ನು ಉಳಿಸಿಕೊಳ್ಳಲು ಜಾತಿ ಸಮಾವೇಶ ಮಾಡುತ್ತಿರುವುದು ನೀನು ಎಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀರುಗೇಟು ನೀಡಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಚರ್ಚೆಯಲ್ಲಿ ಮಾತನಾಡಿದ ಅವರು, ಎರಡು ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು. ಆದರೆ, ಒಮ್ಮೆಯೂ ಜನಾದೇಶದ ಮೂಲಕ ಸರಕಾರ ರಚನೆ ಆಗಿಲ್ಲ. ಆಪರೇಷನ್ ಕಮಲ ಮಾಡಿಯೇ ಅಧಿಕಾರಕ್ಕೆ ಬಂದರು.ಆದರೆ, ನಮಗೆ ಜನರು ಆರ್ಶಿವಾದ ಮಾಡಿದ್ದಾರೆ ಎಂದು ಹೇಳಿದರು.
ಈ ವೇಳೆ ಬಿ.ವೈ.ವಿಜಯೇಂದ್ರ ಮಧ್ಯಪ್ರವೇಶಿಸಿ, ಉಪಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರಯಲ್ಲಿ ಮುಖ್ಯಮಂತ್ರಿ ಅವರು ಸಮುದಾಯದ ಬಳಿ ತೆರಳಿ ನೀವು ಮತ ನೀಡುವುದಿಲ್ಲ ಎಂದರೆ ಮುಖ್ಯಮಂತ್ರಿ ಆಗಿ ಮುಂದುವರೆಯುವುದಿಲ್ಲ ಎಂದಿದ್ದರು ಎಂದು ಟೀಕಿಸಿದರು.
ಆಗ ಪ್ರತ್ಯೋತ್ತರ ನೀಡಿದ ಸಿದ್ದರಾಮಯ್ಯ, ಲಿಂಗಾಯುತ ಸಮಾವೇಶ, ಜಾತಿ ಸಮಾವೇಶ ಮಾಡುವ ಮೂಲಕ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ.ಅದರಲ್ಲೂ ಜಾತಿ ಹೆಸರಿನಲ್ಲಿ ಮುಖ್ಯಮಂತ್ರಿ ಆಗಿದ್ದು ಯಡಿಯೂರಪ್ಪ, ಅಧ್ಯಕ್ಷ ಆಗಿದ್ದು ನೀನು ಎಂದು ವಾಗ್ದಾಳಿ ನಡೆಸಿದರು.