ಎರಡನೆ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಮುಷ್ಕರ

Update: 2025-01-08 16:55 GMT

ಬೆಂಗಳೂರು : ಗೌರವಧನ ಹೆಚ್ಚಳ ಸೇರಿದಂತೆ ಇತರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ಇಲ್ಲಿನ ಫ್ರೀಡಂ ಪಾರ್ಕ್‍ನಲ್ಲಿ ಶುರುವಾದ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಮುಷ್ಕರ ಎರಡನೆಯ ದಿನವೂ ಮುಂದುವರೆದಿದೆ. ಬುಧವಾರ ಫ್ರೀಡಂಪಾರ್ಕ್ ಕಿಕ್ಕಿರಿದು ತುಂಬಿದಲ್ಲದೇ ಸುತ್ತಲ ರಸ್ತೆಗಳು, ಖಾಲಿ ಜಾಗಗಳು ಅಶಾ ಕಾರ್ಯಕರ್ತೆಯರಿಂದ ಭರ್ತಿಯಾಗಿತ್ತು.

ಆಶಾ ಕಾರ್ಯಕರ್ತೆಯರು ಮುಷ್ಕರದಲ್ಲಿ ಭಾಗವಹಿಸಿದರೆ ಬೇರೆಯವರನ್ನು ನೇಮಿಸಲಾಗುವುದು ಎಂದು ಆರೋಗ್ಯ ಇಲಾಖೆ ಬೆದರಿಕೆ ಹಾಕಿದ್ದರೂ, ಇದಕ್ಕೆ ಬಗ್ಗದೆ 25ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರು ಕೊರೆಯುವ ಚಳಿಯ ನಡುವೆಯೂ ರಾತ್ರಿ ರಸ್ತೆಯಲ್ಲಿಯೇ ಮಲಗಿ, ತಮ್ಮ ಹೋರಾಟವನ್ನು ಮುಂದುವರೆಸುತ್ತಿದ್ದಾರೆ.

ಆಶಾಗಳ ಹೋರಾಟ ಬೆಂಬಲಿಸಿ ಮಾತನಾಡಿದ ವಿಶ್ರಾಂತ ಲೋಕಾಯುಕ್ತ ಎನ್. ಸಂತೋಷ್‌ ಹೆಗ್ಡೆ, ಜೀವನಕ್ಕೆ ಅವಶ್ಯಕವಾದ ವೇತನವನ್ನು ಪಡೆಯುವುದು ಮಾನವನ ಹಕ್ಕಾಗಿದ್ದು, ರಾಜ್ಯ ಸರಕಾರವು ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ವೇತನವನ್ನು ನಿರಾಕರಿಸುತ್ತಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದರು.

ಜೀವನಕ್ಕೆ ಅವಶ್ಯಕವಾದದನ್ನು ವೇತನ ರೂಪದಲ್ಲಿ ಇರಲೀ ಅಥವಾ ಇನ್ಯಾವುದೇ ಯಾವುದೇ ರೂಪದಲ್ಲಿ ಕೊಡಬೇಕಾಗಿರುವುದು ಸರಕಾರದ ಮೊದಲ ಕರ್ತವ್ಯ. ಇದನ್ನು ನಿರಾಕರಿಸುವುದರೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಅವರು ಹೇಳಿದರು.

ಸರಕಾರ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವ ಬದಲು ಭರವಸೆಗಳನ್ನು ನೀಡುತ್ತಾ, ಖಜಾನೆಯಲ್ಲಿ ಹಣವಿಲ್ಲ ಎನ್ನುತ್ತಿದೆ. ಆದರೆ ಸರಕಾರ ಮಾಡುತ್ತಿರುವ ದುಂದುವೆಚ್ಚಗಳಿಗೆ ಕಡಿವಾಣ ಹಾಕಿದರೆ, ಈ ಬೇಡಿಕೆಗಳನ್ನು ಈಡೇರಿಸುವುದು ಕಷ್ಟಕರವಲ್ಲ. ರಾಜ್ಯದ ಅಶಾ ಕಾರ್ಯಕರ್ತೆಯರಲ್ಲಿ ಒಂದು ಒಗ್ಗಟ್ಟಿದೆ. ಈ ಒಗ್ಗಟ್ಟಿನ ಮೂಲಕ ಸರಕಾರಗಳಿಗೆ ಒಂದು ಸಂದೇಶವನ್ನು ನೀಡಬೇಕು ಎಂದು ಕರೆ ನೀಡಿದರು.

ರಾಜ್ಯ ಸಂಯುಕ್ತ ಆಶಾಕಾರ್ಯಕರ್ತೆಯರ ಸಂಘದ ರಾಜ್ಯ ಅಧ್ಯಕ್ಷ ಸೋಮಶೇಖರ್ ಯಾದಗಿರಿ ಮಾತನಾಡಿ, ರಾಜ್ಯ ಸರಕಾರವು ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಹೋರಾಟವನ್ನು ನಾಳೆಯು(ಜ.9) ಮುಂದುವರೆಸಲಾಗುವುದು ಎಂದರು. ಇದೇ ವೇಳೆ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎ.ಮುರಿಗೆಪ್ಪ, ಸಾಹಿತಿ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಸೇರಿದಂತೆ ಮತ್ತಿತತರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News