ಬಾಗಲಕೋಟೆಯಲ್ಲಿ ಶಸ್ತ್ರಾಸ್ತ್ರ ತರಬೇತಿ ಆಯೋಜಿಸಿದ್ದ ಶ್ರೀರಾಮ ಸೇನೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅಖಿಲ ಭಾರತ ನ್ಯಾಯವಾದಿಗಳ ಸಂಘದಿಂದ ಡಿಜಿಪಿಗೆ ಪತ್ರ

Update: 2025-01-08 09:48 GMT

ಬೆಂಗಳೂರು: ಬಾಗಲಕೋಟೆ ಜಿಲ್ಲೆಯ ತೊದಲಬಾಗಿ ಗ್ರಾಮದಲ್ಲಿ ಶಸ್ತ್ರಾಸ್ತ್ರ ತರಬೇತಿ ಆಯೋಜಿಸಿದ್ದ ಹಿಂದುತ್ವ ಸಂಘಟನೆ ಶ್ರೀರಾಮ ಸೇನೆ ಕಾರ್ಯಕರ್ತರ ವಿರುದ್ಧ ತಕ್ಷಣ ಕಾನೂನು ಕ್ರಮಗಳನ್ನು ಕೈಗೊಂಡು ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ನ್ಯಾಯವಾದಿಗಳ ಸಂಘ (AILAJ) ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಿಗೆ(ಡಿಜಿಪಿ) ಪತ್ರ ಬರೆದಿದೆ ಎಂದು thenewsminute.com ವರದಿ ಮಾಡಿದೆ.

ಬಾಗಲಕೋಟೆ ಜಿಲ್ಲೆಯ ತೊದಲಬಾಗಿ ಗ್ರಾಮದಲ್ಲಿ ಡಿ.25ರಿಂದ 29ರವರೆಗೆ ಶ್ರೀರಾಮ ಸೇನೆ ಶಸ್ತ್ರಾಸ್ತ್ರ ತರಬೇತಿ ಶಿಬಿರ ನಡೆಸಿದೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ. ಅಕ್ರಮ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಬಾಗಲಕೋಟೆ ಎಸ್ಪಿ ವೈ.ಅಮರನಾಥರೆಡ್ಡಿ ಹೇಳಿದ್ದರು.

ಈ ಹಿಂದೆ, ರಾಜ್ಯದ ಹಲವಾರು ಸ್ಥಳಗಳಲ್ಲಿ ಕೆಲವು ಬಲಪಂಥೀಯ ಸಂಘಟನೆಗಳು ಇಂತಹ ಶಿಬಿರಗಳನ್ನು ಏರ್ಪಡಿಸಿತ್ತು. ಇಂತಹ ಶಿಬಿರಗಳು ಕೋಮು ಸೌಹಾರ್ದತೆ ಕದಡುವಲ್ಲಿ, ಗೂಂಡಾಗಿರಿ ನಡೆಸುವಲ್ಲಿ, ಗುಂಪು ಹತ್ಯೆಗಳು, ಹಿಂಸಾಚಾರಕ್ಕೆ ಪ್ರಚೋದನೆ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದೆ. ಹಿರಿಯ ಪತ್ರಕರ್ತೆ ಗೌರಿ ಲಂಕೇಶ್, ಎಂಎಂ ಕಲಬುರ್ಗಿ, ಬೆಳಗಾವಿಯಲ್ಲಿ ಅರ್ಬಾಜ್ ಮುಲ್ಲಾ ಹತ್ಯೆ ಸೇರಿದಂತೆ ವಿವಿಧ ಪ್ರಕರಣಗಳಿಗೆ ಪ್ರೇರಣೆ ನೀಡಿದೆ. ಬಾಗಲಕೋಟೆ ಎಸ್ಪಿ ಅವರ ಹೇಳಿಕೆ ಸ್ವೀಕಾರಾರ್ಹವಲ್ಲ. ಈ ಕುರಿತು ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕು ಎಂದು ಅಖಿಲ ಭಾರತ ನ್ಯಾಯವಾದಿಗಳ ಸಂಘ ಡಿಜಿಪಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ.

ಶಸ್ತ್ರಾಸ್ತ್ರ ತರಬೇತಿ ಆಯೋಜಕರ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 25(ಕೆಲ ಅಪರಾಧಗಳಿಗೆ ಶಿಕ್ಷೆ) ಮತ್ತು 27 (ಶಸ್ತ್ರಾಸ್ತ್ರಗಳ ಬಳಸಿದ್ದಕ್ಕಾಗಿ ಶಿಕ್ಷೆ) ಸೆಕ್ಷನ್ 61(ಅಪರಾಧದ ಪಿತೂರಿ) ಮತ್ತು 189 (ಕಾನೂನುಬಾಹಿರ ಸಭೆ) ಮತ್ತು ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಅಖಿಲ ಭಾರತ ನ್ಯಾಯವಾದಿಗಳ ಸಂಘ ಪತ್ರದಲ್ಲಿ ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News