ಅಖಿಲ ಭಾರತ ಅಂತರ ವಿವಿ ಖೋಖೋ ಟೂರ್ನಿ: ಮಂಗಳೂರು ವಿವಿ ಚಾಂಪಿಯನ್
Update: 2025-04-12 11:34 IST

ಉಡುಪಿ: ರೋಚಕ ಫೈನಲ್ ಪಂದ್ಯಾಟದಲ್ಲಿ ಎದುರಾಳಿ ಮುಂಬೈ ವಿವಿ ತಂಡವನ್ನು 11-10ರ ಅಂತರದಿಂದ ಸೋಲಿಸಿದ ಆತಿಥೇಯ ಮಂಗಳೂರು ವಿವಿ ತಂಡವು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಶ್ರೀ ವಿಬುಧೇಶತೀರ್ಥ ಕ್ರೀಡಾಂಗಣದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಪುರುಷರ ಖೋ ಖೋ ಚಾಂಪಿಯನ್ ಶಿಪ್ ಗೆದ್ದುಕೊಂಡಿತು.
ಶುಕ್ರವಾರ ಸಂಜೆ ನಡೆದ ಸೆಮಿಫೈನಲ್ ನಲ್ಲಿ ಕಳೆದ ಸಲದ ರನ್ನರ್ ಆಪ್ ತಂಡವಾದ ಮಹಾರಾಷ್ಟ್ರದ ಡಾ.ಅಂಬೇಡ್ಕರ್ ವಿವಿಯನ್ನು ಸೋಲಿಸಿದ್ದ ಮಂಗಳೂರು ವಿವಿ ಇಂದು ಮತ್ತೊಂದು ಬಲಿಷ್ಠ ತಂಡವಾದ ಮುಂಬೈ ವಿವಿಯನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ಏರಿತು.
ಈ ಎರಡು ತಂಡಗಳು ಕಳೆದ ಬಾರಿ ಜಂಟಿಯಾಗಿ ಮೂರನೇ ಸ್ಥಾನ ಪಡೆದಿದ್ದು, ಈ ಬಾರಿ ಮಂಗಳೂರು ವಿವಿ ತಂಡವು ಮುಂಬೈ ತಂಡವನ್ನು ಹಿಮ್ಮೆಟ್ಟಿಸಿ ರಾಷ್ಟ್ರೀಯ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ.